ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ತಮಗೆ ಗೌರವವಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರೂ ಆದ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಪಪಡಿಸಿದ್ದಾರೆ.
ಹುಣಸೂರು (ಜ.05): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ತಮಗೆ ಗೌರವವಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷರೂ ಆದ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಪಪಡಿಸಿದ್ದಾರೆ. ಖರ್ಗೆ ಅವರು ಪ್ರಧಾನಿ ಹುದ್ದೆಯನ್ನು ನಿಭಾಯಿಸುವ ಶಕ್ತಿ ಹೊಂದಿಲ್ಲವೆನ್ನುವ ತಮ್ಮ ಹೇಳಿಕೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಂದರ್ಭದಲ್ಲಿ ಮೋದಿಯವರ ಸಮನಾಗಿ ನಿಲ್ಲುವವರು ಯಾರು ಇಲ್ಲ ಎಂದು ಹೇಳಿದ್ದೇನೆಯೇ ಹೊರತು, ಖರ್ಗೆಯವರನ್ನು ಕುರಿತು ಹೇಳಿಲ್ಲ ಎಂದರು.
ಅನುಭವಿ ರಾಜಕಾರಣಿಯಾದ ಖರ್ಗೆ ಅವರು ಪ್ರಧಾನಿಯಾದರೆ ಸಂತಸ ಪಡುವವರಲ್ಲಿ ನಾನು ಮೊದಲಿಗ. ಇಷ್ಟಕ್ಕೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಹೇಳಿದ್ದಾರೆ. ರಾಹುಲ್ ಕೂಡ ಮೋದಿ ಅವರಿಗೆ ಸಮನಾಗಿ ಆಳವಾದ ರಾಜಕೀಯ ಅನುಭವ ಹೊಂದಿಲ್ಲ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ ಇಲ್ಲ ಎನ್ನುವುದು ನನ್ನ ಭಾವನೆ ಎಂದರು.
ಖರ್ಗೆ ಕುರಿತು ಜಿ.ಟಿ. ದೇವೇಗೌಡರ ಹೇಳಿಕೆ ಸರಿಯಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿ ಮೋದಿ ಅವರಷ್ಟು ಶಕ್ತಿ ಸಾಮರ್ಥ್ಯವಿಲ್ಲ. ಹೀಗಾಗಿ ಮೋದಿಯೇ ಪ್ರಧಾನಿ ಸ್ಥಾನಕ್ಕೆ ಸೂಕ್ತವಾದವರು ಎಂಬ ಜೆ ಡಿಎಸ್ ಶಾಸಕ ಜಿ.ಟಿ. ದೇವೇಗೌಡರ ಹೇಳಿಕೆ ಸರಿಯಲ್ಲ ಎಂದು ಮಾಜಿ ಮೇಯರ್ ಪುರುಷೋತ್ತಮ್ ಖಂಡಿಸಿದರು. ಖರ್ಗೆ ಅವರು ತಮ್ಮ ರಾಜಕೀಯ ಇತಿಹಾಸದಲ್ಲಿ ಕಪ್ಪುಚುಕ್ಕೆ ಹೊಂದಿದವರಲ್ಲ. ಸಾಕಷ್ಟು ವಿದ್ಯಾವಂತರೂ ಆಗಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಸ್ವಂತ ಶಕ್ತಿಯ ಮೇಲೆ ಆಡಳಿತ ನಡೆಸುವ ಸಾಮರ್ಥ್ಯವಿಲ್ಲ. ಜಿ.ಟಿ. ದೇವೇಗೌಡರ ಕ್ಷೇತ್ರದಲ್ಲಿಯೇ ಇನ್ನೂ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಇದೇ ರೀತಿ ಖರ್ಗೆ ಅವರನ್ನು ಟೀಕಿಸುವ ಮೂಲಕ ಜಿ.ಟಿ. ದೇವೇಗೌಡರು ಪರೋಕ್ಷವಾಗಿ ಅಸ್ಪೃಶ್ಯತೆ ಆಚರಿಸುತ್ತಿರುವಂತಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಆಯ್ಕೆ ಕಗ್ಗಂಟು: ರಾಮಲಿಂಗಾರೆಡ್ಡಿ ನಿವಾಸದಲ್ಲಿ ಸಭೆ
ಜಿ.ಟಿ. ದೇವೇಗೌಡರು ಅಡ್ಡ ಮಾರ್ಗದಲ್ಲಿ ರಾಜಕೀಯ ನಡೆಸುತ್ತಿರುವವರು. ತಮಗೆ ನೆರವಾದವರ ಪಕ್ಷ ಸೇರುವವರಾಗಿದ್ದಾರೆ. ಹೀಗಾಗಿ, ಖರ್ಗೆ ಅವರನ್ನು ಮೋದಿಗೆ ಹೋಲಿಸುವ ನೈತಿಕತೆ ಇವರಿಗಿಲ್ಲ. ಇದೇ ರೀತಿಯ ಹೇಳಿಕೆ ನೀಡುವುದನ್ನು ಮುಂದುವರಿಸಿದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಮುಖಂಡರಾದ ಸೋಮಯ್ಯ ಮಲೆಯೂರು, ಸುನಿಲ್ ಕುಮಾರ್, ರಾಮ್ ಸಿಂಗ್, ಮುನ್ನೇಗೌಡ, ಮಣಿ, ಸುರೇಶ್‌ಗೌಡ ಇದ್ದರು.