ನಾಡಿನ ಅಲ್ಪಸಂಖ್ಯಾತರು ಒಂದು ಮತ ಜೆಡಿಎಸ್‌ಗೆ ಚಲಾಯಿಸಿದರು ಅದು ಬಿಜೆಪಿಗೆ ಶಕ್ತಿ ತುಂಬಿದಂತಾಗುತ್ತದೆ ಎಂದು ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಹೇಳಿದರು.
ರಾಮನಗರ (ಜ.30): ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನಮ್ಮ ಪಕ್ಷದಿಂದ ಮಾತ್ರ ಅಲ್ಪಸಂಖ್ಯಾತರ ಹಿತ ಕಾಪಾಡಲು ಸಾಧ್ಯ. ನಾಡಿನ ಅಲ್ಪಸಂಖ್ಯಾತರು ಒಂದು ಮತ ಜೆಡಿಎಸ್‌ಗೆ ಚಲಾಯಿಸಿದರು ಅದು ಬಿಜೆಪಿಗೆ ಶಕ್ತಿ ತುಂಬಿದಂತಾಗುತ್ತದೆ ಎಂದು ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಹೇಳಿದರು. ಕಳೆದ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಶೇಕಡ 50ರಷ್ಟು ಮತಗಳನ್ನು ಜೆಡಿಎಸ್ ಪಡೆಯಿತು.
ನಿಮ್ಮ ಮತ ಪಡೆದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಮೀಸಲಿಡುತ್ತಿದ್ದ 3150 ಕೋಟಿ ರು.ಗಳಿದ್ದ ಅನುದಾನವನ್ನು 1200 ಕೋಟಿ ರು.ಗೆ ಸೀಮಿತಗೊಳಿಸಿದರು ಎಂದು ಆರೋಪಿಸಿದರು. ಮೊದಲು 400 ಕೋಟಿ ರು.ಗಳಿದ್ದ ಅನುದಾನವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 3150 ಕೋಟಿ ರು.ಗಳಿಗೆ ಹೆಚ್ಚಳ ಮಾಡಿದ್ದರು. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಅನುದಾನ ಕಡಿಮೆಗೊಳಿಸದಂತೆ ಮನವಿ ಮಾಡಿದರು ಸ್ಪಂದಿಸದೆ 1950 ಕೋಟಿ ರು.ಅನುದಾನ ಕಡಿತಗೊಳಿಸಿದರು.
Kolar: ಸಿದ್ದರಾಮಯ್ಯ ಸ್ಪರ್ಧೆ: ಇನ್ನೂ ಬಗೆಹರಿಯದ ಗೊಂದಲ
ಆನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 1200 ಕೋಟಿ ರು.ಗಳಿದ್ದ ಅನುದಾನವನ್ನು 600 ಕೋಟಿಗೆ ತಂದು ನಿಲ್ಲಿಸಿದೆ. ಕುಮಾರಸ್ವಾಮಿರವರು ಅನುದಾನ ಕಡಿಮೆ ಮಾಡದೆ ಹೋಗಿದ್ದರೆ ಬಿಜೆಪಿ ಸರ್ಕಾರ ಅನುದಾನ ಕಡಿತಗೊಳಿಸುವ ಧೈರ್ಯ ಮಾಡುತ್ತಿರಲಿಲ್ಲ ಎಂದು ದೂರಿದರು. ಕರ್ನಾಟಕದ ಇತಿಹಾಸದಲ್ಲಿ ಬೇಕಾದಷ್ಟುಮುಖ್ಯಮಂತ್ರಿಗಳು ಬಂದು ಹೋದರು. ಆದರೆ, ಸಿದ್ದರಾಮಯ್ಯ ಅವರಂತೆ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಜನರ ಬಗ್ಗೆ ಆಲೋಚನೆ ಮಾಡುವ ಮುಖ್ಯಮಂತ್ರಿಯನ್ನು ನೋಡಿರಲಿಲ್ಲ ಎಂದು ಜಮೀರ್ ಗುಣಗಾನ ಮಾಡಿದರು.
ಮತ ಹಾಕದೆ ಮೋಸ ಮಾಡಬೇಡಿ: ಕಳೆದ 60 ವರ್ಷಗಳ ಇತಿಹಾಸದಲ್ಲಿ ಮಾಗಡಿ ಕ್ಷೇತ್ರವನ್ನು ಯಾರಾದರು ಅಭಿವೃದ್ಧಿ ಮಾಡಿದ್ದರೆ ಅದು ಬಾಲಕೃಷ್ಣ ಮತ್ತು ಅವರ ಕುಟುಂಬದವರ ಕೊಡುಗೆಯಾಗಿದೆ. ಹೀಗಿದ್ದರು ಬಾಲಕೃಷ್ಣರವರ ಸೋಲು ನನಗೂ ಆಶ್ಚರ್ಯ ತಂದಿದೆ. ಕಳೆದ ಬಾರಿ ತೆಗೆದುಕೊಂಡ ತಪ್ಪು ನಿರ್ಧಾರ ಜನರ ಅರಿವಿಗೂ ಬಂದಿದೆ ಎಂದು ಶಾಸಕ ಜಮೀರ್ ಅಹಮದ್ ಹೇಳಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕಾವಲುಗಾರನಾಗಿ ಸೇವೆ: ಎಚ್.ಡಿ.ಕುಮಾರಸ್ವಾಮಿ
ಕ್ಷೇತ್ರದ ಅಭಿವೃದ್ಧಿ ಬಾಲಕೃಷ್ಣ ಅವರಿಂದ ಮಾತ್ರ ಸಾಧ್ಯವೆಂದು ಜನರೇ ತೀರ್ಮಾನಿಸಿದ್ದಾರೆ. ನಾವು ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟದೆ ಇರಬಹುದು. ಆದರೂ ನಾವಿಬ್ಬರು ಸಹೋದರರಂತೆ ಇದ್ದೇವೆ. ಬಾಲಕೃಷ್ಣ ಅಲ್ಪಸಂಖ್ಯಾತರು ಮಾತ್ರವಲ್ಲ ಪ್ರತಿ ಸಮುದಾಯದವರನ್ನು ಜೊತೆಯಲ್ಲಿ ಕೊಂಡೊಯ್ಯುವ ನಾಯಕ. ನಿಮಗಾಗಿ ಶಾದಿ ಮಹಲ್ ನಿರ್ಮಿಸಿಕೊಟ್ಟವರಿಗೆ ಮತ ನೀಡದಿದ್ದರೆ ಮೋಸ ಮಾಡಿದಂತಾಗುತ್ತದೆ. ನೀವು ಅವರಿಗೆ ನೀಡುವ ಮತ ಸಿದ್ದರಾಮಯ್ಯ ಮತ್ತು ನನಗೆ ಶಕ್ತಿ ತುಂಬುತ್ತದೆ ಎಂದರು.