* ರಾಜ್ಯದಲ್ಲಿ ರಂಗೇರಿದ ವಿಧಾನಪರಿಷತ್ ಚುನಾವಣೆ
* ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ನಾಮಪತ್ರ ರದ್ದಾಗುತ್ತಾ?
* ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸೂರಜ್ ರೇವಣ್ಣ
ಹಾಸನ, (ನ.25): ವಿಧಾನ ಪರಿಷತ್ ಚುನಾವಣೆಗೆ (MLC Election) ಜೆಡಿಎಸ್ (JDS) ಅಭ್ಯರ್ಥಿಯಾಗಿ ಎಚ್‌ಡಿ ರೇವಣ್ಣ(Suraj Revanna) ಅವರ ಪುತ್ರ ಡಾ. ಸೂರಜ್ ರೇವಣ್ಣ ಸಲ್ಲಿಸಿರುವ ನಾಮಪತ್ರ ರದ್ದಾಗುತ್ತಾ? ಎನ್ನುವ ಆತಂಕ ದಳಪತಿಗಳಿಗೆ ಶುರುವಾಗಿದೆ.
ಹೌದು...ನಾಮಪತ್ರದೊಂದಿಗೆ ಸೂರಜ್ ರೇವಣ್ಣ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಮರೆಮಾಚಿದ್ದಾರೆ ಎಂದು ವಕೀಲ ಜಿ.ದೇವರಾಜೇಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ.
Council Election : ರೇವಣ್ಣ ಪುತ್ರ ಸೂರಜ್ ಕೋಟಿ ಕೋಟಿ ಒಡೆಯ - ಉಳಿದವರ ಆಸ್ತಿ ಎಷ್ಟು..?
ಈ ಬಗ್ಗೆ ಇಂದು(ನ.25) ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಜಿ.ದೇವರಾಜೇಗೌಡ, ನಾಮಪತ್ರದೊಂದಿಗೆ (Nomination) ಸೂರಜ್ ರೇವಣ್ಣ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಮರೆಮಾಚಿದ್ದಾರಂತೆ. ಜತೆಗೆ ಅವರ ಹೆಸರಿನ ಚಾಲ್ತಿ ಖಾತೆಯೊಂದರ ಹಣದ ವಿವರವನ್ನೂ ಮುಚ್ಚಿಟ್ಟಿದ್ದಾರಂತೆ ಎಂದರು.
ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದೇನೆ. ಅವರು ಕ್ರಮ ಕೈಗೊಳ್ಳದಿದ್ದರೆ ಶುಕ್ರವಾರ ಬೆಳಗ್ಗೆ ಹೈಕೋರ್ಟ್ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸುತ್ತೇನೆ. ಜನಪ್ರತಿನಿಧಿ ಕಾಯ್ದೆಯ ಅನ್ವಯ ಸೂರಜ್ ಮಾಡಿರುವುದು ಅಪರಾಧವಾಗುತ್ತದೆ. ಅವರ ನಾಮಪತ್ರ ತಿರಸ್ಕೃತ ಆಗಬೇಕಾಗುತ್ತದೆ ಎಂದು ಹೇಳಿದರು.
2017ರ ಮಾರ್ಚ್ 17ರಂದು ಸೂರಜ್ ಅದ್ದೂರಿಯಾಗಿ ಮದುವೆಯಾಗಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಅವರ ಮದುವೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಆದರೆ, ಅಫಿಡವಿಟ್ನಲ್ಲಿ ಪತ್ನಿಯ ಮಾಹಿತಿ ನಮೂದಿಸುವ ಸ್ಥಳದಲ್ಲಿ ಅನ್ವಯಿಸುವುದಿಲ್ಲ ಎಂದು ಬರೆದಿದ್ದಾರೆ. ಅಲ್ಲದೆ, ಹೊಳೆನರಸೀಪುರದ ಕರ್ಣಾಟಕ ಬ್ಯಾಂಕ್ ಚಾಲ್ತಿ ಖಾತೆ ಸಂಖ್ಯೆ 608ರ ಹಣದ ಮಾಹಿತಿಯನ್ನೂ ಮುಚ್ಚಿಟ್ಟಿದ್ದಾರೆ ದೂರಿದ್ದಾರೆ.
ಸೂರಜ್ ಆಸ್ತಿ 61 ಕೋಟಿ
ಜೆಡಿಎಸ್ ಅಭ್ಯರ್ಥಿ ಸೂರಜ್ ಆರ್. ಅವರ ಒಟ್ಟು ಆಸ್ತಿ ಮೌಲ್ಯ 61,68, 22,761 ರು. ಇದ್ದರೆ ಅವರ ಹೆಸರಲ್ಲಿ ಒಟ್ಟು 14,97,74,989 ರು. ಸಾಲ ಇದೆ. ವಿವಿಧ ಬ್ಯಾಂಕಿನ ಖಾತೆಗಳಲ್ಲಿ 42,04,744 ರು ಇದೆ. ವಿವಿಧ ಬಾಂಡುಗಳ ಮೇಲೆ 2,53,34,361 ರು ಹೂಡಿಕೆ ಮಾಡಿದ್ದಾರೆ. 5.65 ಲಕ್ಷ ಮೌಲ್ಯದ ಒಂದು ಟ್ರಾಕ್ಟರ್ ಮಾತ್ರ ಇದೆ. 18 ಕೆಜಿ ಬೆಳ್ಳಿ, 1 ಕೆಜಿ ಚಿನ್ನ, 36 ದನಗಳಿವೆ. 6 ಎತ್ತು ಹಾಗೂ 8 ಎಮ್ಮೆಗಳೂ ಇವೆ. ₹4,90,78,003 ಮೌಲ್ಯದ ಕೃಷಿ ಭೂಮಿ ಇದೆ. ₹13,53,97,612 ಕೋಟಿ ಮೌಲ್ಯದ ಕೃಷಿಯೇತರ ಭೂಮಿ, 14,07,85,087 ರು. ಮೌಲ್ಯದ ವಾಣಿಜ್ಯ ಕಟ್ಟಡಗಳಿವೆ ಎಂದು ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ..
ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಪುರಸ್ಕೃತ
ಮತ್ತೊಂದೆಡೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರ ನಾಮಪತ್ರ ಪುರಸ್ಕೃತಗೊಂಡಿದೆ.
ಕಾಂಗ್ರೆಸ್ ಅಭ್ಯರ್ಥಿ ಸಲ್ಲಿಸಿರುವ ನಾಮಪತ್ರದಲ್ಲಿ ದೋಷವಿದೆ ಎಂದು ಬಿಜೆಪಿ ಅಭ್ಯರ್ಥಿ ಆರ್.ರಘು (ಕೌಟಿಲ್ಯ) ಆಕ್ಷೇಪಣೆ ಸಲ್ಲಿಸಿದ್ದರು. ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಗುರುವಾರ ಎರಡೂ ಕಡೆಯವರ ವಾದ ಆಲಿಸಿ, ನಾಮಪತ್ರ ಕ್ರಮಬದ್ಧವಾಗಿರುವುದಾಗಿ ಪ್ರಕಟಿಸಿದರು.
ಬಿಜೆಪಿ ಅಭ್ಯರ್ಥಿಯು ಮೂರು ಆಕ್ಷೇಪಣೆಗಳನ್ನು ಎತ್ತಿದ್ದು, ಚುನಾವಣಾಧಿಕಾರಿ ಎಲ್ಲವನ್ನೂ ತಿರಸ್ಕರಿಸಿದ್ದಾರೆ. ನಮ್ಮ ಅಭ್ಯರ್ಥಿಯ ನಾಮಪತ್ರವನ್ನು ಅಂಗೀಕರಿಸಿದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಪರ ವಾದ ಮಂಡಿಸಿದ ಹೈಕೋರ್ಟ್‌ನ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಹೇಳಿದರು.
ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪ
ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ. ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಸೋತಿದ್ದ ಬಿಜೆಪಿ ಅಭ್ಯರ್ಥಿ ಎ. ಮಂಜು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಅರ್ಜಿಯಲ್ಲಿನ ಆರೋಪವೇನು?
ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಆಸ್ತಿಗಳಿಕೆ ಮಾಡಿದ್ದಾರೆ. ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದಾರೆ. ಹಲವು ಕಂಪನಿಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಆದರೆ, ಆಸ್ತಿ ಘೋಷಣೆ ಮಾಡುವಾಗ ಪ್ರಮಾಣ ಪತ್ರದಲ್ಲಿ ಇದನ್ನು ಉಲ್ಲೇಖಿಸಿಲ್ಲ. ದೇವೇಗೌಡರ ಜೊತೆಗಿನ ಸಾಲದ ವ್ಯವಹಾರವನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದರು.