ಜನರ ಒಳಿತಿಗೆ ಬಿಜೆಪಿ ಸರ್ಕಾರಗಳು ಬದ್ಧ: ಈರಣ್ಣ ಕಡಾಡಿ

By Kannadaprabha NewsFirst Published Jan 6, 2023, 7:30 PM IST
Highlights

ಸುಮಾರು 44 ವರ್ಷಗಳ ನಿರಂತರ ಹೋರಾಟದ ನಂತರ ಜಾರಿಗೊಂಡ ಈ ಯೋಜನೆಗೆ ಕಾಂಗ್ರೆಸ್‌ನವರು ಸ್ಪಂದಿ​ಸುವುದನ್ನು ಬಿಟ್ಟು ಅನಾವಶ್ಯಕ ಆರೋಪ ಮಾಡುತ್ತಿರುವುದು ವಿಷಾದದ ಸಂಗತಿ: ಈರಣ್ಣ ಕಡಾಡಿ 

ಸವದತ್ತಿ(ಜ.06):  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಉತ್ತರ ಕರ್ನಾಟಕದ ಜನರ ಪ್ರಮುಖ ಬೇಡಿಕೆ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡುವ ಜೊತೆಗೆ ಏತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಅಭಿನಂದನಾರ್ಹ ವಿಷಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಬಿಜೆಪಿ ರೈತ ಮೋರ್ಚಾ ಆಶ್ರಯದಲ್ಲಿ ಕಳಸಾ ಬಂಡೂರಿ ಮತ್ತು ಏತ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸುಮಾರು 44 ವರ್ಷಗಳ ನಿರಂತರ ಹೋರಾಟದ ನಂತರ ಜಾರಿಗೊಂಡ ಈ ಯೋಜನೆಗೆ ಕಾಂಗ್ರೆಸ್‌ನವರು ಸ್ಪಂದಿ​ಸುವುದನ್ನು ಬಿಟ್ಟು ಅನಾವಶ್ಯಕ ಆರೋಪ ಮಾಡುತ್ತಿರುವುದು ವಿಷಾದದ ಸಂಗತಿ. ರೈತಪರವಾಗಿರುವ ಯೋಜನೆಗಳು ಜಾರಿ ಆಗುತ್ತಿರುವದನ್ನು ಸಹಿಸಲಾಗದೇ ವಿರೋಧ ಪಕ್ಷದವರು ಮಾಡುತ್ತಿರುವ ಆರೋಪಗಳಿಂದ ರೈತರನ್ನು ಅವಮಾನಿಸಿದಂತಾಗುತ್ತಿದೆ ಎಂದರು.
ಕಳಸಾ ಬಂಡೂರಿ ಯೋಜನೆಗೆ .1ಸಾವಿರ ಕೋಟಿ ತೆಗೆದಿರಿಸಲಾಗಿದ್ದು, ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ. ದಿ.ಆನಂದ ಮಾಮನಿಯವರ ಕನಸಿನ ಸತ್ತಿಗೇರಿ ಏತ ನೀರಾವರಿ ಯೋಜನೆಗೆ .546 ಕೋಟಿ ವೆಚ್ಚದಲ್ಲಿ ಚಾಲನೆ ನೀಡುತ್ತಿದ್ದು, ಶಾಸಕರ ಕನಸನ್ನು ಸರ್ಕಾರ ಈಡೇರಿಸುವ ಪ್ರಯತ್ನ ಮಾಡಿದೆ ಎಂದರು.

Karnataka Politics: ಬೆಂಕಿ ಹಚ್ಚೋ ಕೆಲಸದಿಂದ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್‌: ಕಡಾಡಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಸ್ತೆ ಅಭಿವೃದ್ಧಿ ಜೊತೆ ಮಹತ್ತರವಾಗಿರುವ ರೈಲ್ವೆ ಯೋಜನೆಗಳನ್ನು ಜಾರಿಗೆ ತಂದಿದ್ದು, ಧಾರವಾಡ ಕಿತ್ತೂರ ಮಾರ್ಗವಾಗಿ ಬೆಳಗಾವಿಗೆ .987 ಕೋಟಿ ವೆಚ್ಚದಲ್ಲಿ ರೈಲುಮಾರ್ಗ ಯೊಜನೆಯನ್ನು ರೂಪಿಸಲಾಗಿದೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತ ಕಾರ್ಯವನ್ನು ಕಾರ್ಯಕರ್ತರು ನಿಷ್ಠೆಯಿಂದ ಮಾಡಬೇಕು ಎಂದರು.

ವಿ.ಪ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಸುವರ್ಣಸೌಧ ಇರುವುದರಿಂದಲೇ ಇಂದು ನಮಗೆ ಅನೇಕ ಯೋಜನೆಗಳು ದೊರಕುತ್ತಿರುವುದು ಹೆಮ್ಮೆಯ ವಿಷಯ. ಈ ಭಾಗದ ರೈತರಿಗೆ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಸರ್ಕಾರ ಕೆಲಸವನ್ನು ಮಾಡುತ್ತಿದ್ದು, .5700 ಕೋಟಿಯಲ್ಲಿ 13 ಯೋಜನೆಗಳನ್ನು ಸರ್ಕಾರ ರೈತರ ಪರವಾಗಿ ನೀಡಿರುವುದು ಶ್ಲಾಘನೀಯ ಎಂದರು.

ಕಳಸಾ ಬಂಡೂರಿ ಯೋಜನೆಯಿಂದ 4 ಟಿಎಂಸಿ ನೀರು ನಮಗೆ ದೊರಕುತ್ತಿದ್ದು, 11 ತಾಲೂಕಿನ ಜನರಿಗೆ ಇದರ ಲಾಭ ದೊರಕಲಿದೆ. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ಕಾರ್ಯಕರ್ತರು ಮಾಡಬೇಕಿದ್ದು, ಬಿಜೆಪಿ ಪಕ್ಷದಲ್ಲಿನ ಒಡಕನ್ನು ಕಾಂಗ್ರೆಸ್‌ ಸದ್ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆಸಿರುವದನ್ನು ಗಮನಿಸಬೇಕಿದೆ. ಪಕ್ಷದಲ್ಲಿರುವ ಆಂತರಿಕ ಬಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಕಾರ್ಯವನ್ನು ಮುಖಂಡರು ಮಾಡಲಿದ್ದು, ಪಕ್ಷ ಗುರುತಿಸುವ ವ್ಯಕ್ತಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು.

ನಾಡದ್ರೋಹಿ ಎಂಇಎಸ್‌ನಿಂದ ರೋಸಿ ಹೋದ ಬೆಳಗಾವಿ ಜನತೆ: ಈರಣ್ಣ ಕಡಾಡಿ

ರತ್ನಕ್ಕಾ ಮಾಮನಿ ಹಾಗೂ ವಿರೂಪಾಕ್ಷ ಮಾಮನಿ ಮಾತನಾಡಿ, ಮಲಪ್ರಭಾ ನದಿಗೆ ಕಳಸಾ ಬಂಡೂರಿ ನಾಲಾ ಜೋಡಣೆ ಕುರಿತು ನಡೆದ ನಿರಂತರ 44 ವರ್ಷ ಹೋರಾಟ ಇಂದು ಸುಖಾಂತ್ಯ ಕಂಡಿದ್ದು, ಈ ಯೋಜನೆಯ ಹೋರಾಟದಲ್ಲಿ ಪಾಲ್ಗೊಂಡಂತ ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸಿದ ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶೇಖರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಈರಣ್ಣ ಚಂದರಗಿ ಅಧ್ಯಕ್ಷತೆ ವಹಿಸಿದ್ದರು. ಸಂಸದೆ ಮಂಗಲಾ ಅಂಗಡಿ, ದುಂಡಪ್ಪ ಬೆಂಡವಾಡ, ಜಗದೀಶ ಶಿಂತ್ರಿ, ಪುರಸಭೆ ಉಪಾಧ್ಯಕ್ಷ ದೀಪಕ ಜಾನ್ವೇಕರ, ಜಗದೀಶ ಕೌಜಗೇರಿ, ಪರ್ವತಗೌಡ ಪಾಟೀಲ, ಎಫ್‌.ಎಸ್‌.ಸಿದ್ದನಗೌಡರ, ಡಾ.ನಯನಾ ಬಸ್ಮೆ, ಬಸವರಾಜ ಕಾರದಗಿ, ಶಂಕರಗೌಡ ಪಾಟೀಲ, ರುದ್ರಣ್ಣ ಚಂದರಗಿ, ಇತರರು ಉಪಸ್ಥಿತರಿದ್ದರು. ಸಿ.ವಿ.ಸಂಬಯ್ಯನಮಠ ನಿರೂಪಿಸಿದರು.

click me!