ಅಕ್ಕಿಯನ್ನು ಬೇಕಾಬಿಟ್ಟಿಯಾಗಿ ನೀಡಿದರೆ, ನಾವೂ ಸಹ ಸಿಲೋನ್(ಶ್ರೀಲಂಕಾ) ಅಥವಾ ಪಾಕಿಸ್ತಾನದಂತಾಗುವುದರಲ್ಲಿ ಅನುಮಾನ ಇಲ್ಲ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಸೂಚ್ಯವಾಗಿ ಹೇಳಿದರು.
ದಾವಣಗೆರೆ (ಜೂ.18): ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಾಗಿ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲವೆನ್ನುವುದು ಸರಿಯಲ್ಲ. ಅದು ಕಷ್ಟದ ಸಮಯದಲ್ಲಿ ಉಪಯೋಗವಾಗಬೇಕಾದ ಅಕ್ಕಿ. ಅಂತಹ ಅಕ್ಕಿಯನ್ನು ಬೇಕಾಬಿಟ್ಟಿಯಾಗಿ ನೀಡಿದರೆ, ನಾವೂ ಸಹ ಸಿಲೋನ್(ಶ್ರೀಲಂಕಾ) ಅಥವಾ ಪಾಕಿಸ್ತಾನದಂತಾಗುವುದರಲ್ಲಿ ಅನುಮಾನ ಇಲ್ಲ ಎಂದು ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಸೂಚ್ಯವಾಗಿ ಹೇಳಿದರು. ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ 5 ಕೆಜಿ ಉಚಿತ ಅಕ್ಕಿ ನೀಡುತ್ತಿದ್ದಾರೆ.
ಕೋವಿಡ್ ಸಮಯದಲ್ಲಿ 10 ಕೆಜಿ ಅಕ್ಕಿ ನೀಡಿದ್ದರು. ವಾಸ್ತವ ಹೀಗಿದ್ದರೂ ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ಯೋಜನೆಗೆ ಕೇಂದ್ರ ಅಕ್ಕಿ ನೀಡುತ್ತಿಲ್ಲವೆನ್ನುವುದು ತಪ್ಪು ಎಂದರು. ನರೇಂದ್ರ ಮೋದಿ ಪ್ರಧಾನಿಯಾಗಿ 9 ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ದೂರದೃಷ್ಟಿಯೋಜನೆ, ದಿಟ್ಟಕ್ರಮ, ವಿಶಿಷ್ಟನಿರ್ಧಾರಗಳಿಂದಾಗಿ ಕೇವಲ ಭಾರತವಷ್ಟೇ ಅಲ್ಲ, ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಉತ್ತಮ ಪಾರದರ್ಶಕ ಆಡಳಿತ, ಬಡವರ ಕಲ್ಯಾಣ, ರಾಷ್ಟ್ರೀಯ ಭದ್ರತೆ, ಸ್ವಾವಲಂಬನೆ, ಜಾಗತಿಕ ಪ್ರತಿಷ್ಠೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಭಾರತವನ್ನು ಮುಂಚೂಣಿಗೆ ಕೊಂಡೊಯ್ದು ನಿಲ್ಲಿಸುವ ಕೆಲಸವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.
ಪಕ್ಷದ ನಾಯಕರ ವ್ಯತ್ಯಾಸ, ನಿರ್ಣಯಗಳಿಂದ ಬಿಜೆಪಿಗೆ ಸೋಲು: ಎಲ್.ಆರ್.ಶಿವರಾಮೇಗೌಡ
ಕೇಂದ್ರದ ಕಲ್ಯಾಣ ಯೋಜನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುದನ್ನು ಖಾತರಿಪಡಿಸಲಾಗಿದೆ. ಮೂಲಭೂತ ಅಗತ್ಯಗಳಾದ ಶಿಕ್ಷಣ, ಆರೋಗ್ಯ, ಆರ್ಥಿಕ ಸ್ವಾವಲಂಬನೆ, ರಸ್ತೆ, ನೀರು, ವಿದ್ಯುತ್ ಹೀಗೆ ದೇಶದ ಮೂಲೆ ಮೂಲೆಯ ಗ್ರಾಮ, ಕುಗ್ರಾಮಗಳಿಗೂ ತಲುಪಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ಕೋವಿಡ್-19 ಮಹಾಮಾರಿಯಿಂದಾಗಿ ಜಗತ್ತಿನ ಅನೇಕ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ತತ್ತರಿಸಿದ್ದರೂ ಭಾರತ ಮಾತ್ರ ಆರ್ಥಿಕತೆಯಲ್ಲೂ ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.
ದಿಟ್ಟಕ್ರಮಗಳ ಮೂಲಕ ದೇಶಕ್ಕೆ ಹೊಸ ದಿಕ್ಕು: ನೇಷನ್ ಫಸ್ಟ್ ಎಂಬ ಮನೋಭಾವದಿಂದ ಪ್ರೇರಣೆ ಪಡೆದ ನಮ್ಮ ಸರ್ಕಾರ ಹಲವಾರು ದಿಟ್ಟಕ್ರಮಗಳ ಮೂಲಕ ಭಾರತಕ್ಕೆ ಹೊಸ ದಿಕ್ಕನ್ನು ತೋರಿಸಿದೆ. ದೇಶದ ಒಳಗಡೆ ಮತ್ತು ಹೊರಡಗೆ ಎರಡೂ ವಿಷಯಗಳಲ್ಲಿ ರಾಷ್ಟ್ರದ ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ಮೋದಿಯವರು ಕೈಗೊಂಡ ನಿರ್ಧಾರಗಳಿಗೆ ಎಂತಹವರೂ ತಲೆದೂಗುವಂತಿವೆ. ವಿಶ್ವದೆಲ್ಲೆಡೆ ನರೇಂದ್ರ ಮೋದಿಗೆ ಸಹಕಾರ ಸಿಗುತ್ತಿದ್ದು, ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗುತ್ತಿದೆ. ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕೇಂದ್ರದ ಯೋಜನೆಯಡಿ ದಾವಣಗೆರೆ ಜಿಲ್ಲೆಗೂ ಸಾಕಷ್ಟುಅನುದಾನ ನೀಡಲಾಗಿದೆ. ಪ್ರಧಾನ ಮಂತ್ರಿ ಉಜ್ವಲದಡಿ 1.29 ಲಕ್ಷ ಜನ ಫಲಾನುಭವಿಗಳಿದ್ದಾರೆ. ಕಿಸಾನ್ ಸಮ್ಮಾನ್‌ನಡಿ 1,55,717 ರೈತರಿಗೆ 442 ಕೋಟಿ ರು. ನೀಡಲಾಗಿದೆ. ಆಯುಷ್ಮಾನ್ ಭಾರತ್‌ನಡಿ 55,118 ಜನರಿಗೆ ಉಪಯೋಗವಾಗಿದೆ. ಮುದ್ರಾ ಯೋಜನೆಯಡಿ 966 ಕೋಟಿ ರು. ಸಾಲ ನೀಡಲಾಗಿದೆ. ಹೀಗೆ ಹಲವಾರು ಯೋಜನೆಯಡಿ ದಾವಣಗೆರೆ ಜಿಲ್ಲೆಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ಪಂದಿಸಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ಹರಿಹರ ಶಾಸಕ ಬಿ.ಪಿ.ಹರೀಶ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ನಿಕಟ ಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್, ಉತ್ತರ, ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿಗಳಾದ ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಪಿ.ಸಿ.ಶ್ರೀನಿವಾಸ ಭಟ್, ಶಿವನಗೌಡ ಪಾಟೀಲ್, ಶಿವರಾಜ ಪಾಟೀಲ್ ಇತರರು ಇದ್ದರು.
ಬಿಜೆಪಿ ಮುಖಂಡರಿಂದಲೇ ಪಕ್ಷಕ್ಕೆ ಸೋಲು: ಸಂಸದ ಮುನಿಸ್ವಾಮಿ ಬೇಸರ
ದಾವಣಗೆರೆಯಲ್ಲಿ ಸ್ಮಾರ್ಚ್ ಸಿಟಿ ಯೋಜನೆಯಡಿ ಕಾಮಗಾರಿಗಳು ಕಳಪೆಯಾಗಿದ್ದರೆ, ಕಾಂಗ್ರೆಸ್ ಸರ್ಕಾರವೇ ಇದ್ದು, ತನಿಖೆ ಮಾಡಿಸಲಿ. ದಾವಣಗೆರೆಯಲ್ಲಿ ವಿಮಾನ ನಿಲ್ದಾಣಕ್ಕೆ ಜಾಗ ನೀಡಿದರೆ, ವಿಮಾನ ನಿಲ್ದಾಣದ ಕೆಲಸ ಆರಂಭವಾಗುತ್ತದೆ. ಜಿಲ್ಲಾಧಿಕಾರಿಗಳು ಸೂಕ್ತ ಜಮೀನು ಒದಗಿಸುವ ಕೆಲಸ ಮಾಡಲಿ.
- ಡಾ.ಜಿ.ಎಂ.ಸಿದ್ದೇಶ್ವರ, ದಾವಣಗೆರೆ ಸಂಸದ.