
ಹಾವೇರಿ (ಸೆ.11): ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆಯನ್ನು ರಾಜ್ಯ ಸರ್ಕಾರ ಗ್ರಾಪಂ ಮಟ್ಟದಲ್ಲಿ ಸಮೀಕ್ಷೆ ಮಾಡಿ, ಮಧ್ಯಂತರ ಪರಿಹಾರ ಕೊಡಬೇಕು. ಕೇಂದ್ರಕ್ಕೆ ಬೆಳೆ ನಷ್ಟದ ವರದಿ ಕಳುಹಿಸಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ವರ್ಷ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ. ಎರಡು ವರ್ಷವೂ ರೈತರ ಬೆಳೆ ನಷ್ಟವಾಗಿದೆ. ಬಡವರ ಮನೆ ಬಿದ್ದಿವೆ. ಎಷ್ಟೊ ಮನೆಗಳಲ್ಲಿ ನೀರು ಒಳಗಡೆ ಹೋಗಿ ತೊಂದರೆ ಕೊಟ್ಟಿದೆ. ಇಷ್ಟೆಲ್ಲ ಆದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಕಿಡಿಕಾರಿದರು.
ರೈತರು ಮತ್ತು ರೈತ ಸಂಘಟನೆಗಳು ಕೂಗು ಹಾಕಿದ ಮೇಲೆ ಸಿಎಂ ಕಾಟಾಚಾರದ ಮೀಟಿಂಗ್ ಮಾಡಿದ್ದಾರೆ. ಇದುವರೆಗೂ ಪರಿಹಾರ ಸಿಕ್ಕಿಲ್ಲ. ರಾಜ್ಯ ಸರ್ಕಾರದ ಸೂಚನೆ ಇದೆಯೊ ಗೊತ್ತಿಲ್ಲ. ಬೆಳೆನಷ್ಟದ ಕ್ಷೇತವನ್ನು ಪ್ರಾಥಮಿಕ ಸಮೀಕ್ಷೆ ಮಾಡಬೇಕು. ಪ್ರತಿ ಗ್ರಾಪಂ ಮಟ್ಟದಲ್ಲಿ ಎಷ್ಟು ಬೆಳೆ ನಷ್ಟವಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಸರ್ವೆ ಮಾಡಿ ತಾಲೂಕು ಎಡಿ ಸಮೀಕ್ಷೆ ಮಾಡಿ, ಜಿಲ್ಲಾ ಮಟ್ಟಕ್ಕೆ ತೆಗೆದುಕೊಂಡು ಬಂದು ಬೆಳೆ ನಷ್ಟ ತಿಳಿಯಬೇಕು.
ಕೇವಲ ಅರ್ಜಿ ಕೊಟ್ಟಲ್ಲಿ ಮಾತ್ರ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಬೆಳೆ ಹಾನಿಯಾಗಿರುವುದರಿಂದ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಬೇಕಿತ್ತು. ಅದನ್ನು ಮಾಡಿಲ್ಲ. ಜಿಲ್ಲೆಯಲ್ಲಿ 23,556 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಿದ್ದಾರೆ. ಆದರೆ, ಇದಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ. ಬಿತ್ತಿದ ಮೇಲೆ ಹೊಲಕ್ಕೆ ಕಾಲಿಡದ ಸ್ಥಿತಿ ಉಂಟಾಗಿದೆ. ಕೃಷಿ ಇಲಾಖೆ ರೈತರ ಸಮಸ್ಯೆಗೆ ಸಂದಿಸುತ್ತಿಲ್ಲ.
ರೈತರ ಬಗ್ಗೆ ಯಾವುದೇ ಕಳಕಳಿ ಇಲ್ಲ. ಸರಿಯಾದ ಸಮೀಕ್ಷೆ ಮಾಡಿ ನಷ್ಟವನ್ನು ಕೂಡಲೇ ಮೊದಲ ಕಂತಿನಲ್ಲಿ ಮಧ್ಯಂತರ ಪರಿಹಾರ ನೀಡಬೇಕು. ನಂತರ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ನೀಡಬೇಕು. ರಾಜ್ಯ ಸರ್ಕಾರ ಆದಷ್ಟು ಬೇಗ ಸಮೀಕ್ಷೆ ಮಾಡಿ ಕೇಂದ್ರಕ್ಕೆ ವರದಿ ಕಳುಹಿಸಿದರೆ ಕೇಂದ್ರದಿಂದ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ರಾಜ್ಯದ ರೈತರಿಗೆ ಅನ್ವಯವಾಗಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.