ಸರ್ಕಾರದಲ್ಲಿ ಇರುವುದು ಸಾರ್ವಜನಿಕರ ಹಣ. ಆದರೆ ಹಿಂದಿನ ಬಿಜೆಪಿ ಸರ್ಕಾರ ಬೇಕಾಬಿಟ್ಟಿಹಣ ಬಳಕೆ ಮಾಡಿದ ಕಾರಣ ಸರ್ಕಾರದ ಖಜಾನೆ ಈಗ ಖಾಲಿಯಾಗಿದೆ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಆರೋಪಿಸಿದರು.
ಕಾರವಾರ (ಜು.16): ಸರ್ಕಾರದಲ್ಲಿ ಇರುವುದು ಸಾರ್ವಜನಿಕರ ಹಣವಾಗಿದೆ. ಆದರೆ ಹಿಂದಿನ ಬಿಜೆಪಿ ಸರ್ಕಾರ ಬೇಕಾಬಿಟ್ಟಿಹಣ ಬಳಕೆ ಮಾಡಿದ ಕಾರಣ ಖಜಾನೆ ಖಾಲಿಯಾಗಿದೆ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಆರೋಪಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬ ವ್ಯವಸ್ಥೆಯಲ್ಲಿ ವೈಯಕ್ತಿಕ ಹಣ ಹೇಗೆ ಖರ್ಚು ಮಾಡುತ್ತೇವೆಯೋ ಅದೇ ರೀತಿ ಸರ್ಕಾರದ ಹಣ ಕೂಡಾ ಯೋಚಿಸಿ ಬಳಕೆ ಮಾಡಬೇಕು. ಆದರೆ ಬಿಜೆಪಿ ಅವಧಿಯಲ್ಲಿ ಮನಸೋ ಇಚ್ಛೆ ಹಣ ದುಂದು ವೆಚ್ಚ ಮಾಡಿದ್ದಾರೆ ಎಂದ ಅವರು, ಕಾಂಗ್ರೆಸ್ ನೂತನ ಸರ್ಕಾರ ರಚನೆ ಮಾಡಿ ಎರಡು ತಿಂಗಳಾಗಿಲ್ಲ.
ಏನು ಮಾಡಿದ್ದೀರಿ ಎಂದು ವಿರೋಧ ಪಕ್ಷದವರು ಕೇಳುತ್ತಿದ್ದಾರೆ. ನಾವು ಭರವಸೆ ನೀಡಿದ್ದ ಗ್ಯಾರೆಂಟಿ ಯೋಜನೆಯೇ ನಿಮ್ಮ ಪಕ್ಷವನ್ನು ಸೋಲಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರೆಂಟಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈಗಾಗಲೇ ಕೆಲವು ಯೋಜನೆ ಜಾರಿಗೆಯಾಗಿದೆ. ಎಲ್ಲವನ್ನೂ ಅನುಷ್ಠಾನ ಮಾಡುತ್ತೇವೆ. ಉತ್ತಮ ಯೋಜನೆ ಜಾರಿ ಮಾಡಿದಾಗ ವಿರೊಧ ಪಕ್ಷದವರು ಶ್ಲಾಘಿಸಬೇಕು. ತಪ್ಪಾದಾಗ ಟೀಕಿಸಬೇಕು. ಎಲ್ಲವಕ್ಕೂ ಟೀಕಿಸುತ್ತೇವೆ. ಬೇಜವಾಬ್ದಾರಿಯಿಂದ ಮಾತನಾಡುತ್ತೇವೆಂದರೆ ಸರಿಯಲ್ಲ. ಅನವಶ್ಯಕವಾಗಿ ಗೊಂದಲ ಸೃಷ್ಟಿಸಬಾರದರು ಎಂದು ವಿರೋಧ ಪಕ್ಷದವರಿಗೆ ಕಿವಿಮಾತು ಹೇಳಿದರು.
undefined
ಲೋಕಸಭಾ ಚುನಾವಣೆ: ತೇಜಸ್ವಿ ಸೂರ್ಯ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟ ಸೋಮಣ್ಣ
ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಆದ ಹಾನಿಯ ಬಗ್ಗೆ ಕೂಡಲೇ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಕರಾವಳಿಯಲ್ಲಿ ಭಾರಿ ಮಳೆಯಾಗಿ ಸಾರ್ವಜನಿಕ ಆಸ್ತಿ-ಪಾಸ್ತಿ, ಬೆಳೆಗೆ ಹಾನಿಯಾಗಿದೆ. ಮಲೆನಾಡಿನ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಇದರಿಂದ ಬೆಳೆ ಹಾನಿಯಾಗಿದೆ. ಕಂದಾಯ ಸಚಿವರ ಜತೆಗೂ ಮಾತುಕತೆ ಮಾಡಲಾಗಿದ್ದು, ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಲು ಕೂಡಾ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಲೋಕಸಭೆ ಚುನಾವಣೆಗೆ ಸಂಬಂಧಿಸಿ ಮೂರು-ನಾಲ್ಕು ಅಭ್ಯರ್ಥಿಗಳ ಹೆಸರು ಇದೆ.
ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದ ಅವರು, ಕಾಳಿ ನದಿ ನೀರನ್ನು ಉತ್ತರ ಕರ್ನಾಟಕ ಭಾಗಕ್ಕೆ ಕೊಂಡೊಯ್ಯುವ ಬಗ್ಗೆ ಪ್ರಶ್ನಿಸಿದಾಗ, ಉತ್ತರ ಕನ್ನಡ ಜಿಲ್ಲೆಗೆ ಮೊದಲು ಈ ನದಿ ನೀರು ಉಪಯೋಗ ಆಗಬೇಕು. ನೀರನ್ನು ಕೊಡುವುದಿಲ್ಲ ಎನ್ನಬಾರದು. ಆದರೆ ಈ ಜಿಲ್ಲೆಯಲ್ಲೇ ನೀರಿನ ಸಮಸ್ಯೆಯಿದೆ. ಇಲ್ಲಿಗೆ ಬಿಟ್ಟು ಬೇರೆಡೆ ಹೇಗೆ ಕೊಡಲು ಸಾಧ್ಯವಾಗುತ್ತದೆ ಎಂದು ಕೇಳಿದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುಮಟಾದಲ್ಲಿ ಆದರೆ ತಪ್ಪಿಲ್ಲ. ಕಾರವಾರದಲ್ಲಿ ಮೆಡಿಕಲ್ ಕಾಲೇಜಿದೆ. ವೈದ್ಯರಿಲ್ಲ. ಆಸ್ಪತ್ರೆ ನಿರ್ಮಾಣ ಮಾಡುವುದು ದೊಡ್ಡದಲ್ಲ. ಆದರೆ ಸರಿಯಾಗಿ ವೈದ್ಯರು ಇರಬೇಕು. ವೈದ್ಯರಿಲ್ಲದೇ ಆಸ್ಪತ್ರೆ ನಿರ್ಮಿಸಿಟ್ಟರೆ ಏನು ಪ್ರಯೋಜವಾಗುತ್ತದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕುಮಟಾದಲ್ಲಿ ಜಾಗ ನಿಗದಿ ಮಾಡಿ ದಿನಕರ (ಶಾಸಕ ದಿನಕರ ಶೆಟ್ಟಿ) ಪ್ರಚಾರ ಮಾಡಿಕೊಂಡರು. ಅವರಿಗೆ ಲಾಭವಾಗಿರಬಹುದು ಎಂದು ನಗೆಬೀರಿದರು.
ಕಾರವಾರ ಉಪ ವಿಭಾಗಾಧಿಕಾರಿ ವರ್ಗಾವಣೆ ವಿಚಾರದಲ್ಲಿ ಶಾಸಕ ದೇಶಪಾಂಡೆ ಹಾಗೂ ಸಚಿವ ಮಂಕಾಳು ವೈದ್ಯ ಅವರಿಗೆ ಜಟಾಪಟಿಯಾಗಿದೆಯೇ ಎಂದು ಪ್ರಶ್ನಿಸಿದಾಗ, ಯಾರು ಎಸಿಯಾದರೇನು? ಈ ಹಿಂದೆಯೂ ಕೂಡಾ ವರ್ಗಾವಣೆ ಆದೇಶವಾಗಿ ಬಳಿಕ ರದ್ದಾಗಿದೆ. ಜಿಲ್ಲಾ ಮಂತ್ರಿ ಹಾಗೂ ನಾವು ಬಹಳ ಪ್ರೀತಿಯಿಂದ ಇದ್ದೇವೆಂದು ಹೇಳಿ ನೀವು ಸುಮ್ಮನೆ ಹೆಚ್ಚುಕಡಿಮೆ ಮಾಡಬೇಡಿ ಎಂದರು. ಹಿರಿಯ ಶಾಸಕರಾಗಿದ್ದರೂ ಸಚಿವ ಸ್ಥಾನ ನೀಡದಿರಲು ಕಾರಣವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಆರ್.ವಿ. ದೇಶಪಾಂಡೆ, ಸಿಎಂ ಹುದ್ದೆಯನ್ನೇ ನನಗೆ ಮೀಸಲಿಟ್ಟಿರಬಹುದು. ಆ ಕಾರಣಕ್ಕೆ ನನಗೆ ಸಚಿವ ಸ್ಥಾನ ನೀಡಿಲ್ಲ ಎಂದು ದೇಶಪಾಂಡೆ ಹಾಸ್ಯಭರಿತವಾಗಿ ಹೇಳಿದರು.
ಮಾತೃವಂದನ, ಮಾತೃಪೂರ್ಣ ಯೋಜನೆ ನಿಲ್ಲಿಸಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಟೋಲ್ ಬಂದ್‌ಗೆ ಆಗ್ರಹ: ಕಾರವಾರದಿಂದ ಭಟ್ಕಳದವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿ ದಶಕ ಉರುಳಿದೆ. ಆದರೆ ಇದುವರೆಗೂ ಪೂರ್ಣಗೊಂಡಿಲ್ಲ. ಹೀಗಿರುವಾಗಿ ಟೋಲ್ ಸಂಗ್ರಹ ಆರಂಭಿಸಿರುವುದು ಸರಿಯಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಅಸಮಾಧಾನ ಹೊರಹಾಕಿದರು. ಕಾರವಾರದ ಸುರಂಗ ಉದ್ಘಾಟನೆಯಾದ ಕೆಲವೇ ದಿನಕ್ಕೆ ಪುನಃ ಬಂದ್ ಮಾಡಿರುವುದು ಏಕೆ? ಮೊದಲೇ ಪರಿಶೀಲನೆ ಆಗಿರಲಿಲ್ಲವೇ? ಅಂಕೋಲಾ ತಾಲೂಕಿನ ಹಟ್ಟಿಕೇರಿ ಬಳಿ ಸೇತುವೆಗೆ ಧಕ್ಕೆಯಾಗಿದೆ. ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ರೀತಿ ಇರುವಾಗ ಟೋಲ್ ಸಂಗ್ರಹ ಮಾಡುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ನಿಲ್ಲಿಸಬೇಕು. ಎಲ್ಲಾ ಕೆಲಸ ಮುಗಿದು, ಜನರ ಬಳಕೆಗೆ ಸಿಕ್ಕ ಬಳಿಕ ಆರಂಭಿಸಬೇಕು. ಇಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ರಾಷ್ಟ್ರೀಯ ಹೆದ್ದಾರಿ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವರಿಗೂ ಪತ್ರ ಬರೆದು ಟೋಲ್ ಸಂಗ್ರಹ ನಿಲ್ಲಿಸುವಂತೆ ಒತ್ತಾಯಿಸುತ್ತೇವೆ ಎಂದರು.