ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್‌ರ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕುತಂತ್ರ ನಡೆಸಿದೆ ಎಂದು ಬಿಜೆಪಿ ವಿರುದ್ಧ ಮಾಜಿ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.
ಬೆಂಗಳೂರು (ಸೆ.4): ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್‌ರ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕುತಂತ್ರ ನಡೆಸಿದೆ ಎಂದು ಬಿಜೆಪಿ ವಿರುದ್ಧ ಮಾಜಿ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಡಿಕೆ ಸುರೇಶ್ ಅವರು, ರಾಜ್ಯಪಾಲರ ಮುಂದೆ ಹಳೇ ಪ್ರಕರಣಗಳು ಬಾಕಿ ಇದ್ದರೂ ಸದ್ದು ಮಾಡ್ತಿಲ್ಲ. ಕಾಂಗ್ರೆಸ್ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಸುಭದ್ರ ಸರ್ಕಾರವನ್ನು ಸಹಿಸಿಕೊಳ್ಳದೆ ಈ ರೀತಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಹೆಚ್ಚು ಮಾತಾಡಿದರೆ ವಿಜಯೇಂದ್ರಗೆ ತಕ್ಕ ಉತ್ತರ: ಡಿ.ಕೆ.ಸುರೇಶ್
ಹೆಚ್‌ಡಿ ಕುಮಾರಸ್ವಾಮಿ ದಿನಕ್ಕೊಂದು ಸುಳ್ಳು ಹೇಳುತ್ತಿದ್ದಾರೆ. ಹೊಸ ಹೊಸ ಶೈಲಿಯ ಹೇಳಿಕೆ ಕೊಡುವ ಪ್ರವೃತ್ತಿ ಅವರದ್ದು. ಅವರಿಗೆ ನೈತಿಕತೆ ಪ್ರಶ್ನೆ ಬರಲ್ಲವಾ? ಯಾಕೆಂದರೆ ಅವರ ಪ್ರಕರಣದಲ್ಲಿ ತನಿಖೆ ಆಗಿದೆ. ರಾಜೀನಾಮೆ ಕೊಡುವುದು ಬೇಡ್ವಾ?ಅವರೇ A2 ಆರೋಪಿ ಅಂತ ವರದಿಯಾಗಿದೆ. ಮೊದಲು ಅವರು ಮೊಂಡುತನ ಬಿಟ್ಟು ರಾಜೀನಾಮೆ ನೀಡಿ ಬೇರೆಯವರ ರಾಜೀನಾಮೆ ಕೇಳುವ ನೈತಿಕತೆ ಬೆಳೆಸಿಕೊಳ್ಳಬೇಕು. ಹೇಳಿಕೆಗಳನ್ನು ಹೆಂಗೆಂಗೆ ತಿರುಚಬೇಕು ಎಂಬುದನ್ನ ಕುಮಾರಸ್ವಾಮಿಯವರನ್ನು ನೋಡಿ ಕಲಿಯಬೇಕು ಎಂದು ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಚನ್ನಪಟ್ಟಣ ಉಪಚುನಾವಣೆ ವಿಚಾರ ಪ್ರಸ್ತಾಪಿಸಿದ ಅವರು, ಅಭ್ಯರ್ಥಿ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಮೂರು ಕ್ಷೇತ್ರಗಳಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನ ನಮ್ಮ ನಾಯಕತ್ವ ಕಣಕ್ಕಿಳಿಸಲಿದೆ. ಸಿಪಿವೈ ನಮ್ಮ ಪಕ್ಷದವರಲ್ಲ, ಅವರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ಪಕ್ಷ ಅವರನ್ನು ನೋಡಿದೆ. ಈಗ ಎಲ್ಲಿದ್ದಾರೆ ಅಲ್ಲಿಯೇ ಯಶಸ್ಸು ಸಿಗಲಿ. ಒಮ್ಮೆ ಸ್ವತಂತ್ರ ಅಭ್ಯರ್ಥಿ ಅಂತಾರೆ, ಇನ್ನೊಮ್ಮೆ ಜೆಡಿಎಸ್‌ಗೆ ಬಿಟ್ಟುಕೊಡ್ತೇನೆ ಅಂತಾರೆ. ಕಾಂಗ್ರೆಸ್ ಗೆ ಸಿಪಿವೈಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ವಾಲ್ಮೀಕಿ ಹಗರಣ ವಿಚಾರ ಪ್ರಸ್ತಾಪಿಸಿದ ಮಾಜಿ ಸಂಸದ ಡಿಕೆ ಸುರೇಶ್ ಅವರು, ವಾಲ್ಮೀಕಿ ಹಗರಣ ವಿರುದ್ಧ ಬಿಜೆಪಿ ಪಾದಯಾತ್ರೆ ಮಾಡಿದ್ರೆ ಮಾಡಿಕೊಳ್ಳಲಿ. ದೇವರಾಜ್ ಅರಸು ಟ್ರಕ್ ಟರ್ಮಿನಲ್ ಹಗರಣ ಸೇರಿಸಿಕೊಂಡು ಪಾದಯಾತ್ರೆ ಮಾಡಬೇಕು. ಆಗ ದೇಶದ ಜನರಿಗೆ ಗೊತ್ತಾಗುತ್ತದೆ. ಯತ್ನಾಳ್ ಹೋರಾಟಗಾರರು. ಎಲ್ಲರ ಮೇಲೂ ಹೋರಾಟ ಮಾಡಲಿ. ಅವರು ಕೊವಿಡ್ ವರದಿ ತರಿಸಿಕೊಂಡು ಓದಲಿ. ಕೇಂದ್ರ ಸಚಿವರು ಎಸ್‌ಸಿ ಎಸ್‌ಟಿ ಜಮೀನನ್ನು ಬರೆಸಿಕೊಂಡಿದ್ದು ಸೇರಿಸಿಕೊಂಡು ಪಾದಯಾತ್ರೆ ಮಾಡಲಿ ಎಂದು ಸವಾಲು ಹಾಕಿದರು.
ಕೆಲವರಿಂದ ಸಿಎಂ ಆಗುವ ಪ್ರಯತ್ನ ನಡೆಯುತ್ತಿದೆಯಲ್ಲ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದ್ಯ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಕೇಳುವುದರಲ್ಲಿ ತಪ್ಪಿಲ್ಲ. ಬಿಜೆಪಿ, ಜೆಡಿಎಸ್ ನವರು ಅವರ ಪಕ್ಷ ಉಳಿಸಿಕೊಳ್ಳಲು ಹೇಳ್ತಾರೆ. ಬಲಿಷ್ಠ ಸರ್ಕಾರವಿದೆ, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಸರ್ಕಾರದಲ್ಲಿ ಸಮರ್ಥ ನಾಯಕತ್ವವಿದೆ. ಯಾರು ಏನೇ ಪ್ರಯತ್ನ ಪಟ್ಟರೂ ಖಂಡಿತ ಕಾಂಗ್ರೆಸ್ ಸರ್ಕಾರ ಅವಧಿ ಪೂರ್ಣ ಇರುತ್ತದೆ. ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರ್ತಾರೆ. ಈ ಬಗ್ಗೆ ಡಿಸಿಎಂ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.
ಡಿಕೆ ಶಿವಕುಮಾರ ಬಗ್ಗೆ ಮಾತಾಡದಿದ್ರೆ ಕುಮಾರಸ್ವಾಮಿಗೆ ತಿಂದಿದ್ದು ಅರಗುವುದಿಲ್ಲ: ಡಿಕೆ ಸುರೇಶ್ ಕಿಡಿ
ಮುಡಾದಲ್ಲಿ ಅಕ್ರಮ ಆಗಿಲ್ಲ:
ನ್ಯಾಯಾಲಯದಲ್ಲಿ ಸ್ಪಷ್ಟವಾದ ವಾದ ಆಗಿದೆ. ಮುಡಾದಲ್ಲಿ ಯಾವುದೇ ಅಕ್ರಮ ಆಗಿಲ್ಲ. ಅದರಲ್ಲಿ ಸಿಎಂ ಪಾತ್ರ ಇಲ್ಲ. ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲು ಯಾವುದೇ ದಾಖಲೆ ಇಲ್ಲ. ರಾಜಭವನ ಕಚೇರಿ ದುರ್ಬಳಕೆ ಮಾಡುತ್ತಿದ್ದಾರೆ. ಎಷ್ಟು ಜನ ತನಿಖೆ ಎದುರಿಸಿಲ್ಲ, ಅಮಿತ್ ಶಾ, ಪ್ರಧಾನಮಂತ್ರಿ ತನಿಖೆ ಎದುರಿಸಿಲ್ಲವಾ. ನೈತಿಕತೆ ಮೇಲೆ ರಾಜೀನಾಮೆ ಯಾಕೆ ನೀಡುತ್ತಿಲ್ಲ. ಪ್ರಧಾನಮಂತ್ರಿಗಳಿಗೆ ಇಲ್ಲದ ನೈತಿಕತೆ, ಉಕ್ಕು ಮಂತ್ರಿಗಳಿಗೆ ಇಲ್ಲದ ನೈತಿಕತೆ ಸಿಎಂಗೆ ಮಾತ್ರ ಇದೆಯಾ? ಮೊದಲು ತಾವು ರಾಜೀನಾಮೆ ಕೊಟ್ಟು ನೈತಿಕತೆ ಉಳಿಸಿಕೊಳ್ಳಬೇಕು ಎಂದು ಎಚ್‌ಡಿಕೆಗೆ ತಿರುಗೇಟು ನೀಡಿದರು.