ಮಂಡ್ಯ (ಡಿ.12): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ (MLC Election) ನಡೆದ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ (JDS - Congress) ಸಮಬಲದ ಹೋರಾಟ ನೀಡಿದ್ದು, ಅಂತಿಮವಾಗಿ ಫೋಟೋಫಿನಿಷ್ ಫಲಿತಾಂಶ (Result) ಬರುವ ಸಂಭವವಿದೆ ಎನ್ನಲಾಗುತ್ತಿದೆ. ಯಾರೇ ಗೆದ್ದರೂ ಗೆಲುವಿನ ಅಂತರ ಕಡಿಮೆ ಇರಲಿದೆ ಎಂಬ ಮಾತುಗಳು ಚುನಾವಣೆ ನಂತರ ಕೇಳಿ ಬರಲಾರಂಭಿಸಿವೆ. ಲೋಕಸಭೆ (Loksabha) ಸಾರ್ವತ್ರಿಕ ಚುನಾವಣೆ ಹಾಗೂ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ (By Election) ಸೋಲನುಭವಿಸಿ ಮುಖಭಂಗಕ್ಕೊಳಗಾಗಿರುವ ಜೆಡಿಎಸ್ ವಿಧಾನ ಪರಿಷತ್ ಚುನಾವಣೆ ಗೆಲುವಿನೊಂದಿಗೆ ಮಂಡ್ಯ ಜೆಡಿಎಸ್‌ನ ಭದ್ರಕೋಟೆ ಎನ್ನುವುದನ್ನು ಸಾಬೀತುಪಡಿಸಬೇಕಿದೆ. 2023ರ ವಿಧಾನಸಭೆ ಚುನಾವಣೆಗೆ ಈ ಚುನಾವಣೆ ಮೂಲಕ ಭದ್ರ ಬುನಾದಿ ಹಾಕಬೇಕಿದೆ. ಹಾಗಾಗಿ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಜೆಡಿಎಸ್‌ಗೆ ಗೆಲುವು ಅನಿವಾರ್ಯವಾಗಿದೆ.
ಅಪ್ಪಾಜಿಗೌಡರ ಗೆಲುವಿನೊಂದಿಗೆ ಜಿಲ್ಲೆಯೊಳಗೆ ಸೃಷ್ಟಿಯಾಗುವ ವಾತಾವರಣ ಪಕ್ಷ ಬಿಡುವ ಮನಸ್ಥಿತಿಯಲ್ಲಿರುವವರನ್ನು ತಡೆಯಬಹುದು, ಪಕ್ಷದ ಶಕ್ತಿ ಇನ್ನಷ್ಟು ವೃದ್ಧಿಯಾಗಲಿದೆ. ಕಾಂಗ್ರೆಸ್ (Congress) ಮುಂದಿನ ಚುನಾವಣೆಯವರೆಗೂ ಪುಟಿದೇಳದಂತೆ ತಡೆಯುವುದಕ್ಕೆ ಈ ಗೆಲುವು ಪ್ರಬಲ ಅಸ್ತ್ರವಾಗಲಿದೆ ಎನ್ನುವುದು ಜೆಡಿಎಸ್ (JDS) ವರಿಷ್ಠರ ಲೆಕ್ಕಾಚಾರವಾಗಿದೆ.
ಕಾಂಗ್ರೆಸ್ ಕೂಡ ಈ ಚುನಾವಣೆಯನ್ನು (Election) ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಚುನಾವಣೆ ಘೋಷಣೆಯಾದ ನಂತರ ಕೊನೆಯ ಹಂತದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಕಾಂಗ್ರೆಸ್, ವಿರೋಚಿತ ಹೋರಾಟವನ್ನು ನೀಡಿ ಎಲ್ಲರನ್ನು ಬೆರಗುಗೊಳಿಸಿದೆ.
ಕಾಂಗ್ರೆಸ್‌ಗೆ ದೊಡ್ಡ ಸವಾಲು: ಮಾಜಿ ಸಚಿವ ಎನ್. ಚಲುವರಾಯ ಸ್ವಾಮಿ (Cheluvarayaswamy) ನಾಯಕತ್ವಕ್ಕೆ ಈ ಚುನಾವಣೆ (Election) ದೊಡ್ಡ ಸವಾಲಾಗಿದೆ. ಕಾಂಗ್ರೆಸ್‌ಗೆ (Congress) ಗೆಲುವು ಅತಿ ಅಗತ್ಯ ಮತ್ತು ಅನಿವಾರ್ಯವೂ ಆಗಿದೆ. ದಿನೇಶ್ ಗೂಳಿಗೌಡ (Dinesh Guligowda) ಗೆಲುವಿನಿಂದ ಜಿಲ್ಲೆಯೊಳಗೆ ಕಾಂಗ್ರೆಸ್‌ಗೆ (Congress) ಹೊಸ ಶಕ್ತಿ ಬಂದಂತಾಗುತ್ತದೆ. 2023ರ ಚುನಾವಣೆಗೆ (Election) ವಿಧಾನ ಪರಿಷತ್ ಚುನಾವಣೆ ದಿಕ್ಸೂಚಿಯಾಗಿ ತೋರಿಸಿ ಜಿಲ್ಲೆಯಲ್ಲಿ ಹೊಸ ರಾಜಕೀಯ (Politics) ಪರಿವರ್ತನೆ ಸೃಷ್ಟಿಯಾಗಲಿದೆ. ಇದರೊಂದಿಗೆ ಕಳೆಗುಂದಿರುವ ಕಾಂಗ್ರೆಸ್ ವರ್ಚಸ್ಸು ಮತ್ತೆ ಹೆಚ್ಚಾಗಲಿದೆ. ಲೋಕಸಭೆ ಚುನಾವಣೆ (Loksabha Election) ಮತ್ತು ಕೆ.ಆರ್.ಪೇಟೆ ಉಪ ಚುನಾವಣೆಯ ಬಳಿಕ ಮತ್ತೊಮ್ಮೆ ಜೆಡಿಎಸ್‌ಗೆ (JDS) ಸೋಲಿನ ರುಚಿ ತೋರಿಸುವುದಕ್ಕೆ ಇದೊಂದು ಸದಾವಕಾಶ ಎನ್ನುವುದು ಕೈ ಪಾಳಯದವರ ರಾಜಕೀಯ ಲೆಕ್ಕಾಚಾರ.
ಹಾಗಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ(MLC Election) ಎಲ್ಲ ರೀತಿಯ ತಂತ್ರಗಾರಿಕೆಗಳನ್ನು ಬಳಸಿ ಎದುರಾಳಿ ಪಕ್ಷಕ್ಕೆ ತೀವ್ರ ಪೈಪೋಟಿ ನೀಡಿದೆ. ಕೈ ಪಡೆಯವರು ನಡೆಸಿರುವ ಸಾಹಸ ಕಾರ್ಯಾಚರಣೆ ಅಭ್ಯರ್ಥಿಯನ್ನು ಗೆಲುವಿನ ಗುರಿ ಮುಟ್ಟಿಸಲಿದೆಯೇ ಎನ್ನುವುದನ್ನು ಮಂಗಳವಾರದವರೆಗೆ ಕಾದುನೋಡಬೇಕಿದೆ.
ದಾಖಲೆ ಸೃಷ್ಟಿಸುವ ಉತ್ಸಾಹ: ಜೆಡಿಎಸ್ (JDS) ಅಭ್ಯರ್ಥಿ ಎನ್.ಅಪ್ಪಾಜಿ ಗೌಡರು ಸತತ ಎರಡನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿ ದಾಖಲೆ ಸೃಷ್ಟಿಸುವ ಉತ್ಸಾಹದಲ್ಲಿದ್ದಾರೆ. ಅಪ್ಪಾಜಿ ಗೌಡರು ರಾಜಕೀಯವಾಗಿ ವಿವಾದಾತೀತ ವ್ಯಕ್ತಿಯಾಗಿದ್ದಾರೆ. ಪಕ್ಷದ ಎಲ್ಲ ಶಾಸಕರೊಂದಿಗೆ ನಿಕಟ ಹಾಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜೊತೆಗೆ ಗ್ರಾಪಂಗಳಲ್ಲಿ ಜೆಡಿಎಸ್ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಗೆಲುವು ಅವರನ್ನು ಕೈಹಿಡಿಯಲಿದೆ ಎನ್ನುವುದು ಜೆಡಿಎಸ್‌ನವರು ಸಹಜವಾಗಿ ಹೇಳುತ್ತಿರುವ ಮಾತು.
ಅಪ್ಪಾಜಿ ಗೌಡರನ್ನು ಗೆಲ್ಲಿಸಲೇಬೇಕೆಂಬ ಹಠದೊಂದಿಗೆ ಜೆಡಿಎಸ್ ಶಾಸಕರೆಲ್ಲರೂ ಸಂಘಟಿತವಾಗಿ ಪ್ರಯತ್ನ ನಡೆಸಿದ್ದು, ಜೆಡಿಎಸ್ ಪಾಲಿನ ಮತಗಳೆಲ್ಲವೂ ಕಾಂಗ್ರೆಸ್ (Congress) ಕಡೆಗೆ ವಾಲದಂತೆ ಕಾಯ್ದುಕೊಂಡಿದ್ದಾರೆಂಬ ಅಪರಿಮಿತ ವಿಶ್ವಾಸದಲ್ಲಿದ್ದಾರೆ. ದಳ ಪಾಳಯದೊಳಗೆ ಯಾವುದೇ ಒಳೇಟುಗಳು ಬಿದ್ದಿರುವ ಸಾಧ್ಯತೆಗಳಿಲ್ಲವೆಂಬ ಮಾತುಗಳು ಕೇಳಿಬಂದಿರುವುದರಿಂದ ಅಂತಿಮವಾಗಿ ಜೆಡಿಎಸ್ ಗೆಲುವು ಖಚಿತ ಎನ್ನುವುದು ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ.
ಅಸಾಮಾನ್ಯ ಶಕ್ತಿ ಪ್ರದರ್ಶನ
ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಆರಂಭದಲ್ಲಿ ಸಾಮಾನ್ಯ ಅಭ್ಯರ್ಥಿಯಂತೆ ಕಂಡುಬಂದರೂ ದಿನ ಕಳೆದಂತೆ ತಮ್ಮ ಅಸಾಮಾನ್ಯ ಶಕ್ತಿಯನ್ನು ಪ್ರದರ್ಶಿಸುತ್ತಾ ದಳ ಪಾಳಯದಲ್ಲಿ ಸಂಚಲನ ಮೂಡಿಸಿದರು. ಎನ್.ಚಲುವರಾಯಸ್ವಾಮಿ ನಾಯಕತ್ವದಲ್ಲಿ ಪಕ್ಷದ ಮೊದಲ ಮತ್ತು ಎರಡನೇ ಹಂತದ ನಾಯಕರನ್ನು ಸಂಘಟನೆಗೊಳಿಸಿಕೊಂಡು ಚುನಾವಣೆ (Election) ಎದುರಿಸಿದ ರೀತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ರಾಜಕೀಯ ತಂತ್ರಗಾರಿಕೆ, ಪ್ರಚಾರ, ಕಾರ್ಯಾಚರಣೆಯಲ್ಲಿ ಸಣ್ಣ ಪುಟ್ಟಗೊಂದಲಗಳಿಗೂ ಎಡೆಮಾಡಿಕೊಡದಂತೆ ಮುನ್ನುಗ್ಗಿದ ರೀತಿ ಅಭ್ಯರ್ಥಿಯೊಳಗಿನ ರಾಜಕೀಯ ಕೌಶಲ್ಯವನ್ನು ಪ್ರದರ್ಶಿಸಿತು.
ಚಲುವರಾಯಸ್ವಾಮಿ ಸಾಥ್ : ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಾಳಯದೊಳಗಿದ್ದುಕೊಂಡು ಅವರು ನಡೆಸಿದ ತಂತ್ರ-ಪ್ರತಿತಂತ್ರಗಳನ್ನು ಅರಿತಿದ್ದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕೂಡ ದಿನೇಶ್ ಗೂಳಿಗೌಡರ ಬೆನ್ನಿಗೆ ನಿಂತು ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಚುನಾವಣಾ ಸಾರಥ್ಯವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದರಲ್ಲದೇ, ಜೆಡಿಎಸ್ ಮಾದರಿಯಲ್ಲೇ ಕಾಂಗ್ರೆಸ್ ಸಂಪರ್ಕ ಜಾಲವನ್ನು ಪರಿಣಾಮಕಾರಿಗೊಳಿಸಿದರು. ಚುನಾವಣೆ ಕಾರ್ಯಾಚರಣೆ ಹೀಗೆ ನಡೆಯಬೇಕೆಂಬ ಪೂರ್ವಸಿದ್ಧತೆಯೊಂದಿಗೆ ವ್ಯವಸ್ಥಿತವಾಗಿ ಹೋರಾಟ ನೀಡುವ ಮೂಲಕ ಕಾಂಗ್ರೆಸ್ ಮತಗಳು ಕೈ ಬಿಟ್ಟುಹೋಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳೀಯ ಸಂಸ್ಥೆಗಳೊಳಗೆ ಜೆಡಿಎಸ್‌ಗೆ ಸೇರಿದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ದಳಪತಿಗಳಿಗೆ ವರದಾನವಾಗಿದೆ. ಅದನ್ನೇ ಪ್ರಧಾನ ಅಂಶವಾಗಿಟ್ಟುಕೊಂಡು ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅಡ್ಡಿ ಇಲ್ಲ ಎನ್ನುತ್ತಿದ್ದಾರೆ. ಕೈ ಮತಗಳನ್ನು ಜೊತೆಯಲ್ಲಿಟ್ಟುಕೊಂಡು ಗೆಲುವಿಗೆ ಬೇಕಾದ ಮತಗಳನ್ನು ಹೆಚ್ಚುವರಿಯಾಗಿ ಬತ್ತಳಿಕೆಗೆ ಸೇರಿಸಿಕೊಂಡಿರುವ ಖಚಿತ ವಿಶ್ವಾಸದಲ್ಲಿರುವ ಕಾಂಗ್ರೆಸ್ ಕೂಡ ಗೆಲುವು ನಮ್ಮದೇ ಎನ್ನುತ್ತಿದೆ. ಅಂತಿಮವಾಗಿ ವಿಜಯಲಕ್ಷಿ ್ಮೕ ಯಾರ ಕೈ ಹಿಡಿಯುವಳೋ ನೋಡಬೇಕಿದೆ.