ಸಿದ್ದರಾಮಯ್ಯ ಮುಡಾ ಕೇಸ್‌ ಇಂದು ಏನಾಗುತ್ತೆ?: ಎಲ್ಲರ ಚಿತ್ತ ಹೈಕೋರ್ಟ್‌ನತ್ತ

By Kannadaprabha News  |  First Published Aug 29, 2024, 4:27 AM IST

ಮುಡಾ ಹಗರಣ ಕುರಿತ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಆದೇಶ ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಗುರುವಾರ ಮತ್ತೆ ಹೈಕೋರ್ಟ್‌ ಮುಂದೆ ವಿಚಾರಣೆಗೆ ಬರಲಿದೆ. 


ಬೆಂಗಳೂರು (ಆ.29): ಮುಡಾ ಹಗರಣ ಕುರಿತ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಆದೇಶ ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಗುರುವಾರ ಮತ್ತೆ ಹೈಕೋರ್ಟ್‌ ಮುಂದೆ ವಿಚಾರಣೆಗೆ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿ ಗುರುವಾರ ಮಧ್ಯಾಹ್ನ 2.30ಕ್ಕೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ. 

ನ್ಯಾಯಪೀಠದ ಹಿಂದಿನ ಸೂಚನೆಯಂತೆ ಅರ್ಜಿದಾರರು ಮತ್ತು ಪ್ರತಿವಾದಿಗಳ ಪರ ವಕೀಲರು ತಮ್ಮ ವಾದ ಹಾಗೂ ಪ್ರತಿವಾದವನ್ನು ಗುರುವಾರ ಪೂರ್ಣಗೊಳಿಸಬೇಕಿದೆ. ಜೊತೆಗೆ, ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರ, ರಾಜ್ಯಪಾಲರ ಕಚೇರಿಯ ಕಾರ್ಯದರ್ಶಿ, ಖಾಸಗಿ ದೂರುದಾರರಾದ ಟಿ.ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಎಸ್‌.ಪಿ. ಪ್ರದೀಪ್‌ ಕುಮಾರ್‌ ಅವರು ಮುಖ್ಯಮಂತ್ರಿಗಳ ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕಿದೆ. ಇದರಿಂದ ಪ್ರಕರಣ ಕುರಿತ ಹೈಕೋರ್ಟ್‌ ವಿಚಾರಣೆ ತೀವ್ರ ಕುತೂಹಲ ಕೆರಳಿಸಿದೆ.

Latest Videos

undefined

ಸಿಎಂಗೆ ರೀಲಿಫ್‌ ನೀಡಿದ್ದ ಕೋರ್ಟ್‌: ಆ.19ರಂದು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ಆಧರಿಸಿ ಆ.29ರ ವರೆಗೆ ಮುಖ್ಯಮಂತ್ರಿಗಳ ವಿರುದ್ಧ ಯಾವುದೇ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿತ್ತು. ಇದರಿಂದ ಪ್ರಕರಣ ಕುರಿತು ವಿಶೇಷ ತನಿಖಾ ದಳ ಅಥವಾ ಬೇರೆ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದಾಖಲಿಸಿರುವ ದೂರಿನ ಕುರಿತು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆ.20ರಂದು ಪ್ರಕಟಿಸಬೇಕಿದ್ದ ತೀರ್ಪಿಗೆ ತಾತ್ಕಾಲಿಕ ತಡೆ ಬಿದ್ದಿತು.

ಈಗ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು: ಆಗಿದ್ದೇನು?

ಅಲ್ಲದೆ, ಟಿ.ಜೆ.ಅಬ್ರಹಾಂ ಅವರು ದಾಖಲಿಸಿರುವ ದೂರಿನ ಕುರಿತಂತೆ ಮುಂದಿನ ಕ್ರಮ ಜರುಗಿಸಲು ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಅವಕಾಶ ಇಲ್ಲದಂತಾಗಿತ್ತು. ಹಾಗಾಗಿ, ಸಿದ್ದರಾಮಯ್ಯ ಅವರು ತಾತ್ಕಾಲಿಕವಾಗಿ ನಿರಾಳರಾಗಿದ್ದರು. ಗುರುವಾರ ಮತ್ತೆ ಮುಖ್ಯಮಂತ್ರಿಗಳ ಅರ್ಜಿ ಹೈಕೋರ್ಟ್‌ ಮುಂದೆ ವಿಚಾರಣೆಗೆ ಬರುತ್ತಿರುವುದರಿಂದ ಎಲ್ಲರ ಗಮನ ಹೈಕೋರ್ಟ್‌ನತ್ತ ನೆಟ್ಟಿದೆ.

click me!