
ವಿಧಾನಸಭೆ (ಆ.14): ಆಸ್ತಿ ನೋಂದಣಿ ಪ್ರಕ್ರಿಯೆ ಇನ್ನಷ್ಟು ಸರಳೀಕಣಗೊಳಿಸುವ, ಡಿಜಿಟಲೀಕರಣಗೊಳಿಸುವ, ಅಧಿಕಾರಿಗಳ ಕಂಪ್ಯೂಟರ್ ಡಿಜಿಟಲ್ ಸಹಿ ಕಡ್ಡಾಯ ಮಾಡುವ ಹಾಗೂ ತಾಂತ್ರಿಕತೆ ಬಳಸಿಕೊಂಡು ಅಧಿಕಾರಿಗಳ ಮಧ್ಯಪ್ರವೇಶ ಕಡಿಮೆ ಮಾಡಲು ತರಲಾಗಿರುವ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ 2025ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧೇಯಕಕ್ಕೆ ಅನುಮೋದನೆ ನೀಡುವಂತೆ ಕೋರಿದರು. ಸುದೀರ್ಘ ಚರ್ಚೆ ಹಾಗೂ ಸಲಹೆಗಳ ಬಳಿಕ ಸ್ಪೀಕರ್ ಯು.ಟಿ.ಖಾದರ್ ಧ್ವನಿಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ಪಡೆದರು.
ಇದಕ್ಕೂ ಮುನ್ನ ಮಾತನಾಡಿದ ಸಚಿವರು, ಈ ತಿದ್ದುಪಡಿ ವಿಧೇಯಕದ ಮೂಲಕ ಆಸ್ತಿ ನೋಂದಣಿ ಸರಳೀಕರಣ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ತಾಂತ್ರಿಕತೆ ಬಳಸಿಕೊಂಡು ಅಧಿಕಾರಿಗಳ ಮಧ್ಯಪ್ರವೇಶವನ್ನು ಸಕ್ರಿಯವಾಗಿ ಕಡಿಮೆ ಮಾಡಲಾಗಿದೆ. ಕಂಪ್ಯೂಟರ್ ಡಿಜಿಟಲ್ ಸಹಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಆಸ್ತಿ ನೋಂದಣೀಗೆ ಎಲ್ಲ ದಾಖಲೆಗಳೂ ಡಿಜಿಟಲ್ ಆಗಿಯೇ ಬರಬೇಕು. ಸೆಕ್ಷನ್ 32ನಲ್ಲಿ ಈ ತಿದ್ದುಪಡಿ ತರಲಾಗಿದೆ. ದಾಖಲೆಗಳು ಡಿಜಿಟಲ್ ಆಗಿ ಪರಿಶೀಲನೆಯಾಗುವಾಗ ರೈತರು ನೇರವಾಗಿ ಸರ್ಕಾರಿ ಕಚೇರಿಗಳಿಗೆ ಬರುವ ಅಗತ್ಯವೂ ಇಲ್ಲ. ಹೀಗಾಗಿ ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಅಥವಾ ಜನ ಸಾಮಾನ್ಯರ ಖುದ್ದು ಆಗಮನಕ್ಕೂ ವಿನಾಯಿತಿ ನೀಡಲಾಗುತ್ತಿದೆ.
ಆದರೆ, ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ಜಿಪಿಎ ಆಧಾರದ ಮೇಲೆ ನಡೆಯುವ ವ್ಯವಹಾರಗಳಿಗೆ ಮಾತ್ರ ಇಬ್ಬರೂ ಆಗಮಿಸಬೇಕಾಗುತ್ತದೆ ಹಾಗೂ ಜಿಪಿಎ ಕಡ್ಡಾಯವಾಗಿ ರಿಜಿಸ್ಟರ್ ಆಗಿರಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಈ ತಿದ್ದುಪಡಿಯಿಂದ ಆಗುವ ಪ್ರಯೋಜನವನ್ನು ಉದಾಹರಣೆ ಸಹಿತ ವಿವರಿಸಿದ ಸಚಿವರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒಬ್ಬರಿಗೆ ನಿವೇಶನ ಮಂಜೂರು ಮಾಡಿದರೆ ರಿಜಿಸ್ಟ್ರಾರ್ ಅಧಿಕಾರಿ ಇಲ್ಲದೆಯೂ ಅದನ್ನು ಸ್ವಯಂ ಆಗಿ(ಆಟೋಮ್ಯಾಟಿಕ್) ನೋಂದಣಿ ಮಾಡುವಂತಹ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ.
ತಹಸೀಲ್ದಾರ್‌ಗೆ 94 ಸಿ 94 ಸಿಸಿ ಯಲ್ಲಿ ಹಕ್ಕುಪತ್ರ ಕಡ್ಡಾಯ ನೋಂದಣಿ ಮಾಡುವ ಅವಕಾಶ ನೀಡಿದ್ದೇವೆ. ನಮೂನೆ 53, 57ರ ಅಡಿ ಮಂಜೂರಿದಾರರಿಗೆ ತಹಸೀಲ್ದಾರ್ ಬಗರ್ ಹುಕುಂ ಭೂಮಿ ನೋಂದಣಿ ಮಾಡಿಕೊಡಲು ಸಬ್ ರಿಜಿಸ್ಟ್ರಾರ್ ಅಗತ್ಯವಿಲ್ಲ. ಮಂಜೂರಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ತಹಸೀಲ್ದಾರ್ ಡಿಜಿಟಲ್ ಆಗಿ ಅಪ್ಲೋಡ್ ಮಾಡಿದರೆ ತಾನಾಗಿಯೇ ನೋಂದಣಿ ಆಗಲಿದೆ. ನಕಲಿ ಆರ್‌ಟಿಸಿ, ಖಾತಾ ಪೇಪರ್ ತಂದು ಆಸ್ತಿ ನೋಂದಣಿ ಮಾಡಿಕೊಳ್ಳುವಂತಹ ಅಕ್ರಮಗಳಿಗೂ ಕಡಿವಾಣ ಬೀಳಲಿದೆ ಎಂದರು.
ರೈತರು ತಾವು ಪಡೆದ ಸಾಲ ತೀರಿಸಿದ್ದನ್ನು ಪಹಣಿ ಕಾಲಂನಿಂದ ತೆಗೆಯಲಿಕ್ಕೂ ಸರ್ಕಾರಿ ಕಚೇರಿಗೆ ಅಲೆಯಬೇಕಾದ, ಹಣ ನೀಡುವ ಸ್ಥಿತಿ ಇದೆ. ತಂತ್ರಜ್ಞಾನ ಕಾಲದಲ್ಲೂ ಋಣಮುಕ್ತ ದಾಖಲೆ ಪಡೆಯಲೂ ಸಹ ಮಧ್ಯವರ್ತಿ ಹಿಡಿಯಬೇಕಾದ ದುಸ್ಥಿತಿ ಇದೆ. ಹೀಗಾಗಿಯೇ ನೋಂದಣಿ ಸರಳೀಕರಣಗೊಳಿಸುವ ಉದ್ದೇಶದಿಂದ ಈ ನೂತನ ತಿದ್ದುಪಡಿ ತರಲಾಗಿದೆ. ಅಲ್ಲದೆ, 2011ರಲ್ಲೇ ಕಡ್ಡಾಯಗೊಳಿಸಿರುವ 11 ಇ ಸ್ಕೆಚ್‌ಗೆ ಕಾನೂನು ಮಾನ್ಯತೆ ಇಲ್ಲ ಎನ್ನುವ ಆಪಾದನೆ ಇತ್ತು. ಈ ತಿದ್ದುಪಡಿ ಮೂಲಕ ಅದನ್ನು ಕಾನೂನು ಅಡಿ ತರಲಾಗಿದೆ ಎಂದರು. ಜನ ಸ್ನೇಹಿಯಾಗಿ ಕಾಯ್ದೆಗೆ ತಿದ್ದುಪಡಿ ತಂದ ಕಾರಣಕ್ಕೆ ಸಚಿವರಿಗೆ ಪಕ್ಷಾತೀತವಾಗಿ ಸದಸ್ಯರು ಅಭಿನಂದನೆ ತಿಳಿಸಿದ್ದು ವಿಶೇಷವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.