ರಾಜ್ಯ ಸರ್ಕಾರಕ್ಕೆ ನಮ್ಮ ದೇವಾಲಯಗಳ ಅಭಿವೃದ್ಧಿಗಿಂತ ಮಹಿಷ ದಸರಾವೇ ಹೆಚ್ಚು ಮುಖ್ಯ ಎಂದು ಸಂಸದ ಪ್ರತಾಪ ಸಿಂಹ ಟೀಕಿಸಿದ್ದಾರೆ. ನಗರದಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಸ್ಥಳ ಪರಿಶೀಲನೆ ವೇಳೆ ಕೆ.ಜಿ. ಕೊಪ್ಪಲಿನ ರೈಲ್ವೆ ಕೆಳ ಸೇತುವೆ ಬಳಿ ಸುದ್ದಿಗಾರರೊಡನೆ ಮಾತನಾಡಿದರು.
ಮೈಸೂರು (ಸೆ.07): ರಾಜ್ಯ ಸರ್ಕಾರಕ್ಕೆ ನಮ್ಮ ದೇವಾಲಯಗಳ ಅಭಿವೃದ್ಧಿಗಿಂತ ಮಹಿಷ ದಸರಾವೇ ಹೆಚ್ಚು ಮುಖ್ಯ ಎಂದು ಸಂಸದ ಪ್ರತಾಪ ಸಿಂಹ ಟೀಕಿಸಿದ್ದಾರೆ. ನಗರದಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ವಿವಿಧ ಸ್ಥಳ ಪರಿಶೀಲನೆ ವೇಳೆ ಕೆ.ಜಿ. ಕೊಪ್ಪಲಿನ ರೈಲ್ವೆ ಕೆಳ ಸೇತುವೆ ಬಳಿ ಸುದ್ದಿಗಾರರೊಡನೆ ಮಾತನಾಡಿದ ಅವರು, ಚಾಮುಂಡಿಬೆಟ್ಟದ ಅಭಿವೃದ್ಧಿಗೆ ಪ್ರಸಾದ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 46 ಕೋಟಿ ಬಂದಿದೆ. ಈ ಬಗ್ಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕಿದೆ ಎಂದರು.
ಸ್ವದೇಶಿ ದರ್ಶನ್ ಯೋಜನೆಯಲ್ಲಿ 80 ಕೋಟಿವರೆಗೆ ಯೋಜನಾ ವರದಿ ನೀಡಬಹುದು. ಈ ಬಗ್ಗೆ ಡಿಪಿಆರ್ ಸಿದ್ಧವಾಗುತ್ತಿದೆ. ಪ್ರಸಾದ ಯೋಜನೆಯಲ್ಲಿ 46 ಕೋಟಿ ಕೇವಲ ಚಾಮುಂಡಿಬೆಟ್ಟದ ಅಭಿವೃದ್ಧಿಗಾಗಿ ಮಾತ್ರ ಬಿಡುಗಡೆ ಆಗುತ್ತದೆ. ಆದರೆ ಚಾಮುಂಡಿಬೆಟ್ಟದ ಹುಂಡಿಯಲ್ಲಿ 130 ಕೋಟಿ ಹಣ ಇದೆ. ಈ ಹಣದಿಂದ ಪ್ರತಿ ವರ್ಷ 10 ರಿಂದ 20 ದೇವಾಲಯ ಅಭಿವೃದ್ಧಿಪಡಿಸಲು ನಾವು ಯೋಜನೆ ರೂಪಿಸಿದ್ದೆವು. ಆದರೆ ನಮ್ಮ ಸರ್ಕಾರ ಬರಲಿಲ್ಲ. ಈಗಿನ ಸರ್ಕಾರಕ್ಕೆ ದೇವಾಲಯಗಳ ಅಭಿವೃದ್ಧಿಗಿಂತ ಮಹಿಷ ದಸರಾವೇ ಹೆಚ್ಚು ಮುಖ್ಯವಾಗಿರುತ್ತದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನ ಅಭಿವೃದ್ಧಿಗೆ ಸಂಸದ ಪ್ರತಾಪ ಸಿಂಹ ಕೊಡುಗೆ ಏನು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಸರ್ಕಾರದ ಬಳಿ ಜನರಿಗೆ ಸಂಬಳ ಕೊಡಲು ದುಡ್ಡಿಲ್ಲ. ಇನ್ನು ಅಭಿವೃದ್ಧಿ ಕಾರ್ಯಗಳಿಗೆ ಹೇಗೆ ಹಣ ಬಿಡುಗಡೆ ಮಾಡುತ್ತಾರೆ. ಅನುದಾನ ಕೊಡುತ್ತಾರೆ ಎಂದು ನಂಬಿಕೊಂಡು ಕೂರಲು ಆಗುವುದಿಲ್ಲ. ನಗರದ ಒಳಗಿನ ಕಾಮಗಾರಿಗೆ ನಗರ ಪಾಲಿಕೆಯಿಂದ ಹೆಚ್ಚಿನ ಹಣವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು. ಹಿಂದೆ ನಮ್ಮ ಸರ್ಕಾರ ಇದ್ದಾಗ ಮೂರು ಮುಕ್ಕಾಲು ವರ್ಷ ಆಡಳಿತ ನೀಡಿದೆ. ಈ ವೇಳೆ ಮೊದಲು ನೆರೆ ಬಂತು. ಬಳಿಕ 2 ವರ್ಷ ಕೋವಿಡ್ ಬಂತು. ಬಳಿಕ ಒಂದು ವರ್ಷದಲ್ಲಿ ಏನೆಲ್ಲಾ ಅಭಿವೃದ್ಧಿ ಮಾಡಬೇಕೋ ಅದನ್ನು ಮಾಡಿದ್ದೇವೆ. ಏರ್ ಪೋರ್ಟ್ ಅಭಿವೃದ್ಧಿ, ಜಲಜೀವನ್ ಮಿಷನ್ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸಾವಿರಾರು ಕೋಟಿ ರೂಪಾಯಿ ತಂದು ಅಭಿವೃದ್ಧಿ ಮಾಡಿದ್ದೇವೆ ಎಂದರು.
ಭಗವದ್ಗೀತೆ ಒಂದು ವಿಶೇಷವಾದ ಶ್ರೇಷ್ಠ ಗ್ರಂಥ: ಸಚಿವ ಎಂ.ಸಿ.ಸುಧಾಕರ್
ಈಗಿನ ಸರ್ಕಾರವನ್ನು ಮೈಸೂರು ನಗರದ ಒಳಗಿನ ರೈಲ್ವೆ ಕಾಮಗಾರಿಗೆ ಮತ್ತು ಪೂರಕ ಕಾಮಗಾರಿ ಮಾಡಲು 30 ಕೋಟಿ ಹಣ ಕೇಳಿದರೂ, ಇದನ್ನು ನೀಡಲು ಸರ್ಕಾರದ ಬಳಿ ಹಣ ಇಲ್ಲ. 30 ಕೋಟಿ ಹಣ ಕೊಟ್ಟರೆ ಸಣ್ಣಪುಟ್ಟ ಅಭಿವೃದ್ಧಿ ಮಾಡಲು ಸಾಧ್ಯ ಎಂದರು. ಸನಾತನ ಧರ್ಮದ ಕುರಿತು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಜನ ನೋಡುತ್ತಿದ್ದಾರೆ. ಜನರಿಗೆ ವಿವೇಚನಾ ಶಕ್ತಿ ಇದೆ. ಇದಕ್ಕೆ ಜನರೇ ತಕ್ಕ ಉತ್ತರ ನೀಡುವುದಾಗಿ ಪ್ರತಾಪ ಸಿಂಹ ಹೇಳಿದರು. ಇದೇ ವೇಳೆ, ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳೊಂದಿಗೆ ರೈಲ್ವೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಸಭೆ ನಡೆಸಿದರು.