
ಬೆಂಗಳೂರು (ಜೂ.16): ‘ಅಕ್ಕಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ನುಡಿದಂತೆ ನಡೆಯಲು ಸಾಧ್ಯವಾಗದಿರುವುದರಿಂದ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಹುನ್ನಾರದ ರಾಜಕಾರಣ ಮಾಡುತ್ತಿದೆ. ಕೊಟ್ಟಮಾತಿನಂತೆ ಈ ತಿಂಗಳು ತಲಾ 10 ಕೆ.ಜಿ. ಅಕ್ಕಿ ನೀಡಬೇಕು. ಇಲ್ಲವಾದರೆ ಜನರನ್ನು ಸಂಘಟಿಸಿ ಹೋರಾಟ ಮಾಡಲಾಗುವುದು’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀಕ್ಷ್ಣವಾಗಿ ಹೇಳಿದ್ದಾರೆ.
ಗುರುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಡ ಜನತೆಗೆ 10 ಕೆ.ಜಿ. ಅಕ್ಕಿ ನೀಡುವ ವಿಚಾರದಲ್ಲಿ ಮೋಸ ಮಾಡುತ್ತಿದೆ. ಮಾತು ತಪ್ಪಿದ ತಮ್ಮ ಧೋಖಾ ಕಾರ್ಯಕ್ರಮ ಮುಂದುವರೆಸಿದೆ. ಇದನ್ನು ಮುಚ್ಚಿ ಹಾಕಲು ರೈತರು, ಕೂಲಿಕಾರರು, ಬಡವರು, ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತು ತಪ್ಪಿದ ಆಪಾದನೆಯಿಂದ ಪಾರಾಗಲು ಅಕ್ಕಿ ಸರಬರಾಜು ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ, ಇದು ರಾಜ್ಯದ ಬಡ ಜನರ ಹಸಿವಿನ ಪ್ರಶ್ನೆ: ಸಿ.ಟಿ.ರವಿಗೆ ದಿನೇಶ್ ತಿರುಗೇಟು
ಕೇಂದ್ರದಿಂದಲೇ 5 ಕೆ.ಜಿ. ವಿತರಣೆ: ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆಯಡಿ ಎಲ್ಲಾ ರಾಜ್ಯಗಳಲ್ಲಿ ತಲಾ 5 ಕೆ.ಜಿ. ಅಕ್ಕಿ ನೀಡುತ್ತಿದೆ. ಈ ಅಕ್ಕಿಯ ಸಾಗಣೆ ವೆಚ್ಚ ಕೆ.ಜಿ.ಗೆ 3 ರು. ಅನ್ನು ಮಾತ್ರ ರಾಜ್ಯ ಸರ್ಕಾರ ಭರಿಸುತ್ತಿತ್ತು. ಕಳೆದ ಡಿಸೆಂಬರ್‌ನಿಂದ ಕೇಂದ್ರ ಸರ್ಕಾರವೇ ಈ ಸಾಗಾಣೆಕೆ ವೆಚ್ಚವನ್ನೂ ಭರಿಸುತ್ತಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿಯೂ ಹೇಳುವುದಿಲ್ಲ. ರಾಜ್ಯ ಸರ್ಕಾರ ಹೇಳಿರುವ 10 ಕೆ.ಜಿ. ಅಕ್ಕಿ ಪೈಕಿ ಕೇಂದ್ರ ಸರ್ಕಾರವೇ 5 ಕೆ.ಜಿ. ಅಕ್ಕಿ ನೀಡುತ್ತಿದೆ. ಅಂದರೆ, ರಾಜ್ಯ ಸರ್ಕಾರದಿಂದ ಹೆಚ್ಚುವರಿ 5 ಕೆ.ಜಿ. ಕೊಡುತ್ತೇವೆ ಎಂದು ಹೇಳಬೇಕು ಎಂದು ಹೇಳಿದರು.
ನೀವೇಕೆ ಕೇಂದ್ರಕ್ಕೆ ಪತ್ರ ಬರೆಯಲಿಲ್ಲ?: ಭಾರತೀಯ ಆಹಾರ ನಿಗಮ (ಎಫ್‌ಸಿಐ) ಅಕ್ಕಿ ಹಂಚಿಕೆ ಮಾಡುವ ಏಜೆನ್ಸಿಯಾ? ಸಿದ್ದರಾಮಯ್ಯ ಅವರು ಏಕೆ ಕೇಂದ್ರಕ್ಕೆ ಪತ್ರ ಬರೆಯಲಿಲ್ಲ? ಕೇಂದ್ರ ಆಹಾರ ಮಂತ್ರಿಗೆ ಪತ್ರ ಬರೆಯಬೇಕಿತ್ತು ಅಥವಾ ನಿಮ್ಮ ಆಹಾರ ಮಂತ್ರಿಯನ್ನು ಕೇಂದ್ರ ಆಹಾರ ಮಂತ್ರಿ ಬಳಿ ಕಳುಹಿಸಬೇಕಿತ್ತು. ಇದ್ಯಾವುದನ್ನೂ ಮಾಡಲಿಲ್ಲ. ಇದೀಗ ಎಫ್‌ಸಿಐ ಅಕ್ಕಿ ಕೊಡಲಿಲ್ಲ ಎಂದು ರಾಜಕೀಯ ಮಾಡುವುದು ಮುಖ್ಯಮಂತ್ರಿಯಾಗಿ ನಿಮಗೆ ಶೋಭೆ ತರುವುದಿಲ್ಲ ಎಂದು ಕಿಡಿ ಕಾರಿದರು.
ಹೈನೋದ್ಯಮ ಅಭಿವೃದ್ಧಿಗೆ ಸರ್ಕಾರ ಕ್ರಮಕೈಗೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ ಸಲಹೆ
ಅಕ್ಕಿ ಖರೀದಿಗೆ ಮುಕ್ತ ಮಾರುಕಟ್ಟೆ ಇದೆ. ಕೇಂದ್ರ ಸರ್ಕಾರದ ಎನ್‌ಸಿಸಿಎಫ್, ಆಹಾರ ಭಂಡಾರ ಮೊದಲಾದ ಏಜೆನ್ಸಿಗಳಿವೆ. ಇವುಗಳನ್ನು ಸಂಪರ್ಕ ಮಾಡಿ ಎಲ್ಲರಿಗೂ 10 ಕೆ.ಜಿ. ಅಕ್ಕಿ ವಿತರಿಸಬೇಕು. ಈ ತಿಂಗಳು ಅಕ್ಕಿ ಕೊಡಲು ಸಾಧ್ಯವಾಗದಿದ್ದರೆ, ಪಡಿತರದಾರರ ಅಕೌಂಟ್‌ಗೆ ಹಣವನ್ನು ಡಿಬಿಟಿ ಮಾಡಿ. ಇಲ್ಲವಾದರೆ, ಜನ ಇದೊಂದು ಧೋಖಾ ಸರಣಿ ಎಂದು ಮಾತನಾಡಲು ಆರಂಭಿಸುತ್ತಾರೆ ಎಂದು ವ್ಯಂಗ್ಯವಾಡಿದರು. ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ.ಮೋಹನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.