ಜೆಡಿಎಸ್ ಪಕ್ಷ ಮೊದಲು ಬಹುಮತ ಪಡೆದು ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಸಿಎಂ ಮಾಡುವುದು ಅಥವಾ ಮಹಿಳೆಯನ್ನು ಉಪ ಮುಖ್ಯಮಂತ್ರಿ ಮಾಡುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯೋಚನೆ ಮಾತನಾಡಲಿ ಎಂದು ಸಂಸದೆ ಸುಮಲತಾ ಅಂಬರೀಶ್ ಗುರುವಾರ ವ್ಯಂಗ್ಯವಾಡಿದರು.
ಮದ್ದೂರು (ನ.24): ಜೆಡಿಎಸ್ ಪಕ್ಷ ಮೊದಲು ಬಹುಮತ ಪಡೆದು ಸರ್ಕಾರ ರಚಿಸಿದ ಬಳಿಕ ಮುಸ್ಲಿಂ ಸಿಎಂ ಮಾಡುವುದು ಅಥವಾ ಮಹಿಳೆಯನ್ನು ಉಪ ಮುಖ್ಯಮಂತ್ರಿ ಮಾಡುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯೋಚನೆ ಮಾತನಾಡಲಿ ಎಂದು ಸಂಸದೆ ಸುಮಲತಾ ಅಂಬರೀಶ್ ಗುರುವಾರ ವ್ಯಂಗ್ಯವಾಡಿದರು. ಹಿರಿಯ ನಟ ದಿ.ಡಾ.ಅಂಬರೀಶ್ ಹುಟ್ಟೂರಾದ ದೊಡ್ಡರಸಿನಕೆರೆಗೆ ತೆರಳುವ ಮಾರ್ಗ ಮಧ್ಯೆ ಅನಿಕೇತನ ವಿದ್ಯಾ ಸಂಸ್ಥೆಯಲ್ಲಿ ಅಂಬರೀಶ್ ಮತ್ತು ಸಹೋದರರಾದ ಎಂ.ಎಚ್.ಆನಂದ ಹಾಗೂ ಹರೀಶ್ ಅವರುಗಳ ಪುಣ್ಯ ಸ್ಮರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣೆಗೂ ಮುನ್ನ ಮತದಾರರಿಗೆ ಹಲವು ರೀತಿಯ ಭರವಸೆ ನೀಡುವುದು ಸಾಮಾನ್ಯ. ಜನ ಯಾರನ್ನು ಬೆಂಬಲಿಸುತ್ತಾರೆ ಎನ್ನುವುದು ಬಹಳ ಮುಖ್ಯ. ಜೆಡಿಎಸ್ ಇದುವರೆಗೆ ಬಹುಮತದಿಂದ ಆಧಿಕಾರಕ್ಕೆ ಬಂದಿಲ್ಲ ಎಂದರು. ಮುಂದಿನ ಚುನಾವಣೆಯಲ್ಲಿ ಬಹುಮತ ಬಂದರೆ ಮುಸ್ಲಿಮರನ್ನು ಸಿಎಂ ಮಾಡುವುದು ಅಥವಾ ಮಹಿಳೆಯನ್ನು ಡಿಸಿಎಂ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ಬರುತ್ತಾ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ ಎಂದು ಲೇವಡಿ ಮಾಡಿದರು.
ಸ್ಪರ್ಧೆಗೆ ಯಾರೂ ದೃಢ ನಿರ್ಧಾರ ಮಾಡಿಲ್ಲ: ಸಂಸದೆ ಸುಮಲತಾ
ಮದ್ದೂರು ತಾಲೂಕಿನಲ್ಲಿ ನರೇಗಾ ಯೋಜನೆ ಯಶಸ್ವಿಗೆ ರಾಜಕಾರಣೆಗಳು ಅಡ್ಡಿಯಾಗಿದ್ದಾರೆ. ಇದರಿಂದ ಯೋಜನೆ ಹಳ್ಳಿಗಳಲ್ಲಿ ಹಳ್ಳ ಹಿಡಿಯಲು ಕಾರಣವಾಗಿದೆ. ಕೆಲ ವ್ಯಕ್ತಿಗಳು ನರೇಗಾ ಯೋಜನೆ ಹೆಸರಿನಲ್ಲಿ ಮಾಹಿತಿ ಹಕ್ಕು ಕಾಯಿದೆ ಅಡಿ ಅರ್ಜಿ ಹಾಕಿ ಕಾಮಗಾರಿಗೆ ಅಡ್ಡಿ ಪಡಿಸಿ ಆಧಿಕಾರಿಗಳಿಂದ ಹಣ ವಸೂಲು ಮಾಡುವ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಈ ವೇಳೆ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಎಪಿಎಂಸಿ ಮಾಜಿ ಆಧ್ಯಕ್ಷ ಕುದುರುಗುಂಡಿ ನಾಗೇಶ್, ಮಾಜಿ ಸದಸ್ಯ ಮುಟ್ಟನಹಳ್ಳಿ ಮಹೇಂದ್ರ, ಮುಖಂಡರಾದ ಎಂ.ಪಿ.ಅಮರಬಾಬು, ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಇದ್ದರು.
ದೊಡ್ಡರಸಿನಕೆರೆಯಲ್ಲಿ ಅಂಬಿ 4ನೇ ವರ್ಷದ ಪುಣ್ಯಸ್ಮರಣೆ: ದೊಡ್ಡರಸಿನಕೆರೆ ಗ್ರಾಮದಲ್ಲಿ ಹಿರಿಯ ನಟ ದಿ.ಅಂಬರೀಶ್ 4ನೇ ವರ್ಷದ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ಗ್ರಾಮಕ್ಕೆ ಸಂಸದೆ ಸುಮಲತಾ, ಪುತ್ರ ಅಭಿಷೇಕ್, ಚಿತ್ರನಟ ದೊಡ್ಡಣ್ಣ, ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಿದರು. ನಂತರ ಗ್ರಾಮದ ಮಧ್ಯಭಾಗದಲ್ಲಿ ನಿರ್ಮಿಸಿರುವ ಅಂಬರೀಶ್ ಪುತ್ಥಳಿ ಬಳಿ ತೆರಳಿ ಹೂವಿನಹಾರ ಹಾಕಿ ನಮಸ್ಕರಿಸಿದರು. ಇದಕ್ಕೂ ಮೊದಲು ಗ್ರಾಮದ ಹೆಬ್ಬಾಗಿಲ ಬಳಿ ಕೆರೆ ದಡದಲ್ಲಿ ಅಂಬರೀಶ್ ಚಿತಾಭಸ್ಮವನ್ನಿಟ್ಟು ನಿರ್ಮಿಸಲಾಗಿರುವ ಸಮಾಧಿಯನ್ನು ತಳಿರು ತೋರಣ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.
ಸಮಾಧಿ ಮೇಲೆ ವಿವಿಧ ಬಗೆಯ ಹಣ್ಣು-ಹಂಪಲು, ತಿಂಡಿ-ತಿನಿಸು, ಇಸ್ಪೀಟು, ಎಣ್ಣೆಯನ್ನು ಇಡಲಾಗಿತ್ತು. ಗ್ರಾಮದಲ್ಲಿ ನೆರೆದಿದ್ದ ಅಂಬರೀಶ್ ಅಭಿಮಾನಿಗಳು ರೆಬಲ್ ಸ್ಟಾರ್ ಅಂಬರೀಶ್‌ಗೆ ಜಯವಾಗಲಿ. ಮತ್ತೆ ಅಂಬಿ ಹುಟ್ಟಿಬರಲಿ ಎಂದು ಜೈಕಾರ ಹಾಕಿದರು. ಅಭಿಮಾನಿಗಳು ಗ್ರಾಮಸ್ಥರಿಗೆ ಬಿರಿಯಾನಿ ಊಟ ಹಾಕಿ ಪುಣ್ಯಸ್ಮರಣೆ ಮಾಡಿದರು. ಈ ವೇಳೆ ದೊಡ್ಡರಸಿನಕೆರೆ ಕೇಬಲ್ ಮಧು, ಡೈರಿ ಶಿವ, ಡಿ.ಎಸ್.ಶಿವಕುಮಾರ್, ಮಹೇಂದ್ರಕುಮಾರ್, ಸತೀಶ್‌ಕುಮಾರ್, ಪ್ರಸನ್ನ, ಕೃಷ್ಣ, ಕೊಂಟೆಕುಮಾರ್ , ಅಂಬಿಕೃಷ್ಣ, ಸೋಮಶೇಖರ್ ಅಂಬಿ ಅಭಿಮಾನಿಗಳು ಉಪಸ್ಥಿತರಿದ್ದರು.
ಭ್ರಷ್ಟಚಾರದ ರಾಜಕಾರಣ ನನಗೆ ಇಷ್ಟವಿಲ್ಲ: ಸಂಸದೆ ಸುಮಲತಾ
ಅಂಬಿ ಅಭಿಮಾನಿ ಮಹೇಶ್ ಅಸಮಾಧಾನ: ಗ್ರಾಮದ ಅಂಬಿಸರ್ಕಲ್‌ನಲ್ಲಿ ನಿರ್ಮಿಸಿರುವ ಅಂಬರೀಶ್ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಬಂದ ಸಂಸದೆ ಸುಮಲತಾ ವಿರುದ್ಧ ಅಂಬಿ ಸರ್ಕಲ್‌ನ ಅಧ್ಯಕ್ಷ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಗಣೇಶ ಹಬ್ಬದಂದು ಅಂಬಿ ಸರ್ಕಲ್‌ನಲ್ಲಿ ಗಣೇಶ ಮೂರ್ತಿ ಇಡಲಾಗಿತ್ತು. ಆಗ ಸುಮಲತಾ ಅಂಬರೀಶ್ ಪುತ್ಥಳಿಗೆ ಮಾಲಾರ್ಪಣೆ ಮಾಡದೆ ಹಾಗೆ ಹೋಗಿದ್ದರು. ಅಭಿಮಾನಿಗಳಿಂದ ದೇಣಿಗೆ ಸಂಗ್ರಹಿಸಿ ಅಂಬರೀಶ್ ಪುತ್ಥಳಿ ನಿರ್ಮಿಸಲಾಗಿದೆ. ಇದಕ್ಕೆ ನಾನು ಅಧ್ಯಕ್ಷನಾಗಿ ಕೆಲಸ ನಿರ್ವಹಿಸಿದ್ದೇನೆ. ಬೆಂಗಳೂರಿಗೆ ಹೋಗಿ ಆಹ್ವಾನಿಸಿದರೂ ಸಹ ಇದುವರೆಗೂ ನಮ್ಮ ಅಂಬಿ ಬಳಗದವರನ್ನು ಒಮ್ಮೆಯೂ ಕೂಡ ಗುರುತಿಸಿ ಮಾತನಾಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 4ನೇ ವರ್ಷದ ಪುಣ್ಯಸ್ಮರಣೆಯನ್ನು ವಿಜೃಂಭನೆಯಿಂದ ಆಚರಿಸದ ಕಾರಣ ಕೆಲವೇ ಮಂದಿ ಅಭಿಮಾನಿಗಳು ಬಂದಿದ್ದಾರೆ ಎಂದು ಬೇಸರ ಹೊರ ಹಾಕಿದರು.