ಕೆಐಎಡಿಬಿ ಜಮೀನು ಮಂಜೂರಾತಿ ವಿಚಾರದಲ್ಲಿ ಕಾಂಗ್ರೆಸ್ಸಿಗರು ನನ್ನ ವಿರುದ್ಧ ಕೀಳು ಭಾಷೆ ಬಳಕೆ, ನಿಂದನೆ ಮಾಡಿದರೂ ನನ್ನನ್ನು ಯಾರೂ ಕುಗ್ಗಿಸಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರು (ಸೆ.01): ಕೆಐಎಡಿಬಿ ಜಮೀನು ಮಂಜೂರಾತಿ ವಿಚಾರದಲ್ಲಿ ಕಾಂಗ್ರೆಸ್ಸಿಗರು ನನ್ನ ವಿರುದ್ಧ ಕೀಳು ಭಾಷೆ ಬಳಕೆ, ನಿಂದನೆ ಮಾಡಿದರೂ ನನ್ನನ್ನು ಯಾರೂ ಕುಗ್ಗಿಸಲು ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ. ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬದ ಋಣ ಸಂದಾಯ ಮಾಡಿ ಮತ್ತಷ್ಟು ಅಧಿಕಾರ ಗಿಟ್ಟಿಸಲು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನ ವಿರುದ್ಧ ಕೀಳು ಅಭಿರುಚಿಯ ಲೇಖನ ಪ್ರಕಟಿಸಿ ತಮ್ಮ ಮೌಲ್ಯ ಪ್ರದರ್ಶಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಕೆಐಎಡಿಬಿ ನಿವೇಶನ ಮಂಜೂರಾತಿ ವಿಚಾರದಲ್ಲಿ ನನ್ನ ವಿರುದ್ಧ ಕೀಳು ಭಾಷೆ ಬಳಕೆಯಿಂದ ನನ್ನನ್ನು ಬಗ್ಗಿಸಲಾರರು. ನಾನು ಹುಟ್ಟು ಹೋರಾಟಗಾರನಾಗಿದ್ದು, ಅತೀ ತಳ ಸಮುದಾಯದಿಂದ ಕಷ್ಟಗಳಿಂದಲೇ ಬೆಳೆದು ಬಂದಿದ್ದೇನೆ. ಎಲ್ಲವನ್ನೂ ಸಹಿಸಿ ಎದುರಿಸಬಲ್ಲ ಶಕ್ತಿಯನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದ ಮಾರ್ಗಗಳು ಮತ್ತು ಆದರ್ಶಗಳು ನೀಡಿವೆ ಎಂದು ಹೇಳಿದ್ದಾರೆ. ನಾನು ಎಂದಿಗೂ ಅವಕಾಶಗಳಿಗಾಗಿ ಬಕೆಟ್ ಹಿಡಿಯುವ ರಾಜಕಾರಣ ಮಾಡಿದವನೂ ಅಲ್ಲ, ಮುಂದೆ ಮಾಡುವವನೂ ಅಲ್ಲ.
ಬಿಜೆಪಿ ನಾಯಕತ್ವ ನನ್ನ ಯೋಗ್ಯತೆಯನ್ನು ಗುರುತಿಸಿ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ನೇಮಿಸಿದೆ. ಅದನ್ನು ನೀರ್ಭಿತಿಯಿಂದ ನಿಭಾಯಿಸುತ್ತೇನೆ. ಅಧಿಕಾರಕ್ಕಾಗಿ ಹಾತೊರೆದು ಕೇವಲ ರಾಜಕೀಯ ನಾಯಕರ ಬಾಲಂಗೋಚಿಯಂತೆ ಹಿಂದೆ ಮುಂದೆ ಸುತ್ತಿಕೊಂಡು ಅಧಿಕಾರ ಹಿಡಿಯುವವರ ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವ ಜಾಯಮಾನದ ವ್ಯಕ್ತಿಯಲ್ಲ. ನನ್ನ ಯೋಗ್ಯತೆಯನ್ನು ಮಾನದಂಡವಾಗಿ ಇಟ್ಟುಕೊಂಡು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕನ ಹೊಣೆಗಾರಿಕೆಯನ್ನು ಬಿಜೆಪಿ ವಹಿಸಿದೆ. ಇದು ಕಳೆದ 45 ವರ್ಷಗಳ ನನ್ನ ನಿಷ್ಕಳಂಕ ರಾಜಕೀಯ ಜೀವನದಲ್ಲಿ ವಹಿಸಿಕೊಂಡ ಮೊದಲ ಸಾಂವಿಧಾನಿಕ ಹುದ್ದೆಯಾಗಿದೆ ಎಂದಿದ್ದಾರೆ.
ಮುಡಾ ಕೇಸ್‌ನಲ್ಲಿ ಸಿಎಂ ತಪ್ಪು ಮಾಡಿಲ್ಲ ಎಂದರೆ ಚಿಂತೆ ಏಕೆ?: ಹೈಕೋರ್ಟ್‌ನಲ್ಲಿ ರಾಜ್ಯಪಾಲರ ವಾದ
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಗಮನ ಸೆಳೆದಿದ್ದಾರೆ. ಈ ವಿಚಾರದಲ್ಲಿ ವೈಯಕ್ತಿಕವಾಗಿ ಯಾರನ್ನೂ ಗುರಿ ಮಾಡುತ್ತಿಲ್ಲ. ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕನಾಗಿ ಸರ್ಕಾರದ ಲೋಪದೋಷಗಳ ಮತ್ತು ಹಗರಣಗಳ ಜನಾಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದೇನೆ. ತಪ್ಪನ್ನು ಸರ್ಕಾರವು ಸರಿಪಡಿಸಿಕೊಳ್ಳುವಂತೆ ಮಾಡುವುದೇ ನನ್ನ ಕರ್ತವ್ಯ ಹಾಗೂ ಜವಾಬ್ದಾರಿಯೂ ಹೌದು ಎಂದು ತಿಳಿಸಿದ್ದಾರೆ.