
ಬೆಂಗಳೂರು (ಸೆ.11): ರಾಜಧಾನಿಯ ಹೃದಯಭಾಗದಲ್ಲಿ ವಿವಿಧ ಐವತ್ತು ಪ್ರಭೇದದ 371 ಮರಗಳಿಂದ ಕೂಡಿರುವ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯ ಪ್ರದೇಶವನ್ನು ಜೀವವೈವಿಧ್ಯತೆಯ ಪಾರಂಪರಿಕ ತಾಣ ಎಂದು ಘೋಷಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜೀವ ವೈವಿಧ್ಯ ಮಂಡಳಿಯ ಸಭೆಯಲ್ಲಿ ಇತಿಹಾಸ ಪ್ರಸಿದ್ಧ ಮತ್ತು ಸಸ್ಯ ಶ್ರೀಮಂತಿಕೆಯಿಂದ ಕೂಡಿದ ಕಂಟೋನ್ಮೆಂಟ್ ರೈಲ್ವೆ ಕಾಲೋನಿಯ ಸರ್ವೆ ನಂ. 1028 ಮತ್ತು 1047 ರಲ್ಲಿರುವ 8.61 ಎಕರೆ ಪ್ರದೇಶವನ್ನು ಜೈವಿಕ ವೈವಿಧ್ಯ ಕಾಯ್ದೆ, 2002ರ ಸೆಕ್ಷನ್ 37ರ ಅಡಿಯಲ್ಲಿ ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸುವ ನಿರ್ಣಯ ಕೈಗೊಂಡಿರುವುದಾಗಿ ತಿಳಿಸಿದರು.
34,843 ಚದರಡಿ ವಿಸ್ತೀರ್ಣದ ಈ ಪ್ರದೇಶ ಸಸ್ಯ ಸಂಕುಲ, ಪಕ್ಷಿ ಸಂಕುಲ ಮತ್ತು ಕೀಟ ಸಂಕುಲದ ತಾಣವಷ್ಟೇ ಅಲ್ಲದೆ ಬೆಂಗಳೂರು ನಗರಕ್ಕೆ ಅತ್ಯಗತ್ಯವಾದ ಶ್ವಾಸತಾಣವಾಗಿದೆ. 50-60 ವರ್ಷಗಳ ಬೃಹತ್ ಮರಗಳಿರುವ ಈ ಸುಂದರ ಪ್ರದೇಶವನ್ನು ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರ ಖಾಸಗಿ ಸಂಸ್ಥೆಯೊಂದಕ್ಕೆ 60 ವರ್ಷಗಳ ದೀರ್ಘಾವಧಿಗೆ ಗುತ್ತಿಗೆ ನೀಡಿತ್ತು. ಗುತ್ತಿಗೆ ಪಡೆದ ಸಂಸ್ಥೆ ಇಲ್ಲಿರುವ 368 ಮರಗಳನ್ನು ಕಡಿಯಲು ಅನುಮತಿ ಕೋರಿತ್ತು. ಮರಗಳ ಹನನಕ್ಕೆ ಸ್ಥಳೀಯರು ಸೇರಿದಂತೆ ಪರಿಸರ ಪ್ರೇಮಿಗಳು, ವೃಕ್ಷ ಪ್ರೇಮಿಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ಸಚಿವರು ಹೇಳಿದರು.
ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಕಳೆದ ಜೂನ್ 20ರಂದು ಸ್ಥಳಕ್ಕೆ ಖುದ್ದು ಭೇಟಿ ನೀಡಿದ್ದ ತಮಗೆ, ಈ ಪ್ರದೇಶ ಐತಿಹಾಸಿಕವಾಗಿಯೂ ಮಹತ್ವ ಪಡೆದಿದೆ. 1920ರಲ್ಲಿ ಮಹಾತ್ಮಾ ಗಾಂಧೀ ಅವರು ಇಲ್ಲಿ ಸ್ವಾತಂತ್ರ್ಯ ಚಳವಳಿಗಾರರೊಂದಿಗೆ ಸಂವಾದ ನಡೆಸಿದ್ದರು ಎಂದು ತಿಳಿಸಲಾಯಿತು. ವೃಕ್ಷ ಸಮೃದ್ಧವಾದ ಈ ಪ್ರದೇಶ ಇಂಗಾಲದ ಡೈ ಆಕ್ಸೈಡ್ ನಿಯಂತ್ರಿಸಿ, ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಇದರ ಸಂರಕ್ಷಣೆಗೆ ಜೀವ ವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸುವ ಸಂಬಂಧ ಸಲಹೆ, ಸೂಚನೆ ಮತ್ತು ಆಕ್ಷೇಪಣೆ ಸಲ್ಲಿಸುವಂತೆ ಸಾರ್ವಜನಿಕರನ್ನು ಕೋರಲಾಗಿತ್ತು ಎಂದರು.
ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿರುವ ಈ ಮರ ಕಡಿದು ವಾಣಿಜ್ಯ ಚಟುವಟಿಕೆ ನಡೆಸದಂತೆ ನಡೆದ ಆನ್ ಲೈನ್ ಸಹಿ ಸಂಗ್ರಹ ಅಭಿಯಾನದಲ್ಲಿ 3081 ಜನರು ಬೆಂಬಲ ನೀಡಿದ್ದರು, 368 ವೃಕ್ಷಗಳ ಹನನ ಮಾಡದಂತೆ ನಡೆದ ಮತ್ತೊಂದು ಡಿಜಿಟಲ್ ಅಭಿಯಾನದಲ್ಲಿ 10670 ಜನರು ಈ ಪ್ರದೇಶದ ಸಂರಕ್ಷಣೆ ಮಾಡುವಂತೆ ಮತ್ತು ಮರ ಕಡಿಯದಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.