ನಾನು ಕಾಂಗ್ರೆಸ್ಸಿಗೆ ಹೋಗಲ್ಲ, ಬಿಜೆಪಿಯಲ್ಲೇ ಇರುವೆ: ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟನೆ

By Kannadaprabha News  |  First Published Jan 31, 2024, 8:03 AM IST

ನಾನು ಕಾಂಗ್ರೆಸ್ಸಿಗೆ ಹೋಗುತ್ತೇನೆ ಎಂಬ ಸುದ್ದಿ ಹಬ್ಬಿತ್ತು. ಆದರೆ ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ. ಬಿಜೆಪಿಯಲ್ಲೇ ಮುಂದುವರಿಯುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟಪಡಿಸಿದರು. 


ಹುಬ್ಬಳ್ಳಿ (ಜ.31): ನಾನು ಕಾಂಗ್ರೆಸ್ಸಿಗೆ ಹೋಗುತ್ತೇನೆ ಎಂಬ ಸುದ್ದಿ ಹಬ್ಬಿತ್ತು. ಆದರೆ ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ. ಬಿಜೆಪಿಯಲ್ಲೇ ಮುಂದುವರಿಯುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟಪಡಿಸಿದರು. ಇದರಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಬಿಜೆಪಿಗೆ ಮರಳಿದ ಬೆನ್ನಲ್ಲೇ ಮುನೇನಕೊಪ್ಪ ತಮ್ಮ ಬಗ್ಗೆ ಇದ್ದ ಊಹಾಪೋಹಗಳಿಗೆ ಬ್ರೇಕ್‌ ಹಾಕಿದಂತಾಗಿದೆ. ಪತ್ರಿಕಾಗೋಷ್ಠಿ ಈ ಮಾತು ಸ್ಪಷ್ಟಪಡಿಸಿದ ಅವರು, ಆಗಸ್ಟ್‌ನಲ್ಲಿ ನನ್ನ ರಾಜಕೀಯ ಮುಂದಿನ ನಡೆ ಕುರಿತು ಜನವರಿಯಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದೆ. ಅದರಂತೆ ಜನವರಿ ಮುಗಿಯಲು ಇನ್ನೂ ಎರಡು ದಿನ ಬಾಕಿ ಇರುವಾಗಲೇ ನನ್ನ ನಿಲುವು ಸ್ಪಷ್ಟಪಡಿಸುತ್ತಿದ್ದೇನೆ. ನನ್ನ ಮನೆಯಲ್ಲಿ ನಡೆದ ಕೆಲ ಕಹಿ ಘಟನೆಗಳಿಂದ ರಾಜಕೀಯದಿಂದ ದೂರ ಉಳಿದು ಐದು ತಿಂಗಳಿನಿಂದ ಮೌನಕ್ಕೆ ಜಾರಿದ್ದೆ ಅಷ್ಟೇ ಎಂದರು.

ರಾಜಕೀಯದಲ್ಲಿ ಸಕ್ರಿಯವಾಗಿಲ್ಲದ ಕಾರಣ ನನ್ನ ಬಗ್ಗೆ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಮುನೇನಕೊಪ್ಪ ಕಾಂಗ್ರೆಸ್‌ ಸೇರುತ್ತಾರೆ, ಮುನೇನಕೊಪ್ಪ ಕಾಂಗ್ರೆಸ್‌ನಿಂದ ಲೋಕಸಭೆ ಅಭ್ಯರ್ಥಿ ಆಗುತ್ತಾರೆ. ಈ ಎಲ್ಲ ಉಹಾಪೋಹಗಳಿಗೆ ಪುಷ್ಟಿನೀಡುವಂತೆ ಕಾಂಗ್ರೆಸ್‌ ನಾಯಕರು ನನಗೆ ಆಹ್ವಾನ ನೀಡಿದ್ದರು. ಆದರೆ, ನಾನಾಗಿಯೇ ಯಾರ ಮನೆಗೂ ಹೋಗಿರಲಿಲ್ಲ. ಆಹ್ವಾನ ನೀಡಿದ ಕಾಂಗ್ರೆಸ್‌ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಎಂದರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರಿಗೆ ಪಕ್ಷದಲ್ಲಿ ನೋವಾಗಿದ್ದರಿಂದ ಕಾಂಗ್ರೆಸ್‌ ಸೇರಿದ್ದರು. ಅವರು ಮತ್ತೆ ಪಕ್ಷಕ್ಕೆ ವಾಪಸ್‌ ಬಂದಿದ್ದರಿಂದ ಪಕ್ಷಕ್ಕೆ ಹಾಗೂ ನಮಗೆ ದೊಡ್ಡ ಶಕ್ತಿ ಬಂದಂತಾಗಿದೆ. ಪಕ್ಷ ಬಿಟ್ಟು ಹೋದವರನ್ನು ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

Tap to resize

Latest Videos

‘ಅಹಿಂದ ಸಿದ್ದು, ‘ಹಿಂದ’ ಹಿಂದಿಕ್ಕಿ ಅಲ್ಪಸಂಖ್ಯಾತರ ಜಪ ಮಾಡ್ತಿದ್ದಾರೆ’: ವಿಜಯೇಂದ್ರ ಆರೋಪ

ರಿವರ್ಸ್‌ ಅಪರೇಶನ್‌: ನಾನು ಯಾವುದೇ ರಿವರ್ಸ್‌ ಅಪರೇಶನ್‌ ಮಾಡಿಲ್ಲ. ಶೆಟ್ಟರ ಕುಟುಂಬ ಜನಸಂಘ ಕಾಲದಿಂದ ಬಂದಿದೆ. ಹೀಗಾಗಿ ಅವರು ಮತ್ತೆ ತಮ್ಮ ಮನೆಗೆ ಬಂದಿದ್ದಾರೆ. ಆದರೆ. ಪಕ್ಷದ ಕೆಲ ಹಿರಿಯರು ನನಗೆ ಜವಾಬ್ದಾರಿ ಕೊಟ್ಟಿದ್ದರು. ಅದಕ್ಕೆ ಜನವರಿ ಡೆಡ್‌ಲೈನ್‌ ಹಾಕಿದ್ದರು. ಅಷ್ಟೇ ಅಲ್ಲದೇ ಕೆಲಸ ಮುಗಿಯುವ ವರೆಗೆ ಹೀಗೆ ಇರಬೇಕು ಎಂದು ಹೇಳಿದ್ದರು. ಆ ಕಾರಣಕ್ಕಾಗಿ ಜವಾಬ್ದಾರಿ ಮುಗಿಯುವ ವರೆಗೆ ನಾನು ಏನೂ ಮಾತನಾಡಿರಲಿಲ್ಲ. ಶೆಟ್ಟರ್‌ ವಾಪಸ್‌ ಬರುವ ವಿಷಯ ಸಚಿವ ಜೋಶಿ, ಶಾಸಕ ಟೆಂಗಿನಕಾಯಿ ಸೇರಿದಂತೆ ಹಲವರಿಗೆ ಮಾಹಿತಿ ಇತ್ತು ಎನ್ನುವ ಮೂಲಕ ಶೆಟ್ಟರ್‌ ಕರೆತರುವ ಗುಟ್ಟನ್ನು ಬಿಚ್ಚಿಟ್ಟರು.

ಶೆಟ್ಟರ ಗೌರವಿಸಿ: ಜೋಶಿಯವರು ಪಕ್ಷದಲ್ಲಿರುವ ಎಲ್ಲರನ್ನು ಸರಿಯಾಗಿ ನೋಡಿಕೊಳ್ಳಬೇಕು ಅಂತ ಹಿಂದೆ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಶೆಟ್ಟರ್‌ ಪಕ್ಷಾಂತರದ ನಂತರ ನಮ್ಮ ಪಕ್ಷದಲ್ಲಿ ಹಲವಾರು ಮುಖಂಡರಿಂದ ಅತೃಪ್ತಿ ವ್ಯಕ್ತವಾಗಿತ್ತು. ಇದೀಗ ಅದನ್ನು ಸರಿಪಡಿಸುವ ಕೆಲಸ ನಡೆದಿದೆ. ಹಿಂದೆ ನಮ್ಮಿಂದಾದ ತಪ್ಪನ್ನು ತಿದ್ದಿಕೊಂಡು ಮುಂದೆ ಸಾಗುತ್ತೇವೆ ಎಂದು ಹೇಳಿದರು. ಕೆಲವೊಂದಿಷ್ಟು ಅಸಮಾಧಾನವಿದ್ದರೂ ಅವುಗಳನ್ನೆಲ್ಲ ಬಗೆಹರಿಸುತ್ತೇವೆ. ಜೋಶಿ ನಾಯಕತ್ವದಲ್ಲಿ ಅಸಮಾಧಾನಗಳೆಲ್ಲ ಬಗೆಹರಿಯುತ್ತವೆ ಎಂದು ಇದೇ ವೇಳೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಯುವ ಮೋರ್ಚಾ ಅಧ್ಯಕ್ಷ ರೋಹಿತ ಮತ್ತಿಹಳ್ಳಿ, ಬಿಜೆಪಿ ಜಿಲ್ಲಾ ಖಜಾಂಚಿ ಮುತ್ತು ಗಾಳಪ್ಪನವರ, ಕುಸುಗಲ್‌ ಗ್ರಾಪಂ ಸದಸ್ಯ ಸೋಮು ಪಟ್ಟಣಶೆಟ್ಟಿ, ತಾಪಂ ಮಾಜಿ ಸದಸ್ಯ ಮುತ್ತು ಚಾಕಲಬ್ಬಿ, ಪ್ರಭು ಗುಳಗಣ್ಣನವರ, ಕಲ್ಲಪ್ಪ ಗಿಡ್ನವರ, ನಾಗರಾಜ ಕಾಳೆ ಉಪಸ್ಥಿತರಿದ್ದರು.

ಮಂಡ್ಯದಲ್ಲಿ ಕೋಮುಬೀಜ ಬಿತ್ತಿದ ಎಚ್‌ಡಿಕೆ: ಸಚಿವ ಎನ್.ಚಲುವರಾಯಸ್ವಾಮಿ

ಶೆಟ್ಟರಗೆ ಯಾವ ಕ್ಷೇತ್ರ?: ಜಗದೀಶ ಶೆಟ್ಟರ ಧಾರವಾಡ ಲೋಕಸಭಾ ಅಭ್ಯರ್ಥಿ ಆಗುತ್ತಾರಾ? ಎಂಬ ಪ್ರಶ್ನೆಗೆ, ಶೆಟ್ಟರ್‌ ಬೆಳಗಾವಿಗೆ ಹೋಗುತ್ತಾರೋ, ಹಾವೇರಿಗೆ ಹೋಗುತ್ತಾರೋ? ಧಾರವಾಡದಲ್ಲಿ ಇರುತ್ತಾರೋ ಎಂಬುದು ನಮಗೆ ಗೊತ್ತಿಲ್ಲ. ಅದೆಲ್ಲವನ್ನು ಹೈಕಮಾಂಡ್‌ ನಿರ್ಧಾರ ಕೈಗೊಳ್ಳುತ್ತದೆ. ಅದು ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು. ಜೋಶಿ ಅವರಿಗೆ ಟಿಕೆಟ್‌ ತಪ್ಪುತ್ತೆ ಅಂತ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕಳೆದ 20 ವರ್ಷದಿಂದ ಧಾರವಾಡ ಕ್ಷೇತ್ರಕ್ಕೆ ಜೋಶಿ ಅವರೇ ಸಂಸದರಾಗಿದ್ದಾರೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಅವರೇ ಅಭ್ಯರ್ಥಿಯಾಗುತ್ತಾರೆ. ನಾನಂತೂ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ಯಾವುದೇ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ನಾನಲ್ಲ. ಆದರೆ, ಚುನಾವಣೆ ಜವಾಬ್ದಾರಿ ಕೊಟ್ಟರೇ ನಿಭಾಯಿಸುತ್ತೇನೆ ಎಂದರು.

click me!