ಮಂಡ್ಯದಲ್ಲಿ ಹನುಮ ಧ್ವಜ ಕಿತ್ತೆಸೆಯುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂಗಳಿಗೆ ದ್ರೋಹ ಮಾಡಿದ್ದು, ಅವರಿಗೆ ಹನುಮ, ರಾಮನ ಶಾಪ ತಟ್ಟಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಮಂಗಳೂರು (ಜ.31): ಮಂಡ್ಯದಲ್ಲಿ ಹನುಮ ಧ್ವಜ ಕಿತ್ತೆಸೆಯುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂಗಳಿಗೆ ದ್ರೋಹ ಮಾಡಿದ್ದು, ಅವರಿಗೆ ಹನುಮ, ರಾಮನ ಶಾಪ ತಟ್ಟಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ದ.ಕ. ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ದಬ್ಬಾಳಿಕೆ ಮತ್ತು ಹಿಂದೂಗಳ ದಮನ ಕಾರ್ಯ ಆರಂಭವಾಗಿದೆ. ಇಂಥ ವಿಚಾರಗಳನ್ನು ಬಿಜೆಪಿ ಸಹಿಸಲ್ಲ, ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ನಡೆಸಲಿದ್ದೇವೆ ಎಂದರು.
ಇದೀಗ ದೇಶದಲ್ಲಿ ಪರಿವರ್ತನೆ ಆರಂಭವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆಯಿಂದಾಗಿ ಕಾರ್ಯಕರ್ತರು ಉತ್ಸಾಹದಿಂದಿದ್ದಾರೆ. ‘ಇಂಡಿಯಾ’ ಕೂಟ ಚೂರು ಚೂರಾಗುತ್ತಿದ್ದರೆ, ಬಿಜೆಪಿ ಅಭೂತಪೂರ್ವ ಸಾಧನೆ ಮಾಡುತ್ತಿದೆ. ದೇಶದೆಲ್ಲೆಡೆ ಮೋದಿ ಮತ್ತು ಶ್ರೀರಾಮ ಹೆಸರು ರಾರಾಜಿಸುತ್ತಿದ್ದು, ಮತ್ತೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರೋದು ಶತಸಿದ್ಧ. ರಾಜ್ಯದಲ್ಲೂ ಎಲ್ಲ 28 ಸೀಟ್ ಗೆಲ್ಲಲಿದ್ದೇವೆ ಎಂದು ಹೇಳಿದರು. ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪಂಚಾಯ್ತಿಯಿಂದ ಹಿಡಿದು ಶಾಸಕ ಸ್ಥಾನದವರೆಗೆ ಸ್ಪರ್ಧಿಸಿದವರು. ಸಾಮಾನ್ಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸಿ ಇಂದು ಜಿಲ್ಲಾಧ್ಯಕ್ಷರಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನೇತೃತ್ವ ವಹಿಸಲಿದ್ದಾರೆ. ದ.ಕ. ಲೋಕಸಭಾ ಕ್ಷೇತ್ರ ಮಾತ್ರವಲ್ಲದೆ, ಜಿಪಂ ತಾಪಂ ಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ ಎಂದರು.
ಬಿಜೆಪಿಗರಿಗೆ ಹನುಮ, ರಾಮ ಬೇಕಿಲ್ಲ, ಮತ ಬೇಕಿದೆ: ಸಚಿವ ಆರ್.ಬಿ.ತಿಮ್ಮಾಪುರ
ಹನುಮ ಭಕ್ತರು- ಟಿಪ್ಪು ಭಕ್ತರ ಚುನಾವಣೆ: ರಾಜ್ಯದಲ್ಲಿ ಈಗ ನಡೆಯೋ ಚುನಾವಣೆ ಹನುಮ ಭಕ್ತರಿಗೂ ಟಿಪ್ಪು ಭಕ್ತರಿಗೂ ನಡೆಯುವ ಚುನಾವಣೆ. ಇದರಲ್ಲಿ ನಿಶ್ಚಯವಾಗಿ ರಾಮ ಭಕ್ತರು ಗೆದ್ದೇ ಗೆಲ್ತಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಅಹಿಂದ ನಾಯಕ ಅಂತ ಕರೆಸಿಕೊಳ್ಳುತ್ತಿದ್ದರು. ಈಗ ಅಲ್ಪಸಂಖ್ಯಾತರ ನಾಯಕ ಎನ್ನುವ ಮಟ್ಟಕ್ಕೆ ತಲುಪಿದ್ದಾರೆ. ರಾಷ್ಟ್ರಪತಿಗೆ ಏಕವಚನದಲ್ಲಿ ಕರೆಯಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಎಂದಾದರೂ ಏಕವಚನದಲ್ಲಿ ಕರೆದಿದ್ದೀರಾ? ಇದರ ಫಲಿತಾಂಶ ಉಣ್ಣುವ ದಿನ ಕಾಂಗ್ರೆಸ್‌ಗೆ ಬರಲಿದೆ ಎಂದರು.
ರಾಜ್ಯ ಸರ್ಕಾರ ಕಾಂತರಾಜು ವರದಿ ಸಿದ್ಧಪಡಿಸಿದರೂ ಬಿಡುಗಡೆ ಮಾಡಿಲ್ಲ. ಅದರ ಅಂಗೀಕಾರಕ್ಕೆ ಬದ್ಧ ಅಂತ ಹೇಳಿ ಆಯೋಗದ ಅವಧಿಯನ್ನು ಮತ್ತೊಂದು ತಿಂಗಳು ಮುಂದುವರಿಸಿದ್ದಾರೆ ಎಂದು ಕೋಟ ಟೀಕಿಸಿದರು. ಇಂದು ಗ್ಯಾಸ್, ಶೌಚಾಲಯ, ವಿದ್ಯುತ್ ಇಲ್ಲದ ಮನೆಗಳಿಲ್ಲ. ಜನರು ತಮ್ಮ ಕಾಲ ಮೇಲೆ ನಿಲ್ಲಲು ಶಕ್ತರಾಗಿದ್ದಾರೆ. ಒಂದು ಕಾಲದಲ್ಲಿ ದೇಶದಲ್ಲಿ ಯುದ್ಧಕ್ಕೆ ಮದ್ದು ಗುಂಡು ಇರಲಿಲ್ಲ. ಇಂದು ಚೀನಾವನ್ನು ತಡೆಯುವ ಶಕ್ತಿ ಇರೋದು ಇಡೀ ವಿಶ್ವದಲ್ಲಿ ಭಾರತಕ್ಕೆ ಮಾತ್ರ. ಅದಕ್ಕೆ ನರೇಂದ್ರ ಮೋದಿ ಕಾರಣ. ಇನ್ನು ಮೂರು ವರ್ಷದಲ್ಲಿ ಜಗತ್ತಿನ ಮೂರನೇ ಬಲಾಢ್ಯ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ. 10 ವರ್ಷಗಳಲ್ಲಿ ನಂ.1 ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ: ಜಿಲ್ಲಾ ಬಿಜೆಪಿ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಪ್ರಯತ್ನ ಮಾಡ್ತೇನೆ. ಎಲ್ಲ ಕಾರ್ಯಕರ್ತರನ್ನು ಜತೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುವುದಾಗಿ ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದ ಅವರು, ಹೆಚ್ಚು ಮಾತನಾಡುವುದಕ್ಕಿಂತ ಹೆಚ್ಚು ಕೆಲಸ ಮಾಡಲು ಪ್ರಯತ್ನ ಮಾಡಲಿದ್ದೇನೆ. ಕಾರ್ಯಕರ್ತರ ನೋವು, ಭಾವನೆ ಎಲ್ಲವೂ ಗೊತ್ತಿದೆ. ಯಾರ ಮನಸ್ಸನ್ನೂ ನೋಯಿಸುವ ಕೆಲಸ ಮಾಡಲ್ಲ. ನಾನೂ ಒಬ್ಬ ಕಾರ್ಯಕರ್ತನಾಗಿ ನಿಮ್ಮೊಂದಿಗೆ ಇದ್ದು ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದ.ಕ. ಕ್ಷೇತ್ರದಲ್ಲಿ 3 ಲಕ್ಷಕ್ಕಿಂತ ಹೆಚ್ಚು ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ಸಂಘಟಿತರಾಗಿ ಕೆಲಸ ಮಾಡೋಣ ಎಂದು ಸತೀಶ್ ಕುಂಪಲ ಹೇಳಿದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಮಾತನಾಡಿ, ನಾಲ್ಕು ವರ್ಷ ಪಕ್ಷ ಸಂಘಟನೆ ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ ಇದೆ. ಮುಂದೆಯೂ ನೂತನ ಅಧ್ಯಕ್ಷರಿಗೆ ಉತ್ತಮ ಸಹಕಾರ ನೀಡಿ ಎಂದರು. ಕಾರ್ಯಕ್ರಮದಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆಗೊಂಡರು.
ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ರಾಜ್ಯದ ಹಲವೆಡೆ ಮನೆ, ಕಚೇರಿಗಳ ಮೇಲೆ ದಾಳಿ!
ಬೃಜೇಶ್ ಚೌಟಗೆ ಜೈಕಾರ ಘೋಷಣೆ: ಪದಗ್ರಹಣ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ.ಬೃಜೇಶ್ ಚೌಟ ಹೆಸರೆತ್ತಿದಾಗಲೆಲ್ಲ ಕಾರ್ಯಕರ್ತರು ಜೋರಾಗಿ ಜೈಕಾರ, ಘೋಷಣೆ ಹಾಕಿ ಗಮನ ಸೆಳೆದರು. ಸ್ವಾಗತ ಕಾರ್ಯಕ್ರಮ ಸಂದರ್ಭ, ನಂತರ ನಳಿನ್ ಕುಮಾರ್ ಅವರು ಬೃಜೇಶ್ ಚೌಟ ಅವರ ಹೆಸರೆತ್ತಿ ಅಭಿನಂದನೆ ಸಲ್ಲಿಸಿದಾಗ ಹಾಗೂ ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಚೌಟರ ಹೆಸರೆತ್ತಿದಾಗ ಜೋರಾದ ಕರತಾಡನ, ಜೈಕಾರ ಸಭಾಂಗಣದಲ್ಲಿ ಕೇಳಿಬಂತು.