ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಖುದ್ದು ಲೋಕಾಯುಕ್ತ ಪೊಲೀಸರ ಕಚೇರಿಗೆ ತೆರಳಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಎರಡು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು.
ಮೈಸೂರು (ನ.07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಖುದ್ದು ಲೋಕಾಯುಕ್ತ ಪೊಲೀಸರ ಕಚೇರಿಗೆ ತೆರಳಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಎರಡು ಗಂಟೆಗಳ ಕಾಲ ವಿಚಾರಣೆ ಎದುರಿಸಿದರು. ಮುಖ್ಯಮಂತ್ರಿಯೊಬ್ಬರು ಪ್ರಕರಣವೊಂದರಲ್ಲಿ ಲೋಕಾಯುಕ್ತ ವಿಚಾರಣೆ ಎದುರಿಸಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲಾಗಿದೆ. ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ಲೋಕಾಯುಕ್ತ ಅಧಿಕಾರಿಗಳು ಕೇಳಿದ ಸುಮಾರು 25 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಅಲ್ಲದೆ, ತಾವು ನೀಡಿದ ಉತ್ತರವನ್ನು ಲಿಖಿತ ರೂಪದಲ್ಲಿ ಕೊಟ್ಟಾಗ ಕೂಲಂಕಷವಾಗಿ ಓದಿಕೊಂಡು ಸಹಿ ಹಾಕಿದ್ದಾರೆ. ಮುಖ್ಯಮಂತ್ರಿ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ವಿಡಿಯೋ ರೆಕಾರ್ಡ್ ಸಹ ಮಾಡಿಕೊಂಡಿದ್ದಾರೆ. ಲೋಕಾಯುಕ್ತ ಮೈಸೂರು ವಿಭಾಗದ ಎಸ್ಪಿ ಟಿ.ಜೆ.ಉದೇಶ, ಚಾಮರಾಜನಗರದ ಲೋಕಾಯುಕ್ತ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಮತ್ತು ಮಡಿಕೇರಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಲೋಕೇಶ್ ಅವರು ಸಿದ್ದರಾಮಯ್ಯ ಅವರ ವಿಚಾರಣೆ ನಡೆಸಿದರು. ಈ ವೇಳೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಶಾಸಕ ಎ.ಎಸ್.ಪೊನ್ನಣ್ಣ ಅವರು ಜತೆಗಿದ್ದರು.
ಸಿದ್ದುಗೆ ತಾಕತ್ತಿದ್ದರೆ ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ಯಡಿಯೂರಪ್ಪ ಸವಾಲು
ಸುಮಾರು 4 ದಶಕಗಳಷ್ಟು ಸುದೀರ್ಘ ಕಾಲ ರಾಜಕೀಯದಲ್ಲಿರುವ ಸಿದ್ದರಾಮಯ್ಯ ಅವರು ಲೋಕಾಯುಕ್ತ ವಿಚಾರಣೆ ಎದುರಿಸುತ್ತಿರುವುದು ಇದೇ ಪ್ರಥಮ ಆಗಿದೆ. ವಿಚಾರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕಾರಿನಲ್ಲೇ ಹೊರಟು ಬೆಳಗ್ಗೆ 9.30ಕ್ಕೆ ಮೈಸೂರಿನ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು, 10.09ಕ್ಕೆ ಲೋಕಾಯುಕ್ತ ಮೈಸೂರು ಎಸ್ಪಿ ಕಚೇರಿಗೆ ತೆರಳಿದರು. ಸುಮಾರು 2 ಗಂಟೆ ವಿಚಾರಣೆ ಎದುರಿಸಿದ ಅವರು ಮಧ್ಯಾಹ್ನ 12.10ಕ್ಕೆ ಲೋಕಾಯುಕ್ತ ಕಚೇರಿಯಿಂದ ಹೊರಬಂದರು. ವಿಚಾರಣೆಗೆ ಹೋಗುವಾಗ ಅವರು ಖಾಸಗಿ ಕಾರಿನಲ್ಲಿ ತೆರಳಿದ್ದು ವಿಶೇಷ.
ತಾಳ್ಮೆಯಿಂದ ಉತ್ತರ: ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ವಿಚಾರಣೆ ವೇಳೆ ಸಿದ್ದರಾಮಯ್ಯರಿಂದ ಯಾವುದೇ ದಾಖಲೆ ಕೇಳಿಲ್ಲ. ಸಿದ್ದರಾಮಯ್ಯ ಅವರೂ ಯಾವುದೇ ದಾಖಲೆ ನೀಡಿಲ್ಲ. ವಿಚಾರಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ತಾಳ್ಮೆಯಿಂದಲೇ ಉತ್ತರಿಸಿದ್ದಾರೆ. ಈ ವೇಳೆ ನಾನೊಬ್ಬ ಕಾಮನ್ ಮ್ಯಾನ್ ಅಂದುಕೊಂಡು ವಿಚಾರಣೆ ನಡೆಸಿ, ಯಾವುದೇ ಒತ್ತಡಕ್ಕೂ ಒಳಗಾಗಬೇಡಿ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ಎರಡೆರಡು ಬಾರಿ ಸಿದ್ದರಾಮಯ್ಯ ಹೇಳಿದ್ದಾರೆ. ಜತೆಗೆ, ನೀವು ಮತ್ತೆ ಕರೆದರೆ ವಿಚಾರಣೆಗೆ ಬರುತ್ತೇನೆ, ಅಗತ್ಯವಿದ್ದರೆ ಕರೆಯಿರಿ ಎಂದೂ ತಿಳಿಸಿದ್ದಾರೆ ಎನ್ನಲಾಗಿದೆ.
ಸಿಎಂಗೆ ಸುಮಾರು 25 ಪ್ರಶ್ನೆ ಕೇಳಿದ ಲೋಕಾ ಪೊಲೀಸರು: ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸುಮಾರು 25 ಪ್ರಶ್ನೆಗಳನ್ನು ಕೇಳಿದ್ದಾರೆ. 14 ನಿವೇಶನಗಳನ್ನು ನಿಮ್ಮ ಪತ್ನಿ ಮುಡಾದಿಂದ ಪಡೆದಿರುವುದು ನಿಮ್ಮ ಪ್ರಭಾವದಿಂದ ಎಂಬ ಆರೋಪದ ಬಗ್ಗೆ ಏನಂತೀರಿ? ಈ ವಿಚಾರದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದೀರಾ? ನೀವು ಅಧಿಕಾರದಲ್ಲಿದ್ದಾಗಲೇ 4 ಹಂತದಲ್ಲಿ ಪ್ರಭಾವ ನಡೆದಿದೆಯಂತೆ? ಭೂಮಿ ಕಳೆದುಕೊಂಡ ಬಡವಾಣೆ ಬಿಟ್ಟು ವಿಜಯನಗರದಲ್ಲಿ ನಿವೇಶನ ಬೇಕು ಅಂತ ಅರ್ಜಿ ಹಾಕಿದ್ರಾ? ವಿಜಯನಗರದಲ್ಲಿ 14 ನಿವೇಶನ ನಿಮ್ಮ ಪತ್ನಿ ಹೆಸರಿಗೆ ಬಂದಿದ್ದು ನಿಮಗೆ ಗೊತ್ತಾ? ಯಾವಾಗ ಗೊತ್ತಾಯಿತು?
ನಿಮ್ಮ ಬಾಮೈದ ನಿಮ್ಮ ಪತ್ನಿಗೆ ಭೂಮಿಯನ್ನು ಅರಿಶಿಣ ಕುಂಕುಮಕ್ಕೆ ದಾನ ಕೊಟ್ಟಾಗ ನಿಮಗೆ ಮಾಹಿತಿ ಇತ್ತಾ? ಭೂ ವಿವಾದದ ಬಗ್ಗೆ ನಿಮಗೆ ಯಾವಾಗ ಗೊತ್ತಾಯಿತು? ನಿವೇಶನ ಹಂಚಿಕೆ ವೇಳೆ ಮುಡಾ ಆಯುಕ್ತರನ್ನು ಸಂಪರ್ಕಿಸಿದ್ರಾ? ಆರ್ಥಿಕ ಲಾಭಕ್ಕಾಗಿ ಇದೇ ವಿಜಯನಗರ ವ್ಯಾಪ್ತಿಯಲ್ಲಿ 14 ನಿವೇಶನ ಪಡೆದಿದ್ದಾರೆಂಬ ಆರೋಪ ಇದೆಯಲ್ವಾ? ನೀವು ಟ್ವೀಟ್ ಮಾಡಿದ ಪತ್ನಿ ಪಾರ್ವತಿ ಪತ್ರದಲ್ಲಿ ವೈಟ್ನರ್‌ನಲ್ಲಿ ಮರೆಮಾಚಿದ್ದ ಪದಗಳು ಏನು? ನೀವು ಭೂಮಿಗೆ 65 ಕೋಟಿ ಹಣ ಪರಿಹಾರ ಯಾವ ಆಧಾರದ ಮೇಲೆ ಕೇಳಿದ್ರಿ? ಒಟ್ಟಾರೆ ಪ್ರಕರಣ ಬಗ್ಗೆ ಏನೆಲ್ಲ ಮಾಹಿತಿಗಳಿವೆ ಎಂಬುದು ಸೇರಿ ಸುಮಾರು 25 ಪ್ರಶ್ನೆಗಳನ್ನು ಲೋಕಾಯುಕ್ತ ಪೊಲೀಸರು ಕೇಳಿದ್ದು, ಇದಕ್ಕೆ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.
ವರದಿ ನೀಡಲು ಡಿ.24 ಗಡುವು ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಡಿ.24ರ ಒಳಗೆ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ವರದಿ ಕೊಡಬೇಕಿದೆ. ಅಷ್ಟರೊಳಗೆ ವಿಚಾರಣೆ ಪೂರ್ಣಗೊಂಡರೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಡಾ ನಿವೇಶನ ಪ್ರಕರಣ ಸಂಬಂಧ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ ಈವರೆಗೂ 15 ಮಹತ್ತರ ಸಾಕ್ಷಿಗಳ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ನಡೆಸಿದ್ದಾರೆ. ಇನ್ನು ಮುಡಾದಲ್ಲಿ 50:50 ಅಡಿ ನಿವೇಶನ ಹಂಚಿಕೆ ಮಾಡಿದ ಮುಡಾ ಅಧ್ಯಕ್ಷ, ಸದಸ್ಯರು, ಆಯುಕ್ತರು ಹಾಗೂ ಅಧಿಕಾರಿಗಳಿಗೂ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಸಿ.ಪಿ.ಯೋಗೇಶ್ವರ್ ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್: ದೇವೇಗೌಡ ವಾಗ್ದಾಳಿ
ಮುಡಾ ಕೇಸ್ ಸಂಬಂಧಿಸಿ ಲೋಕಾಯುಕ್ತ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಟ್ಟಿದ್ದೇನೆ. ಆರೋಪ ಮಾಡಿದ ತಕ್ಷಣ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆಬರಲ್ಲ. ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿದ್ದಾರೆ, ಆ ಸಂಬಂಧ ಈಗ ವಿಚಾರಣೆ ಆಗಿದೆ. ವಿಚಾರಣೆ ಎದುರಿಸಲು ನನಗೆ ಏಕೆ ಮುಜುಗರ ಆಗುತ್ತೆ? ಮತ್ತೆ ವಿಚಾರಣೆಗೆ ಬರಲು ನನಗೆ ಅಧಿಕಾರಿಗಳು ಹೇಳಿಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ