
ಮೈಸೂರು (ಫೆ.26): ಬಿಜೆಪಿ ಸರ್ಕಾರದ ಅವಧಿಯಲ್ಲೇನು ರಾಜ್ಯದ ಖಜಾನೆ ಭರ್ತಿಯಾಗಿತ್ತಾ. ನಿಮ್ಮಪ್ಪನನ್ನು ಜೈಲಿಗೆ ಹಾಕಿಸಿದ್ದೇ ನೀವು ಎಂದು ವಿಧಾನ ಪರಿಷತ್‌ಸದಸ್ಯ ಎಚ್. ವಿಶ್ವನಾಥ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಕಿಡಿಕಾರಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರೋದ್ರಿಂದ ದೇಗುಲಗಳ ಹುಂಡಿ ಹಣಕ್ಕೂ ಸರ್ಕಾರ ಕೈ ಹಾಕಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದರು. ನೀವೇನು ಸತ್ಯವಂತರಾ ಎಂದು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಎಚ್ ವಿಶ್ವನಾಥ್. ನಿಮ್ಮಪ್ಪನನ್ನು ಜೈಲಿಗೆ ಹಾಕಿಸಿದ್ದೇ ನೀವು ಅಲ್ಲವೇ ಎಂದು ಅವರು ಪ್ರಶ್ನಿಸಿದರು.
ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಈ ಮೊದಲು ಕೂಡ ನಾನು ಸಂಸದನಾಗಿದ್ದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದರು. ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಯಾಗಬೇಕು. ನಾನು ಸಹಕಾರ ಸಚಿವನಾಗಿದ್ದಾಗ ಈ ಬಗ್ಗೆ ಪ್ರಯತ್ನ ಮಾಡಿದ್ದೆ. ಈಗ ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ಸರ್ಕಾರ ಮುಂದಾಗಿದೆ. ಇದಕ್ಕೆ ಶಾಸಕ ಜಿ.ಟಿ. ದೇವೇಗೌಡ ವಿರೋಧಿಸುತ್ತಿರುವುದು ಸರಿಯಲ್ಲ. ಅವರ ಪತ್ನಿ ಲಲಿತಾ ರಾಜ್ಯ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ, ಮಗ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ. ಮೀಸಲಾತಿ ಜಾರಿಗೆ ವಿರೋಧಿಸುತ್ತಿರುವ ಜಿ ಟಿ ದೇವೇಗೌಡರೇ ನೀವು ಕೇವಲ ಒಂದು ಸಮುದಾಯದ ಬೆಂಬಲದಿಂದ ಗೆದ್ದಿದ್ದೀರಾ ಎಂದು ಅವರು ಪ್ರಶ್ನಿಸಿದರು.
ಬೇರೆ ಸಮುದಾಯಗಳ ಋಣದಲ್ಲಿ ನೀವು ಇಲ್ಲವೇ? 67 ಸಾವಿರ ಸಹಕಾರ ಬ್ಯಾಂಕ್ ಗಳ ಪೈಕಿ 42 ಸಾವಿರ ಲಾಭದಲ್ಲಿ ನಡೆಯುತ್ತಿವೆ. ಲಾಭಾಂಶವನ್ನು ಇವರೇ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ಜಿ ಟಿ ದೇವೇಗೌಡ ವಿರೋಧಿಸುತ್ತಿದ್ದಾರೆ ಎಂದು ದೂರಿದರು. ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭಾ ಚುನಾಣೆಗೆ ದಿಕ್ಸೂಚಿಯಾಗಿದೆ. ರಾಜ್ಯದ ಜನರು ಮೈತ್ರಿಯ ವಿರುದ್ಧವಾಗಿದ್ದಾರೆ ಎಂಬುದು ಈ ಚುನಾವಣಾ ಫಲಿತಾಂಶದಿಂದ ಗೊತ್ತಾಗುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಯನ್ನು ಜನರು ತಿರಸ್ಕರಿಸಿದ್ದರು. ಪರಿಣಾಮ ಬಿಜೆಪಿ ದೊಡ್ಡ ಮಟ್ಟದ ಗೆಲುವು ಸಾಧಿಸಿತು. ಕಾಂಗ್ರೆಸ್ ಗೆ ಹೀನಾಯ ಸೋಲಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟಕ್ಕೆ ಲಾಭವಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
ಗ್ಯಾರಂಟಿ ಯೋಜನೆ ಸಫಲವಾಗಿರುವುದನ್ನು ಕಂಡು ಬಿಜೆಪಿಗೆ ಹೊಟ್ಟೆಯುರಿ: ಸಚಿವ ಸಂತೋಷ್ ಲಾಡ್
ಅರಸು, ಶಿವಕುಮಾರಶ್ರೀಗೆ ಭಾರತ ರತ್ನ ನೀಡಲಿ: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಮತ್ತು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರಿಗೆ ಮರಣೋತ್ತರ ಭಾರತರತ್ನ ನೀಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಬೇಕು. ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಧ್ವನಿ ಎತ್ತಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.