
ಹಾವೇರಿ (ಆ.15): ಧರ್ಮಸ್ಥಳ ಪ್ರಕರಣದಲ್ಲಿ ಈವರೆಗೆ ಏನೇನು ಆಗಿದೆಯೋ ಅದನ್ನು ಸರ್ಕಾರ ಬಹಿರಂಗ ಪಡಿಸಲಿ. ಅದನ್ನು ಮುಚ್ಚಿಟ್ಟುಕೊಳ್ಳುವುದು ಸರಿ ಅಲ್ಲ. ಸತ್ಯ ಏನು ಎಂಬುದು ಜನರಿಗೆ ತಿಳಿಯಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಡಿಕೆಶಿ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಪ್ರಕರಣದಲ್ಲಿ ಈವರೆಗೆ ಏನೇನು ಆಗಿದೆ, ತನಿಖೆಯಲ್ಲಿ ಇತ್ತೀಚೆಗೆ ಏನು ಗೊತ್ತಾಗಿದೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದರು.
ಒಂದು ಧಾರ್ಮಿಕ ಕ್ಷೇತ್ರವನ್ನು ಇಷ್ಟು ಅವಹೇಳನಕಾರಿಯಾಗಿ ಅಪಪ್ರಚಾರ ಮಾಡಿರುವುದು ಇತಿಹಾಸದಲ್ಲಿಯೇ ಇಲ್ಲ. ಸರ್ಕಾರ ಇದಕ್ಕೆಲ್ಲ ಅವಕಾಶ ಮಾಡಿ ಕೊಟ್ಟಿದೆ. ನಾಳೆ ಇನ್ನೊಬ್ಬರು ಬಂದು ಇನ್ನೊಂದು ಹೇಳುತ್ತಾರೆ. ಜವಾಬ್ದಾರಿಯುತ ಸರ್ಕಾರ ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಯಾರನ್ನೋ ಓಲೈಸಲು ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು. ಅನಾಮಿಕ ಮಸುಕುಧಾರಿ ಯಾರು ಎಂಬುದನ್ನು ಬಹಿರಂಗಪಡಿಸಲಿ. ಇಲ್ಲದಿದ್ದರೆ ಧಾರ್ಮಿಕ ಕ್ಷೇತ್ರದ ಅಪಪ್ರಚಾರಕ್ಕೆ ಸರ್ಕಾರವೇ ಕುಮ್ಮಕ್ಕು ನೀಡಿದಂತಾಗುತ್ತದೆ. ನಾನು ಮಂಪರು ಪರೀಕ್ಷೆಗೆ ಸಿದ್ಧನಿದ್ದೇನೆ ಎಂದು ಮಸುಕುಧಾರಿ ಮೊದಲೇ ಹೇಳಿದ್ದಾರೆ. ಅವನೇ ತಯಾರಿದ್ದಾಗ ಮಂಪರು ಪರೀಕ್ಷೆ ಮಾಡಲು ಏನು ತೊಂದರೆ ಎಂದು ಪ್ರಶ್ನಿಸಿದರು.
ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರ ಸರ್ಕಾರದ ವಿರುದ್ಧ ಹರ್ ಬೂತ್, ಮತ ಲೂಟ್ ಹೋರಾಟ ವಿಚಾರ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಯಾರು ಲೂಟಿ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮೊದಲು ಸೋನಿಯಾ ಗಾಂಧಿ ಈ ಬಗ್ಗೆ ಉತ್ತರ ಕೊಡಲಿ ಎಂದು ತಿರುಗೇಟು ನೀಡಿದರು. ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಮತಗಳವು ಆರೋಪಕ್ಕೆ ಪ್ರತಿಕ್ರಿಯಿಸಿ, ಕೆ.ಎನ್. ರಾಜಣ್ಣ ಸತ್ಯ ಹೇಳಿ ಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ಸತ್ಯಕ್ಕೆ ಸ್ಥಳ ಇಲ್ಲ. ಆ ಪಕ್ಷದಲ್ಲಿ ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಎಂದು ಸಾಬೀತು ಮಾಡುವ ಅವರ ನಾಯಕ ರಾಹುಲ್ ಗಾಂಧಿ ಇದ್ದಾರೆ. ದ್ವಂದ್ವದಲ್ಲಿ ರಾಹುಲ್ ಗಾಂಧಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದರು.
ತಾಯಿ ಗೌರವಿಸುವ ದೇಶ ಎಂದಿಗೂ ಬಡವಾಗದು: ಯಾವ ದೇಶದಲ್ಲಿ ತಾಯಿಯ ಬಗ್ಗೆ ಗೌರವ ಇದೆಯೋ, ಆ ದೇಶ ಎಂದೂ ಬಡವಾಗುವುದಿಲ್ಲ. ಯಾವ ದೇಶದಲ್ಲಿ ತಾಯಿ, ಹೆಣ್ಣಿಗೆ ಗೌರವ ಇಲ್ಲವೋ ಆ ದೇಶ ಬಹಳ ದಿನ ಉಳಿಯುವುದಿಲ್ಲ. ನಮ್ಮ ದೇಶದಲ್ಲಿ ಸಂಸ್ಕೃತಿ, ಸಂಸ್ಕಾರ ಇದೆ. ಅದನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕು ಎಂದು ತಿಳಿಸಿದರು. ಜನ್ಮ ಪೂರ್ವದ ಸಂಬಂಧವಿರುವುದು ಒಂದೇ, ಅದು ತಾಯಿ- ಮಗುವಿನ ಸಂಬಂಧ. ಮಿಕ್ಕೆಲ್ಲ ಸಂಬಂಧಗಳು ಜನ್ಮ ತಾಳಿದ ನಂತರದ್ದು. ಜನ್ಮ ಪೂರ್ವದಲ್ಲಿ ತಾಯಿಯ ಗರ್ಭದಲ್ಲಿ ಪ್ರಾರಂಭವಾಗಿರುವ ತಾಯಿಯ ಸಂಬಂಧ ಭೂಗರ್ಭಕ್ಕೆ ಹೋಗುವವರೆಗೂ ಇರುತ್ತದೆ. ಸೃಷ್ಟಿಯ ಅದ್ಭುತವಾದ ಪ್ರಕ್ರಿಯೆ. ಪ್ರತಿಯೊಂದು ಆಯಾಮದಲ್ಲಿ ಬಹಳ ವಿಶೇಷತೆ ಕಾಣಿಸುತ್ತದೆ. ಅದನ್ನು ಆಧ್ಯಾತ್ಮಿಕವಾಗಿ ನೋಡಿದರೆ ತಾಯಿಯ ವಿಶೇಷತೆ ಕಾಣಿಸುತ್ತದೆ. ವೈಜ್ಞಾನಿಕವಾಗಿ ನೋಡಿದರೆ ವೈಜ್ಞಾನಿಕತೆ ಕಾಣಿಸುತ್ತದೆ. ಸಾಂಸ್ಕೃತಿಕವಾಗಿ ನೋಡಿದರೆ ಸಂಸ್ಕೃತಿ ಕಾಣಿಸುತ್ತದೆ. ಅದ್ಭುತವಾದ ಸಂಬಂಧ ಆ ಸೃಷ್ಟಿಕರ್ತ ಮಾಡಿದ್ದಾನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.