ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಕಾಂಗ್ರೆಸ್ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ತನ್ನ ಕಡೆಯಿಂದ ಸಮರ್ಥ ಅಭ್ಯರ್ಥಿಯ ಆಯ್ಕೆಗೆ ಕಸರತ್ತು ಆರಂಭಿಸಿದೆ.
ಕೋಲಾರ (ಜ.05): ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಕಾಂಗ್ರೆಸ್ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ತನ್ನ ಕಡೆಯಿಂದ ಸಮರ್ಥ ಅಭ್ಯರ್ಥಿಯ ಆಯ್ಕೆಗೆ ಕಸರತ್ತು ಆರಂಭಿಸಿದೆ. ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೋಡಿಯು ನವದೆಹಲಿಗೆ ತೆರಳಿ ಪಕ್ಷದ ವರಿಷ್ಠ ಮಂಡಳಿಯ ಮುಂದೆ ರಾಜ್ಯದ ಎಲ್ಲ ೨೮ ಲೋಕಸಭಾ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಲ್ಲಿಸುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ನಡೆದ ಸಭೆ: ಈ ಹಿನ್ನೆಲೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ವೀಕ್ಷಕರು ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರಿನ ಕೋರಮಂಗಲದ ತಮ್ಮ ಕಚೇರಿಯಲ್ಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪಕ್ಷದ ಮುಖಂಡರ ಜೊತೆಗೆ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಕೋಲಾರ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಸೇರಿದಂತೆ ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್‌ಗಳ ಅಧ್ಯಕ್ಷರು ಭಾಗವಹಿಸಿದ್ದರು.
ಗೋದ್ರಾ ಮಾದರಿ ದಾಳಿ: ಹರಿಪ್ರಸಾದ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಂಸದ ಡಿ.ಕೆ.ಸುರೇಶ್
ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಈ ಬಾರಿ ಶತಾಯಗತಾಯ ಬಿಜೆಪಿಯನ್ನು ಅಧಿಕಾರದಿಂದ ಹೊರಗಟ್ಟಿ ಐಎನ್‌ಡಿಐಎ ಒಕ್ಕೂಟದ ಪ್ರಾಬಲ್ಯ ಸಾಧಿಸುವ ನಿಟ್ಟಿನಲ್ಲಿ ಒಂದೊಂದು ಕ್ಷೇತ್ರವೂ ನಿರ್ಣಾಯಕ. ಅದರಲ್ಲೂ ಕರ್ನಾಟಕದಲ್ಲಿ ನಮ್ಮದೇ ಸರ್ಕಾರ ಇರುವ ವೇಳೆ ಪಕ್ಷವು ಗರಿಷ್ಠ ಸ್ಥಾನಗಳನ್ನು ಪಡೆಯಲೇಬೇಕು. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಇಲ್ಲದಂತೆ ಒಗ್ಗಟ್ಟಿನಿಂದ ಕೆಲಸ ಮಾಡುವುದು ಅನಿವಾರ್ಯ ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಪದಾಧಿಕಾರಿಗಳನ್ನು ಪ್ರತ್ಯೇಕವಾಗಿ ರಾಮಲಿಂಗಾರೆಡ್ಡಿ ಕರೆದು ಅವರ ಅಭಿಪ್ರಾಯ ಸಂಗ್ರಹಿಸಿದರು. ಅಭಿಪ್ರಾಯ ಸಂಗ್ರಹಣೆಯ ನಂತರ ಮತ್ತೆ ಸಭೆ ನಡೆಸಿದ ರಾಮಲಿಂಗಾರೆಡ್ಡಿ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುವುದಾಗಿ ತಿಳಿಸಿದ್ದು, ಅದನ್ನೇ ವರಿಷ್ಠರಿಗೆ ವರದಿ ಮಾಡುವುದಾಗಿ ಹೇಳಿದರು.
ಶ್ರೀನಿವಾಸಪುರ ಮುಖಂಡರು ಗೈರು: ಸಭೆಗೆ ಶ್ರೀನಿವಾಸಪುರ ಕ್ಷೇತ್ರದ ಎರಡೂ ಬ್ಲಾಕ್ ಅಧ್ಯಕ್ಷರು ಗೈರು ಹಾಜರಾಗಿದ್ದರು. ಅಲ್ಲಿಂದ ಬಂದಿದ್ದ ಕೆಪಿಸಿಸಿ ಸದಸ್ಯ ಸೈಯದ್ ಖಾದರ್ ಒಬ್ಬರು ಮಾತ್ರ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದರು. ಉಳಿದ ಕ್ಷೇತ್ರಗಳ ಪದಾಧಿಕಾರಿಗಳು ಆಹಾರ ಸಚಿವ ಕೆ.ಎಚ್. ಮುನಿಯಪ್ಪರನ್ನೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಲು ಸಹಮತ ವ್ಯಕ್ತಪಡಿಸಿದರು.
ಘಟಬಂಧನ್ ನಿಲುವು ನಿಗೂಢ: ಕೋಲಾರ ಜಿಲ್ಲೆಯ ಉತ್ತರ-ದಕ್ಷಿಣ ಧೃವಗಳೆನಿಸಿರುವ ಕೆ.ಎಚ್.ಮುನಿಯಪ್ಪ ಮತ್ತು ಕಾಂಗ್ರೆಸ್ ಘಟಬಂಧನ್ ನಡುವೆ ಇನ್ನೂ ಸಂಪೂರ್ಣ ಸಹಮತ ಬಂದಿಲ್ಲ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಆಗ ಕೆಎಚ್ಚೆಂ ಜೊತೆ ಮುನಿಸಿಕೊಂಡಿದ್ದ ಶಾಸಕ ಬಂಗಾರಪೇಟೆ ಎಸ್.ಎನ್.ನಾರಾಯಣಸ್ವಾಮಿ, ಉನ್ನತ ಶಿಕ್ಷಣ ಸಚಿವ ಚಿಂತಾಮಣಿ ಸುಧಾಕರ್ ಮೃದು ನಿಲುವು ಹೊಂದಿರುವಂತಿದೆ. ಆದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್‌ಸಿ ಅನಿಲ್‌ಕುಮಾರ್ ಇನ್ನೂ ಕೆಎಚ್ಚೆಂ ವಿರೋಧಿ ನಿಲುವಿಗೆ ಅಂಟಿಕೊಂಡಿದ್ದಾರೆ.
ಇವೆಲ್ಲದರ ಮಧ್ಯೆ ಘಟಬಂಧನ್ ತಂಡವು ಕೋಲಾರದ ದಲಿತ ಮುಖಂಡ ಟಿ.ಎಂ. ಮುನಿಯಪ್ಪರನ್ನು ಅಭ್ಯರ್ಥಿಯನ್ನಾಗಿ ಹೂಡುವ ಪ್ರಯತ್ನದಲ್ಲಿ ಕಳೆದ ಮೂರು ತಿಂಗಳಿಂದ ಇರುವುದು ಗುಟ್ಟಾಗಿ ಉಳಿದಿಲ್ಲ. ಈ ನಡುವೆ ಕೆಎಚ್ ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ ಮತ್ತು ಸುಪ್ರೀಂಕೋರ್ಟ್ ವಕೀಲ, ಮಾಲೂರು ತಾಲೂಕು ದೊಡ್ಡಶಿವಾರದ ವೆಂಕಟಾಚಲ ಎಂಬುವರು ಎರಡು ದಿನಗಳ ಹಿಂದೆ ತಮಗೆ ಕಾಂಗ್ರೆಸ್ ಟಿಕೆಟ್ ಬಯಸಿ ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ.
ತೃತೀಯ ಲಿಂಗಿಗಳಿಗೂ ಬದುಕಲು ಅವಕಾಶ ಕೊಡಿ: ಮಂಜಮ್ಮ ಜೋಗತಿ ಮನವಿ
ಮಗನ ಪರ ಕೆ.ಎಚ್ ಬ್ಯಾಟಿಂಗ್: ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ನೆಲೆ ಕಂಡುಕೊಂಡಿರುವ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಮ್ಮ ಮಗ ನರಸಿಂಹರಾಜು ಅವರಿಗೆ ರಾಜಕೀಯ ಎಂಟ್ರಿ ದೊರಕಿಸಬೇಕು ಎಂಬ ಇರಾದೆ ಹೊಂದಿದ್ದು, ಈ ಬಗ್ಗೆ ಹೈಕಮಾಂಡ್‌ಗೆ ಮನವಿ ಮಾಡುವ ಸಾಧ್ಯತೆ ಇದೆ. ಕೋಲಾರದ ಬದಲು ಎಡಗೈ ಜನಾಂಗದ ಮತದಾರರ ಸಂಖ್ಯೆ ಹೆಚ್ಚಾಗಿರುವ ಚಿತ್ರದುರ್ಗ ಮೀಸಲು ಕ್ಷೇತ್ರದತ್ತ ಮುನಿಯಪ್ಪ ಚಿತ್ತ ಹರಿದಿರುವುದು ಬಹಿರಂಗ ರಹಸ್ಯ.