ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್.ಎನ್. ಚನ್ನಬಸಪ್ಪ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದು ಸರಿ. ಆದರೆ, ಸರ್ಕಾರಿ ಕಚೇರಿಗೆ ಕಲ್ಲು ತೂರಾಟ ಮಾಡಿದ್ದು ತಪ್ಪು, ಒಂದು ವೇಳೆ ಇದರಿಂದ ನೌಕರರಿಗೆ ಏನಾದರೂ ಹಾನಿಯಾಗಿದ್ದರೆ ಅದಕ್ಕೆ ಹೊಣೆಯಾರು ಎಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಆಯನೂರು ಮಂಜುನಾಥ್ ಆರೋಪಿಸಿದರು.
ಶಿವಮೊಗ್ಗ (ಜೂ.16) : ವಿದ್ಯುತ್ ದರ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್.ಎನ್. ಚನ್ನಬಸಪ್ಪ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದು ಸರಿ. ಆದರೆ, ಸರ್ಕಾರಿ ಕಚೇರಿಗೆ ಕಲ್ಲು ತೂರಾಟ ಮಾಡಿದ್ದು ತಪ್ಪು, ಒಂದು ವೇಳೆ ಇದರಿಂದ ನೌಕರರಿಗೆ ಏನಾದರೂ ಹಾನಿಯಾಗಿದ್ದರೆ ಅದಕ್ಕೆ ಹೊಣೆಯಾರು ಎಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಆಯನೂರು ಮಂಜುನಾಥ್ ಆರೋಪಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಾಸಕರೊಬ್ಬರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದಾಗ, ಸರ್ಕಾರಿ ಕಚೇರಿಗೆ ಕಲ್ಲು ಹೊಡೆದಿರುವುದು ಇತಿಹಾಸದಲ್ಲೇ ಇದೇ ಮೊದಲು. ಪ್ರತಿಭಟನೆ ಮಾಡುವುದಕ್ಕೆ ಎಲ್ಲರಿಗೂ ಅವಕಾಶ ಇದೆ. ಆದರೆ, ಸರ್ಕಾರಿ ಕಚೇರಿಗೆ ಕಲ್ಲು ಹೊಡೆದು ಹಾನಿ ಮಾಡುವುದು ಸರಿಯಲ್ಲ. ಚನ್ನಬಸಪ್ಪನವರು ತಾವು ಶಾಸಕರು ಎಂಬುದನ್ನೇ ಮರೆತಂತಿದೆ. ಕಾರ್ಯಕರ್ತರನ್ನು ಪ್ರಚೋದಿಸಿ ಕಲ್ಲು ತೂರಾಟಕ್ಕೆ ಕಾರಣರಾಗಿದ್ದಾರೆ. ಶಾಸನ ಮಾಡುವ ಅವರೇ ಶಾಂತಿ ಭಂಗಗೊಳಿಸುತ್ತಿದ್ದಾರೆ ಎಂದು ದೂರಿದರು.
undefined
Shivamogga: ಆಯನೂರು ಬಾರಲ್ಲಿ ಕ್ಯಾಶಿಯರ್ ಹತ್ಯೆ: ಓರ್ವನ ಕಾಲಿಗೆ ಗುಂಡೇಟು, ಇಬ್ಬರ ಬಂಧನ
ಈ ಗಲಾಟೆ ಮುಂದೆ ಶಿವಮೊಗ್ಗ ಶಾಂತಿಯುತವಾಗಿ ಇರುತ್ತದೆಯೇ ಎಂಬ ಬಗ್ಗೆಯೇ ಅನುಮಾನ ಬರುತ್ತದೆ. ಆದ್ದರಿಂದ ಇನ್ನಾದರೂ ಚನ್ನಬಸಪ್ಪ ಅವರು ತಾವು ಶಾಸಕರೆಂಬ ಎಚ್ಚರಿಕೆ ಇರಲಿ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲಿ. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ನನಗೆ ಟಿಕೆಟ್ ನೀಡಿದ್ದು, ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದು ಚನ್ನಬಸಪ್ಪ ಅವರು ಖುಷಿಯಾಗಿದ್ದಾರೆ. ಆ ಖುಷಿಗೆ ನಾನೇ ಕಾರಣ ಎಂದು ಅವರು ಮರೆಯಬಾರದು. ಅವತ್ತು ನಾನು ಆ ರೀತಿಯ ನಿರ್ಧಾರ ತೆಗೆದುಕೊಂಡಿರಲಿಲ್ಲ ಎಂದರೆ ಅವರು ಶಾಸಕರಾಗುತ್ತಿರಲಿಲ್ಲ, ಸಾಮಾನ್ಯ ಕಾರ್ಯಕರ್ತರಾಗಿಯೇ ಇರುತ್ತಿದ್ದರು. ಹೀಗಾಗಿ ಅವರು ನನ್ನನ್ನು ಮರೆಯಬಾರದು ಎಂದು ಲೇವಡಿ ಮಾಡಿದರು.
ಪ್ರತಾಪ ಸಿಂಹ ಹೇಳಿಕೆ ಅಚ್ಚರಿ:
ಅನುಭವಿ ಸಂಸದ ಪ್ರತಾಪ್ ಸಿಂಹ ಅಡ್ಜಸ್ಟ್‌ಮೆಂಟ್ ರಾಜಕಾರಣದ ಹೇಳಿಕೆ ಆಶ್ಚರ್ಯವಾಗಿದೆ. ಸಿ.ಟಿ. ರವಿ ಮತ್ತು ಪ್ರತಾಪ್ ಸಿಂಹ ಇಬ್ಬರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಆದರೆ, ಹೊಂದಾಣಿಕೆ ಮಾಡಿಕೊಂಡಿದ್ದರೆ ಇವರೇಕೆ ಮೌನವಾಗಿದ್ದಾರೆ. ಇದನ್ನು ಬಹಿರಂಗಪಡಿಸಿದ್ದರೆ ಪಕ್ಷವನ್ನು ಕಟ್ಟಿಬೆಳೆಸಿದ ನಿಷ್ಠಾವಂತರ ಮೇಲೆ ಅನುಮಾನ ಸೃಷ್ಠಿಯಾಗುತ್ತದೆ. ಹೀಗಾಗಿ, ಈ ಬಗ್ಗೆ ಮುಚ್ಚುಮರೆಯ ಮಾತುಗಳನ್ನು ಆಡದೇ ಸಾವರ್ಜನಿಕರಿಗೆ ಯಾರಾರಯರು ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಶಿಶುಪಾಲನಾ ರಜೆ ಮಂಜೂರು ಸ್ವಾಗತಾರ್ಹ:
ಇನ್ನು ಕಾಂಗ್ರೆಸ್ ಸರ್ಕಾರ ಒಂಟಿ ಪೋಷಕರಾಗಿರುವ ಸರ್ಕಾರಿ ಪುರುಷ ನೌಕರರಿಗೂ ಶಿಶುಪಾಲನಾ ರಜೆ ಮಂಜೂರು ಮಾಡಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನೆಯ ಉದ್ದೇಶದಿಂದ ತಮ್ಮ ಇಡೀ ಸೇವಾ ಅವಧಿಯಲ್ಲಿ ಗರಿಷ್ಠ 6 ತಿಂಗಳವರೆಗೆ ಅಂದರೆ 180 ದಿನಗಳ ಕಾಲ ಶಿಶುಪಾಲನಾ ರಜೆಯನ್ನು ಮಂಜೂರು ಮಾಡಲಾಗಿತ್ತು. ಆದರೆ ಈ ಆದೇಶ ಪುರಷರಿಗೆ ಅನ್ವಯಿಸುತ್ತಿರಲಿಲ್ಲ. ಅಕಸ್ಮಾತ್ ತಾಯಿ ಮರಣ ಹೊಂದಿದಲ್ಲಿ ಅದರ ಜವಾಬ್ದಾರಿಯನ್ನು ತಂದೆಯೇ ಹೊರಬೇಕಿತ್ತು. ಶಿಶುಪಾಲನಾ ರಜೆ ಎನ್ನುವುದು ಲಿಂಗಭೇದ ಇಲ್ಲದೆ ಇರಬೇಕು. ಇಂತಹ ಸಂದರ್ಭದಲ್ಲಿ ಪುರುಷರಿಗೂ ಸಹ ರಜೆ ಸೌಲಭ್ಯ ವಿಸ್ತರಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮ ಸರಿಯಾಗಿದೆ ಎಂದರು.
ಸರ್ಕಾರಿ ನೌಕರರ ಕೆಲವು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ಹೊಂದಿದೆ. ಆದರೆ ಪಿಂಚಣಿಗೆ ಸಂಬಂಧಿಸಿದಂತೆ ಎನ್‌ಪಿಎಸ್ ಮತ್ತು ಒಪಿಎಸ್ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಭರವಸೆಯೂ ಈಡೇರಿಲ್ಲ. ಸರ್ಕಾರವೇನೋ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸುವ ಬಗ್ಗೆ ಭರವಸೆ ನೀಡಿದೆ. ಇದು ಕೇವಲ ಭರವಸೆ ಆಗಬಾರದು. ಹೊಸ ಸರ್ಕಾರ ಆದಷ್ಟುಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ತಡರಾತ್ರಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಬಾರ್ ಕ್ಯಾಶಿಯರ್ ಕೊಲೆ ಮಾಡಿದ ಕುಡುಕರು!
ವಿದ್ಯುತ್ ದರ ಏರಿಕೆ ಮಾಡಿರುವುದರಿಂದ ಸಣ್ಣ ಕೈಗಾರಿಕೆಗಳಿಗೆ ತೊಂದರೆಯಾಗಲಿದೆ. ಅಲ್ಲದೇ, ಉತ್ತರಕರ್ನಟಕದ ಹಲವು ಭಾಗಗಳಲ್ಲಿ ಕೆಲವು ಸಣ್ಣ ಕೈಗಾರಿಕಾ ಉದ್ಯಮಿಗಳು ಈ ರಾಜ್ಯವನ್ನೇ ಬಿಟ್ಟುಹೋಗುವುದಾಗಿ ಹೇಳಿದ್ದಾರೆ. ಇದರಿಂದ ಕನ್ನಡಿಗರು ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ. ಆದ್ದರಿಂದ ರಾಜ್ಯ ಸರ್ಕಾರ ಈಗ ಏರಿಸಿರುವ ವಿದ್ಯುತ್ ದರವನ್ನು ಮರುಪರಿಶೀಲನೆಗೆ ಒಳಪಡಿಸಬೇಕು. ಕೈಗಾರಿಕಾಸ್ನೇಹಿ ದರ ಜಾರಿಗೊಳಿಸಬೇಕು
- ಆಯನೂರು ಮಂಜುನಾಥ್, ಮಾಜಿ ವಿಪ ಸದಸ್ಯ