ಕೇಂದ್ರ ಗೃಹ ಸಚಿವ ಅಮಿತ್ ಶಾ ಓರ್ವ ರಾಜಕಾರಣಿ, ಪೂಜಾರಿಯಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅಮಿತ್ ಶಾ ರಾಮ ಮಂದಿರ ಉದ್ಘಾಟನೆ ಘೋಷಣೆಯಿಂದ ಕಾಂಗ್ರೆಸ್ ಕೆರಳಿದ್ದು, ಅಮಿತ್ ಶಾ ವಿರುದ್ಧ ಗುಡುಗಿದೆ.
ಪಾಣಿಪತ್(ಜ.06): ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿದ ಒಂದು ಘೋಷಣೆ ಹಲವು ದಶಕಗಳಿಂದ ಕಾಯುತ್ತಿರುವ ಹಿಂದೂಗಳ ಕಣ್ಣರಳಿಸಿತ್ತು. ಅದು ರಾಮ ಮಂದಿರ ಉದ್ಘಾಟನೆ ದಿನಾಂಕ ಘೋಷಣೆ. ಜನವರಿ 1, 2024ರಂದು ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ ಎಂದು ಅಮಿತ್ ಶಾ, ತ್ರಿಪುರ ಹಾಗೂ ಮೇಘಾಲಯ ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು. ಇಂದು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಮಿತ್ ಶಾ ರಾಜಕಾರಣಿ, ಪೂಜಾರಿಯಲ್ಲ. ದೇಶವನ್ನು ಕಾಪಾಡುವುದು ನಿಮ್ಮ ಕರ್ತವ್ಯ. ರೈತರಿಗೆ ಬೆಂಬಲ ಬೆಲೆ ನೀಡುವುದು ನಿಮ್ಮ ಕೆಲಸ. ಇದರ ಬದಲು ಅಮಿತ್ ಶಾ ದೇವಸ್ಥಾನ ಉದ್ಘಾಟನೆ ಘೋಷಣೆ ಮಾಡುವದಲ್ಲ ಎಂದಿದ್ದಾರೆ.
ಬಿಜೆಪಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ರಾಮ ಮಂದಿರ ಉದ್ಘಾಟನೆ ಕುರಿತು ಹೇಳಿಕೆ ನೀಡುವ ಮೂಲಕ ದೇಶದ ಜನರ ಗಮನ ಬೇರೆಡೆಗೆ ಸೆಳೆಯುತ್ತಿದೆ. ಆದರೆ ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟ ಪಕ್ಷವಾಗಿದೆ. 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದ ಬಿಜೆಪಿ ಇದೀಗ ಮರೆತಿದೆ. 15 ಲಕ್ಷ ರೂಪಾಯಿ ನೀಡುತ್ತೇವೆ ಎಂದಿತ್ತು. ಯಾವೂದೇ ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಿಜೆಪಿ ಆಪರೇಶನ್ ಕಮಲ ಮೂಲಕ ಸರ್ಕಾರವನ್ನು ಬೀಳಿಸುವ ಯತ್ನ ಮಾಡುತ್ತಿದೆ ಎಂದು ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಡೇಟ್ ಫಿಕ್ಸ್..!
ಈಶಾನ್ಯ ರಾಜ್ಯಗಳ ಚುನಾವಣೆ ಮೇಲೆ ಗಮನ ಕೇಂದ್ರಿಕರಿಸಿರುವ ಅಮಿತ್ ಶಾ, ನಿನ್ನೆ(ಜ.05) ರಾಮ ಮಂದಿರ ಉದ್ಘಾಟನೆ ದಿನಾಂಕ ಘೋಷಣೆ ಮಾಡಿದ್ದರು. ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ಸರ್ಕಾರ ಸ್ವಾತಂತ್ರ ಬಂದ ಬಳಿಕ ರಾಮ ಮಂದಿರ ವಿಚಾರವನ್ನು ಪರಿಹರಿಸುವ ಯತ್ನಕ್ಕೆ ಹೋಗಲಿಲ್ಲ. ಕೆಲ ಸಮುದಾಯದ ಮತ ಸೆಳೆಯಲು ರಾಮ ಮಂದಿರ ವಿಚಾರ ಕೈಬಿಟ್ಟಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಮ ಮಂದಿ ಕಟ್ಟುವ ಪಣತೊಟ್ಟಿತು. ನ್ಯಾಯಾಲದಲ್ಲಿದ್ದ ಅಡತಡೆ ನಿವಾರಿಸಲು ತಂಡ ರಚಿಸಿತು. ಸುಪ್ರೀಂ ಕೋರ್ಟ್ ರಾಮ ಮಂದಿರ ಕಟ್ಟಲು ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ನಿರ್ಮಾಣ ಕಾರ್ಯ ಆರಂಭಿಸಿತು. ಖುದ್ದು ಮೋದಿ ತೆರಳಿ ಶಿಲನ್ಯಾಸ ಕಾರ್ಯನೇರವೇರಿಸಿದ್ದುರು. ಇದೀಗ ರಾಮ ಮಂದಿ ಉದ್ಘಾಟನೆ ದಿನಾಂಕ ಸಮೀಪಸುತ್ತಿದೆ. ಈಗಲೇ ಟಿಕೆಟ್ ಬುಕ್ ಮಾಡಿಕೊಳ್ಳಿ ಎಂದು ಅಮಿತ್ ಶಾ ಹೇಳಿದ್ದರು.
ಜೆಡಿಎಸ್ ಭದ್ರಕೋಟೆಯಿಂದ ಅಮಿತ್ ಶಾ ಆಟ ಶುರು: ಕಮಲ ಅರಳಿಸಲು ಚಾಣಕ್ಯನ ಸೂತ್ರವೇನು?
ದಕ್ಷಿಣ ತ್ರಿಪುರಾದ ಸಬ್ರೂಂನಲ್ಲಿ ಬಿಜೆಪಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅಮಿತ್ ಶಾ ‘ಈ ಹಿಂದೆ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು, ರಾಮಮಂದಿರ ವಿಷಯವನ್ನು ಬಹುಕಾಲ ನ್ಯಾಯಾಲಯ ವ್ಯಾಪ್ತಿಯಲ್ಲಿ ಇಟ್ಟು ಸುಮ್ಮನಾಗಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ ಸುಪ್ರೀಂಕೋರ್ಚ್ ಆದೇಶದ ಬೆನ್ನಲ್ಲೇ ರಾಮಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ್ದರು. ರಾಹುಲ್ ಬಾಬಾ, ಸಬ್ರೂಂನಿಂದ ಕೇಳಿಸಿಕೊಳ್ಳಿ 2024ರ ಜ.1ರ ವೇಳೆಗೆ ರಾಮಮಂದಿರ ಪೂರ್ಣಗೊಳ್ಳಲಿದೆ’ ಎಂದು ನೇರವಾಗಿ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಟಾಂಗ್ ನೀಡಿದರು. ಈ ಮುನ್ನ 2023ರ ಡಿಸೆಂಬರ್ ಒಳಗೆ ಅಥವಾ 2024ರ ಸಂಕ್ರಾಂತಿಗೆ ರಾಮಮಂದಿರದ ಗರ್ಭಗುಡಿ ಉದ್ಘಾಟನೆಯಾಗಲಿದೆ ಎಂದು ಈ ಹಿಂದೆ ರಾಮಮಂದಿರ ನಿರ್ಮಾಣ ಸಮಿತಿ ಹೇಳಿಕೊಂಡಿತ್ತು.