ಹೆಬ್ಬಾರ್‌ ಅತೃಪ್ತಿ ಶಮನಕ್ಕೆ 6 ಮಂದಿಗೆ ಬಿಜೆಪಿ ಕೊಕ್‌

By Kannadaprabha NewsFirst Published Aug 23, 2023, 4:41 AM IST
Highlights

ಬಿಜೆಪಿ ತೊರೆದು ಕಾಂಗ್ರೆಸ್‌ಗೆ ‘ಘರ್‌ ವಾಪಸಿ’ ಮಾಡಲು ಯಲ್ಲಾಪುರ ಶಾಸಕ ಶಿವರಾಮ್‌ ಹೆಬ್ಬಾರ್‌ ಮುಂದಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಅವರ ಮನವೊಲಿಕೆ ಮಾಡಲು ಯಲ್ಲಾಪುರ ಕ್ಷೇತ್ರದ ಬಿಜೆಪಿಯ ಆರು ಮುಖಂಡರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಲಾಗಿದೆ. ಇವರು ಈ ಹಿಂದೆ ಚುನಾವಣೆಯಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದ್ದರು ಎಂದು ಹೆಬ್ಬಾರ್‌ ದೂರಿದ್ದರು.

ಕಾರವಾರ(ಆ.23):  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬಿಜೆಪಿಯ 19 ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. 17 ಪದಾಧಿಕಾರಿಗಳನ್ನು ಹುದ್ದೆಯಿಂದ ವಿಮುಕ್ತಿಗೊಳಿಸಿದರೆ, ಇಬ್ಬರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಬಿಜೆಪಿ ತೊರೆದು ಕಾಂಗ್ರೆಸ್‌ಗೆ ‘ಘರ್‌ ವಾಪಸಿ’ ಮಾಡಲು ಯಲ್ಲಾಪುರ ಶಾಸಕ ಶಿವರಾಮ್‌ ಹೆಬ್ಬಾರ್‌ ಮುಂದಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಅವರ ಮನವೊಲಿಕೆ ಮಾಡಲು ಯಲ್ಲಾಪುರ ಕ್ಷೇತ್ರದ ಬಿಜೆಪಿಯ ಆರು ಮುಖಂಡರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಲಾಗಿದೆ. ಇವರು ಈ ಹಿಂದೆ ಚುನಾವಣೆಯಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದ್ದರು ಎಂದು ಹೆಬ್ಬಾರ್‌ ದೂರಿದ್ದರು.

ಕಾಂಗ್ರೆಸ್‌ಗೆ ಬರುತ್ತೇನೆ ಎಂದು ಶಿವರಾಮ ಹೆಬ್ಬಾರ ಹೇಳಿಲ್ಲ: ಶಾಸಕ ಸತೀಶ್‌ ಸೈಲ್‌

‘ಚುನಾವಣೆ ಬಳಿಕ ಪಕ್ಷದ ಅಭ್ಯರ್ಥಿಗಳು ನೀಡಿದ ದೂರಿನಂತೆ ರಾಜ್ಯ ಶಿಸ್ತು ಸಮಿತಿಯ ಸೂಚನೆಯ ಮೇರೆಗೆ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬಾಂಬೆ ಬಾಯ್ಸ್‌ ಟೀಮ್‌’ನ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ವಾಪಸಾಗುತ್ತಾರೆ, ಇದರಲ್ಲಿ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ ಅವರ ಹೆಸರಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಹೆಬ್ಬಾರ್‌, ನಾನು ಬಿಜೆಪಿ ಬಿಡಲ್ಲ. ಆದರೆ, ಬಿಜೆಪಿಯ ಕೆಲ ನಾಯಕರ ಬಗ್ಗೆ ಅಸಮಾಧಾನವಿದೆ. ಕ್ಷೇತ್ರದಲ್ಲಿನ ವಿದ್ಯಮಾನ, ಕಳೆದ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು, ನಮ್ಮನ್ನು ಸೋಲಿಸಲು ಕೆಲಸ ಮಾಡಿದವರ ಬಗ್ಗೆ ಪಕ್ಷದ ವರಿಷ್ಠರ ಗಮನ ಸೆಳೆದಿದ್ದೆ. ಆದರೆ, ಪಕ್ಷದ ನಾಯಕರು ಈವರೆಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಬೇಸರ ಮೂಡಿಸಿದೆ. ಇವೆಲ್ಲದರ ಬಗ್ಗೆ ಬೆಂಗಳೂರಿಗೆ ಹೋಗಿ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸುತ್ತೇನೆ ಎಂದಿದ್ದರು. ಅವರ ಹೇಳಿಕೆ ಬೆನ್ನಲ್ಲೇ ಪಕ್ಷ ಈ ಶಿಸ್ತುಕ್ರಮ ಕೈಗೊಂಡಿರುವುದು ಕುತೂಹಲ ಮೂಡಿಸಿದೆ.

ಘರ್‌ ವಾಪಸಿ ಆಗುತ್ತಾರೆ ಎನ್ನಲಾಗುತ್ತಿರುವ ಇನ್ನೊಬ್ಬ ‘ಬಾಂಬೆ ಬಾಯ್ಸ್‌’ ತಂಡದ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರ ಯಶವಂತಪುರ ಕ್ಷೇತ್ರದಲ್ಲೂ ಇತ್ತೀಚೆಗೆ ಅವರ ವಿರೋಧಿಗಳನ್ನು ಪಕ್ಷವು ಉಚ್ಚಾಟನೆ ಮಾಡಿತ್ತು.

click me!