
ಆನಂದಪುರ (ಏ.04): ಬಿಜೆಪಿ ತತ್ವ ಸಿದ್ಧಾಂತವನ್ನು ಉಳಿಸಿಕೊಂಡಿಲ್ಲ. ಯಡಿಯೂರಪ್ಪ ಅವರ ಹಡಬೆ ದುಡ್ಡಿನಿಂದ ವಿಜಯೇಂದ್ರ ಅಧ್ಯಕ್ಷನಾಗಿದ್ದಾನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು. ಹಿರೇಹರಕ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಫೈರ್ ಬ್ರ್ಯಾಂಡ್ ಎನಿಸಿಕೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬೋನಿಗೆ ಹಾಕಿದ್ದಾರೆ ಎಂದು ಆರೋಪಿಸಿದರು. ಹಿಂದೂಪರ ಹೋರಾಟ ನಡೆಸಿದಂತಹ ಅನಂತ್ ಕುಮಾರ್ ಹೆಗಡೆ, ಈಶ್ವರಪ್ಪ ಸೇರಿದಂತೆ ಅನೇಕರನ್ನು ಬಿಜೆಪಿ ಹೊರ ಹಾಕಿದೆ.
ಇದರಿಂದಾಗಿ ಬಿಜೆಪಿ ರಾಜ್ಯದಲ್ಲಿ 66ಕ್ಕೆ ಇಳಿದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅವನತಿ ಕಾಣಲಿದೆ ಎಂದು ಹೇಳಿದರು. ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಶಾಸಕರು, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ವಿದ್ಯುತ್, ಇಂಧನ, ಹಾಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ರಾಜ್ಯ ಸರ್ಕಾರ ಮಾತ್ರ ಬೆಲೆ ಏರಿಕೆ ಮಾಡಿಲ್ಲ, ಕೇಂದ್ರ ಸರ್ಕಾರ ಟೋಲ್ ಗೇಟ್, ಗ್ಯಾಸ್, ರಸಗೊಬ್ಬರ ಸೇರಿದಂತೆ ಅನೇಕ ವಸ್ತುಗಳ ಬೆಲೆಯನ್ನು ಏರಿಸಿದೆ. ರಾಜ್ಯದ ಬಿಜೆಪಿ ಅಧ್ಯಕ್ಷ, ಶಾಸಕರು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವಂತೆ ಕೇಂದ್ರ ಸರ್ಕಾರದ ವಿರುದ್ಧವು ಹೋರಾಟ ಮಾಡಬೇಕು ಎಂದರು.
ಭಾರತ ದೇಶ ಜಾತ್ಯತೀತ ದೇಶವಾಗಿದ್ದು, ಎಲ್ಲಾ ಸಮುದಾಯದವರಿಗೂ ಸಮಾನ ಹಕ್ಕು ಇದೆ. ಆದರಿಂದ ಮುಸ್ಲಿಂ ಸಮುದಾಯಕ್ಕೂ ಮೀಸಲಾತಿ ನೀಡಿದ್ದು ಸರಿ ಇದೆ. ಮುಸ್ಲಿಮರನ್ನು ವಿರೋಧಿಸುತ್ತಿರುವ ಬಿಜೆಪಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ರಂಜಾನ್ ಹಬ್ಬದಲ್ಲಿ ದೇಶದ ಬಡ 33 ಲಕ್ಷ ಮುಸ್ಲಿಂರಿಗೆ ಕಿಟ್ಟು ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಬಿಜೆಪಿ ತನ್ನ ತತ್ವ ಸಿದ್ಧಾಂತವನ್ನು ಮರೆತು ಹಿಂದೂ ಹುಲಿಗಳನ್ನು ಬೋನಿಗೆ ಹಾಕುತ್ತಿರುವುದರಿಂದ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂದರು.
ಬಿಜೆಪಿಗರು ರಾಜ್ಯದ ಬೊಕ್ಕಸವನ್ನು ಕೊಳ್ಳೆ ಹೊಡೆದಿದ್ದಾರೆ: ಶಾಸಕ ಗೋಪಾಲಕೃಷ್ಣ ಬೇಳೂರು
ಸಚಿವರುಗಳು ಮೇಲಿನಿಂದ ಇಳಿದು ಬಂದಿಲ್ಲ: ಸಚಿವರ ಕಾರ್ಯವೈಖರಿ ಕುರಿತಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿದ್ದು, ಸಚಿವರು ಶಾಸಕರಿಗೆ ಗೌರವ ಕೊಡಬೇಕು ಎಂಬ ಬಗ್ಗೆ ತಾಕೀತು ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರುಗಳು ಮೇಲಿನಿಂದ ಇಳಿದು ಬಂದಿಲ್ಲ. ಎಲ್ಲರೂ ಶಾಸಕರಿಗೆ ಗೌರವ ಕೊಡಬೇಕು. ಶಾಸಕರಿದ್ದರೆ ಮಾತ್ರ ಅವರು ಸಚಿವರಾಗುವುದು. ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲೂ ಚರ್ಚೆಯಾಗಿದೆ. ಸಚಿವರು ಶಾಸಕರ ಕೆಲಸವನ್ನು ಮಾಡಲೇಬೇಕು. ಅಲ್ಲದೆ, ಮೊದಲ ಬಾರಿ ಶಾಸಕರಾಗಿರುವವರಿಗೆ ಸಚಿವರು ಸಿಗುತ್ತಲೇ ಇಲ್ಲ ಎಂಬ ದೂರಿದೆ. ಸಚಿವರ ಬಗ್ಗೆ ಮುಕ್ತವಾಗಿ ಮಾತನಾಡಲಾಗದೇ ಹೊಸ ಶಾಸಕರು ಸುಮ್ಮನಿದ್ದಾರೆ. ಅದನ್ನೆಲ್ಲ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.