ಕಾಂಗ್ರೆಸ್‌ ರಾಜಭವನ ಚಲೋಗೆ ಬಿಜೆಪಿ ಕಿಡಿ: ಸರ್ಕಾರ ಸಂಪೂರ್ಣ ವಿಫಲ ಎಂದ ಆರ್‌.ಅಶೋಕ್‌

By Kannadaprabha News  |  First Published Sep 1, 2024, 6:28 AM IST

ಆಡಳಿತಾರೂಢ ಕಾಂಗ್ರೆಸ್‌ ಬೀದಿಗಿಳಿದು ಧರಣಿ ನಡೆಸಿರುವುದನ್ನು ಗಮನಿಸಿದರೆ ಆಡಳಿತದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಸಾಬೀತಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಟೀಕಿಸಿದ್ದಾರೆ. 
 


ಬೆಂಗಳೂರು (ಸೆ.01): ಆಡಳಿತಾರೂಢ ಕಾಂಗ್ರೆಸ್‌ ಬೀದಿಗಿಳಿದು ಧರಣಿ ನಡೆಸಿರುವುದನ್ನು ಗಮನಿಸಿದರೆ ಆಡಳಿತದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂಬುದು ಸಾಬೀತಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಟೀಕಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಭವನವನ್ನು ಬಿಜೆಪಿ ಕಚೇರಿ ಎಂದು ಟೀಕಿಸಲಾಗಿದೆ. ಹಾಗಾದರೆ ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಎನ್ನಬೇಕಾಗುತ್ತದೆ. ಸರ್ಕಾರವು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆಡಳಿತ ನಡೆಸುವವರೇ ಪ್ರತಿಭಟನೆ ಮಾಡುತ್ತಾರೆಂದರೆ ಸರ್ಕಾರ ವಿಫಲವಾಗಿದೆ ಎಂದರ್ಥ ಎಂದು ಕಿಡಿಕಾರಿದರು.

ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡು, ಅದರಂತೆ ಸರ್ಕಾರ ನಡೆಸಲಾಗುತ್ತಿದೆ ಎಂದರೆ ಕಾಂಗ್ರೆಸ್ಸಿಗರು ಅದನ್ನು ಒಪ್ಪಿಕೊಳ್ಳುತ್ತಾರಾ? ರಾಜಭವನವು ಸಂವಿಧಾನದತ್ತ ಅಧಿಕಾರವುಳ್ಳದಾಗಿದೆ. ಕಾಂಗ್ರೆಸ್ಸಿಗರು ಮನಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯಪಾಲರು ಪರಿಶೀಲಿಸಿ ತನಿಖೆಗೆ ಅನುಮತಿ ನೀಡಿದ್ದಾರೆ. 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೀಗೆ ನಡೆದಿದೆ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ.

Tap to resize

Latest Videos

ಈ ಹಿಂದೆ ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ವಿರುದ್ಧದ ತನಿಖೆಗೂ ಆಗಿನ ರಾಜ್ಯಪಾಲರು ಅನುಮತಿ ನೀಡಿದ್ದರು. ಆಗ ರಾಜಭವನ ಕಾಂಗ್ರೆಸ್ ಕಚೇರಿಯಾಗಿತ್ತೇ? ಕಾಂಗ್ರೆಸ್ ನಾಯಕರು ಕಿವಿಯ ಮೇಲೆ ಹೂ ಇಡುವುದನ್ನು ಬಿಟ್ಟು, ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಎಂದು ಟೀಕಾಪ್ರಹಾರ ನಡೆಸಿದರು.

ರಾಜಭವನ ಚಲೋ: ಎಚ್‌ಡಿಕೆ, ನಿರಾಣಿ, ಜೊಲ್ಲೆ, ಗಣಿ ರೆಡ್ಡಿ ಪ್ರಾಸಿಕ್ಯೂಷನ್‌ಗೆ ಗೌರ್‍ನರ್‌ ಬಳಿ ಪಟ್ಟು

ಪಕ್ಷದಿಂದ ಪ್ರತಿಭಟನೆ ಎನ್ನುವುದಾದರೆ ಎಲ್ಲ ಸಚಿವರು ರಾಜೀನಾಮೆ ನೀಡಿ ನಂತರ ಪ್ರತಿಭಟನೆ ಮಾಡಲಿ. ಇಲ್ಲಿ ಡಬಲ್ ಆಕ್ಟಿಂಗ್‌ ಮಾಡುವುದು ಬೇಡ. ರಾಜಭವನದ ದುರುಪಯೋಗ ಎನ್ನುವ ಆರೋಪ ಸವಕಲು ನಾಣ್ಯವಾಗಿದೆ. ಸಿದ್ದರಾಮಯ್ಯ ಅವರಿಗೆ ಭಯ ಏಕೆ? ಅವರ ರಕ್ಷಣೆಗೆ ನ್ಯಾಯಾಲಯವಿದೆ. ಕಾಂಗ್ರೆಸ್‌ನಲ್ಲೀಗ ಮ್ಯೂಸಿಕಲ್ ಚೇರ್ ನಡೆಯುತ್ತಿದ್ದು, ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು. ಒಂದೊಂದು ಸಮುದಾಯದವರು ಒಂದೊಂದು ಕಡೆ ಆಹಾರದ ಮೇಳ ನಡೆಸುತ್ತಿದ್ದಾರೆ. ಎಲ್ಲರೂ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕುತ್ತಿದ್ದಾರೆ. ಈ ಆಹಾರ ಮೇಳಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯಂತ್ರಿಸಲಿ ಎಂದರು.

click me!