ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿರುವ ಯಶವಂತಪುರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು (ಆ.23): ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಸಜ್ಜಾಗಿರುವ ಯಶವಂತಪುರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ. ತಮಗೆ ಮುಖ್ಯ ಸಚೇತಕ ಸ್ಥಾನ ಹಾಗೂ ತಮ್ಮ ಬೆಂಬಲಿಗರಿಗೆ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ವರಿಷ್ಠರ ಜತೆ ಮಾತುಕತೆ ನಡೆಸುವುದಕ್ಕಾಗಿ ಸೋಮಶೇಖರ್ ಅವರು ಇನ್ನೆರಡು ದಿನಗಳಲ್ಲಿ ದೆಹಲಿಗೆ ತೆರಳಲು ನಿರ್ಧರಿಸಿದ್ದಾರೆ.
ಅಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ವರಿಷ್ಠರು ಭರವಸೆ ನೀಡಿದಲ್ಲಿ ಬಿಜೆಪಿಯಲ್ಲೇ ಮುಂದುವರೆಯಬಹುದು. ಇಲ್ಲದಿದ್ದರೆ ತಮ್ಮ ಬೆಂಬಲಿಗರ ಹಾದಿಯನ್ನೇ ಹಿಡಿದು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಪಕ್ಷದ ಮುಖ್ಯ ಸಚೇತಕ ಸ್ಥಾನವನ್ನು ತಮಗೆ ನೀಡಬೇಕು ಎಂಬ ಬೇಡಿಕೆಯನ್ನು ಸೋಮಶೇಖರ್ ಅವರು ಹಲವು ದಿನಗಳ ಹಿಂದೆಯೇ ಪಕ್ಷದ ರಾಜ್ಯ ನಾಯಕರ ಮುಂದಿಟ್ಟಿದ್ದರು. ಆದರೆ, ಆ ಬಗ್ಗೆ ಯಾವುದೇ ನಾಯಕರು ಸ್ಪಷ್ಟಭರವಸೆ ನೀಡುವ ಪರಿಸ್ಥಿತಿಯಲ್ಲಿ ಇರಲಿಲ್ಲ.
‘ನಮ್ನೀರು, ನಮ್ಹಕ್ಕು’ ಎಂದವರು ತ.ನಾಡಿಗೆ ಬಿಟ್ಟಿದ್ದೇಕೆ?: ಎಚ್.ಡಿ.ಕುಮಾರಸ್ವಾಮಿ
ವರಿಷ್ಠರ ತೀರ್ಮಾನವೇ ಅಂತಿಮ ಎಂಬ ಮಾತನ್ನು ರಾಜ್ಯ ನಾಯಕರು ಹೇಳಿದ್ದರಿಂದ ಸೋಮಶೇಖರ್ ಅವರು ಇದೀಗ ವರಿಷ್ಠರೊಂದಿಗೆ ಸಮಾಲೋಚನೆ ನಡೆಸುವುದಕ್ಕಾಗಿ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಲು ಉದ್ದೇಶಿಸಿದ್ದಾರೆ. ಒಂದು ವೇಳೆ ಅಮಿತ್ ಶಾ ಹಾಗೂ ನಡ್ಡಾ ಸಿಗದಿದ್ದರೂ ಸಂತೋಷ್ ಅವರೊಂದಿಗೇ ಚರ್ಚೆ ಮಾಡಿ ವಾಪಸಾಗಲಿದ್ದಾರೆ ಎನ್ನಲಾಗಿದೆ.
ರಾಮನಗರದ ಜಲದಾಹ ನೀಗಿಸಲಿದೆ ನೆಟ್ಕಲ್ ಯೋಜನೆ!
ತಾವು ದೆಹಲಿಗೆ ಹೋಗುವುದನ್ನು ಸ್ವತಃ ಸೋಮಶೇಖರ್ ಅವರೇ ಖಚಿತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 3-4 ದಿನದಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ. ದೆಹಲಿಗೆ ತೆರಳುತ್ತಿದ್ದು, ಅಲ್ಲಿ ವರಿಷ್ಠರ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.