ಕಾಂಗ್ರೆಸ್‌ಗೆ ಬರುತ್ತೇನೆ ಎಂದು ಶಿವರಾಮ ಹೆಬ್ಬಾರ ಹೇಳಿಲ್ಲ: ಶಾಸಕ ಸತೀಶ್‌ ಸೈಲ್‌

Published : Aug 21, 2023, 06:08 PM IST
ಕಾಂಗ್ರೆಸ್‌ಗೆ ಬರುತ್ತೇನೆ ಎಂದು ಶಿವರಾಮ ಹೆಬ್ಬಾರ ಹೇಳಿಲ್ಲ: ಶಾಸಕ ಸತೀಶ್‌ ಸೈಲ್‌

ಸಾರಾಂಶ

ಶಿವರಾಮ ಹೆಬ್ಬಾರ ಕಾಂಗ್ರೆಸ್‌ಗೆ ಬರುತ್ತೇನೆಂದು ಎಲ್ಲೂ ಹೇಳಿಲ್ಲ, ಇದು ಉಹಾಪೋಹವಾಗಿದೆ ಎಂದು ಶಾಸಕ ಸತೀಶ ಸೈಲ್‌ ಹೇಳಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅಧಿಕೃತವಾಗಿ ಪಕ್ಷಕ್ಕೆ ಬರಲಿ, ಆಮೇಲೆ ಉತ್ತರ ನೀಡುತ್ತೇನೆ. 

ಕಾರವಾರ (ಆ.21): ಶಿವರಾಮ ಹೆಬ್ಬಾರ ಕಾಂಗ್ರೆಸ್‌ಗೆ ಬರುತ್ತೇನೆಂದು ಎಲ್ಲೂ ಹೇಳಿಲ್ಲ, ಇದು ಉಹಾಪೋಹವಾಗಿದೆ ಎಂದು ಶಾಸಕ ಸತೀಶ ಸೈಲ್‌ ಹೇಳಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅಧಿಕೃತವಾಗಿ ಪಕ್ಷಕ್ಕೆ ಬರಲಿ, ಆಮೇಲೆ ಉತ್ತರ ನೀಡುತ್ತೇನೆ. ಹೆಬ್ಬಾರ ಅವರು ಬರಲು ಅಷ್ಟು ಸುಲಭವಿಲ್ಲ. ಅವರು ಬಿಜೆಪಿಗೆ ನಿಷ್ಠರಾಗಿ ಹೆಸರು ಮಾಡಿದ್ದಾರೆ. ಅವರು ಮತ್ತೆ ಕಾಂಗ್ರೆಸ್‌ಗೆ ಬರುತ್ತಾರೆ ಎಂದರೆ ನನಗಂತೂ ನಂಬಿಕೆಯಿಲ್ಲ. ಅವರು ಹಾಗೇನಾದರೂ ಇದ್ದರೆ ನಮ್ಮೊಂದಿಗೆ ಚರ್ಚೆ ಮಾಡುತ್ತಿದ್ದರು. ನನ್ನ ಬಳಿಯಂತೂ ಈ ವರೆಗೆ ಚರ್ಚೆ ಮಾಡಿಲ್ಲ ಎಂದು ಹೇಳಿದರು.

ನಮ್ಮ ಪಕ್ಷದ ಎಷ್ಟೋ ಕಾರ್ಯಕರ್ತರು ಚುನಾವಣೆ ಸಂದರ್ಭದಲ್ಲಿ ಬೇರೆಡೆ ಓಡಿ ಹೋಗಿದ್ದರು. ಕೆಲಸ ಆಗುವ ತನಕವಿದ್ದು, ಆನಂತರ ಕಾಣದಂತೆ ಮಾಯವಾಗಿದ್ದರು. ಹಾಗೆಂದ ಮಾತ್ರಕ್ಕೆ ತಾವು ಹಿಂದೆ ಬೀಳಲಿಲ್ಲ. ಹಳ್ಳಿ ಹಳ್ಳಿಗೆ ಹೋಗಿ ಚುನಾವಣೆಯಲ್ಲಿ ಗೆದ್ದಿದ್ದೇವೆ. ಯಾವುದೇ ಪಕ್ಷವಿರಲಿ ಕಾಲೆಳೆಯುವವರು ಇರುತ್ತಾರೆ. ತಮ್ಮ ಅಭ್ಯರ್ಥಿ ಸೋಲಿಗೆ ಪಕ್ಷದವರೇ ಕಾರಣರಾಗಿರುತ್ತಾರೆ. ಕೇವಲ ಬಿಜೆಪಿ ಒಂದೇ ಅಲ್ಲ, ಕಾಂಗ್ರೆಸ್‌, ಜೆಡಿಎಸ್‌ನಲ್ಲೂ ಈ ಪರಿಸ್ಥಿತಿ ಇದೆ. ಮುಗ್ದ ಜನ ಮನುಷ್ಯರನ್ನು ನೋಡಿ ಮತ ನೀಡುತ್ತಾರೆ. ಅವರು ನೀಡಿದ ಮತದಲ್ಲಿ ನಮ್ಮಂಥ ಪ್ರಾಮಾಣಿಕ ಅಭ್ಯರ್ಥಿಗಳು ಗೆದ್ದು ಜನಸೇವೆ ಮಾಡುತ್ತಾರೆ ಎಂದರು.

ಕ್ರಾಂತಿಕಾರಕ ಕಾಯ್ದೆಯ ರೂವಾರಿ ದೇವರಾಜ ಅರಸು: ಶಾಸಕ ದೇಶಪಾಂಡೆ

ಕಾಂಗ್ರೆಸ್ಸನ್ನು ಸಮುದ್ರಕ್ಕೆ ಹೋಲಿಸಿದ ಸಚಿವ ವೈದ್ಯ: ಕಾಂಗ್ರೆಸ್‌ ಎಂದರೆ ಸಮುದ್ರವಿದ್ದಂತೆ, ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎನ್ನುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಶಿವರಾಮ ಹೆಬ್ಬಾರ ಕಾಂಗ್ರೆಸ್‌ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ನಗರಕ್ಕೆ ಆಗಮಿಸಿದ್ದ ವೇಳೆ ಬಿಜೆಪಿಗೆ ಸೇರಿದ್ದ ಶಿವರಾಮ ಹೆಬ್ಬಾರ ಪುನಃ ಕಾಂಗ್ರೆಸ್‌ಗೆ ಬರುತ್ತಾರೆಯೇ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ತಾವು ರಾಜಕೀಯಕ್ಕೆ ಬರುವ ಮೊದಲೇ ಕಾಂಗ್ರೆಸ್‌ ಸಮುದ್ರ ಎಂದು ತಮಗೆ ಕೆಲವರು ಹೇಳುತ್ತಿದ್ದರು. 

ಈಗಲೂ ಅದನ್ನೇ ಹೇಳುತ್ತಾರೆ. ಮುಂದೆಯೂ ಕಾಂಗ್ರೆಸ್‌ ಎನ್ನುವುದು ಸಮುದ್ರವಾಗಿರುತ್ತದೆ. ಮಂಕಾಳ ವೈದ್ಯ ಸಚಿವರಾಗಬೇಕು ಎನ್ನುವ ತೀರ್ಮಾನವನ್ನು ಹೈಕಮಾಂಡ್‌ ತೆಗೆದುಕೊಂಡಿದೆ. ಅದೇ ರೀತಿ ಯಾರು ಬರಬೇಕು, ಬರಬಾರದು ಎನ್ನುವುದನ್ನು ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುತ್ತದೆ. ಅವರ ನಿರ್ಧಾರಕ್ಕೆ ತಾವು ಬದ್ಧರಾಗಿದ್ದೇವೆ. ಇದರಲ್ಲಿ ವೈಯಕ್ತಿಕ ಎನ್ನುವುದು ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಹೆಬ್ಬಾರ ಕಾಂಗ್ರೆಸ್‌ ಬರುವುದನ್ನು ವಿರೋಧಿಸಿ ನೀಡಿರುವ ಶಾಸಕ ಭೀಮಣ್ಣ ನಾಯ್ಕ ಹೇಳಿಕೆ ವೈಯಕ್ತಿಕವೋ, ಪಕ್ಷದ್ದೋ ಗೊತ್ತಿಲ್ಲ. ಅವರ ಅಭಿಪ್ರಾಯ ಅವರು ಹೇಳಿದ್ದಾರೆ. 

ನಾನೊಬ್ಬ ಜವಾಬ್ದಾರಿ ಸ್ಥಾನದಲ್ಲಿದ್ದು ಏನನ್ನೂ ಹೇಳಲು ತಯಾರಿಲ್ಲ. ಭೀಮಣ್ಣ ಹೇಳಿಕೆ ಸರಿಯೋ ತಪ್ಪೋ ಎಂದು ಹೇಳುವುದೂ ಇಲ್ಲ. ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದರು. ಶಿವರಾಮ ಹೆಬ್ಬಾರ ಪಕ್ಷ ಸೇರ್ಪಡೆಯ ಕುರಿತು ಕೇಳಿದಾಗ, 10 ವರ್ಷಗಳಿಂದ ತಮಗೆ ಹೆಬ್ಬಾರ ಆತ್ಮೀಯ ಸ್ನೇಹಿತರು. ಅವರು ಸಚಿವರಾಗಿದ್ದಲೂ ನಮ್ಮ ಸ್ನೇಹ ಹಾಳಾಗಿಲ್ಲ. ತಾವು ಸಚಿವನಾದಾಗಲೂ ಸ್ನೇಹ ಹಾಗೇ ಇದೆ. ತಮ್ಮ ಬಳಿ ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ವಿಚಾರ ಚರ್ಚೆ ಮಾಡಿಲ್ಲ. ಅಭಿವೃದ್ಧಿ ವಿಚಾರವಾಗಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅದರ ಹೊರತುಪಡಿಸಿ ಬೇರೇನೂ ಮಾತನಾಡಿಲ್ಲ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳಲು ಆಪರೇಷನ್‌ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಕ್ಕೆ, ಕಾಂಗ್ರೆಸ್‌ನ 136 ಸೀಟು ಡಿಕೆಶಿ, ಸಿದ್ದರಾಮಯ್ಯರ ಟೀಮ್‌ ಆಗಿದೆ. ಅದರಲ್ಲಿ ಆ ಟೀಮ್‌, ಈ ಟೀಮ್‌ ಎಂದಿಲ್ಲ. ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯನ್ನಾಗಿ ಮಾಡಲು ಹೈಕಮಾಂಡ್‌ ತೀರ್ಮಾನಿಸಿದರೆ ನಾವು 136 ಶಾಸಕರೂ ಅದಕ್ಕೆ ಬದ್ಧರಾಗಿ ಅವರನ್ನು ಸಿಎಂ ಮಾಡುತ್ತೇವೆ. ಪಕ್ಷದ ಮುಖಂಡರು ಸಿಎಂ ಮಾಡಬೇಕೆಂದರೆ ಅವರ ತೀರ್ಮಾನಕ್ಕೆ ನಮ್ಮ ಸಹಕಾರವಿದೆ. ಪಕ್ಷದ ಚೌಕಟ್ಟಿನಲ್ಲಿ ಅವರು ತೀರ್ಮಾನ ಮಾಡುತ್ತಾರೆ ಎಂದರು.

ನೌಕರರ ಬೇಡಿಕೆಗಳಿಗೆ ಐಎಎಸ್‌ ಅಧಿಕಾರಿಗಳು ಅಡ್ಡಗಾಲು ಹಾಕ್ತಾರೆ: ರೇಣುಕಾಚಾರ್ಯ

ಪಕ್ಷ ಬಿಟ್ಟು ಹೋದವರಿಗೆ ವ್ಯತ್ಯಾಸ ತಿಳಿದು ವಾಪಸ್‌ ಬರುತ್ತಿದ್ದಾರೆಯೇ ಎಂದು ಕೇಳಿದ್ದಕ್ಕೆ, ನಾವು ಹಿಂದೆ ಹೋಗಲು ಪ್ರಯತ್ನ ಮಾಡುವುದಿಲ್ಲ. ದೊಡ್ಡವರಿದ್ದಾರೆ. ನಮ್ಮ ಕಾಂಗ್ರೆಸ್‌ ಪಕ್ಷ ಸಮುದ್ರ, ಬರುವವರು ಇರುತ್ತಾರೆ, ಹೋಗುವವರೂ ಇರುತ್ತಾರೆ ಎಂದರು. ಬಿಜೆಪಿ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತದೆಯೇ ಎನ್ನುವ ಪ್ರಶ್ನೆಗೆ, ಅವರು ತಲೆಕೆಟ್ಟವರು. ಬಿಜೆಪಿಯವರಿಗೆ ತಲೆಯಿಲ್ಲ. ತಲೆ ಕೆಡಿಸಿಕೊಳ್ಳುವುದು ಎಲ್ಲಿಂದ? ತಲೆ ಇದ್ದಿದ್ದರೆ ಇವರನ್ನು (ಶಾಸಕರನ್ನು) ಕರೆದುಕೊಂಡು ಹೋಗುತ್ತಿದ್ದರಾ? ಎಂದು ಕೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ