ಲೋಕಸಭೆಯಲ್ಲಿ ಐತಿಹಾಸಿಕ ಮಸೂದೆಗೆ ಅಂಗೀಕಾರ ಲಭಿಸಿದ್ದು, ಕಾಂಗ್ರೆಸ್ ಪಕ್ಷ ವಕ್ಫ್ ಕಾಯ್ದೆ ತಿದ್ದುಪಡಿಯನ್ನು ರಾಜ್ಯ ಮತ್ತು ದೇಶದಲ್ಲಿ ವಿರೋಧಿಸುವುದು ಒಂದು ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಬೆಂಗಳೂರು (ಏ.04): ಲೋಕಸಭೆಯಲ್ಲಿ ಐತಿಹಾಸಿಕ ಮಸೂದೆಗೆ ಅಂಗೀಕಾರ ಲಭಿಸಿದ್ದು, ಕಾಂಗ್ರೆಸ್ ಪಕ್ಷ ವಕ್ಫ್ ಕಾಯ್ದೆ ತಿದ್ದುಪಡಿಯನ್ನು ರಾಜ್ಯ ಮತ್ತು ದೇಶದಲ್ಲಿ ವಿರೋಧಿಸುವುದು ಒಂದು ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಜಮೀನುಗಳನ್ನು ವಕ್ಫ್ ಮಂಡಳಿ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು, ರಾಜಕಾರಣಿಗಳು ಲೂಟಿ ಮಾಡಿದ್ದಾರೆ. ಇಂಥ ಕಾಂಗ್ರೆಸ್ ಮುಖಂಡರು ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಹಲವು ದಶಕಗಳಿಂದ ವಕ್ಫ್ ಕಾಯ್ದೆ ಬಗ್ಗೆ ದೇಶ ಮತ್ತು ರಾಜ್ಯದಲ್ಲಿ ಚರ್ಚೆ ನಡೆಯುತ್ತಿತ್ತು. ರಾಜ್ಯದಲ್ಲಿ ಸಾವಿರ ವರ್ಷಗಳ ಇತಿಹಾಸ ಇರುವ ದೇವಾಲಯಗಳು, ಧಾರ್ಮಿಕ ಸಂಸ್ಥೆಗಳ ಜಮೀನು, ರಾಜ್ಯದ ಲಕ್ಷಾಂತರ ರೈತರ ಜಮೀನನ್ನು ಸಹ ವಕ್ಫ್ ಮಂಡಳಿ ಹೆಸರು ಹೇಳಿಕೊಂಡು ಕಿತ್ತುಕೊಳ್ಳುವ ಕೆಲಸ ನಡೆದಿತ್ತು. ಇದರ ವಿರುದ್ಧ ಬಿಜೆಪಿ, ಕೆಲ ತಿಂಗಳ ಹಿಂದೆ ಪ್ರತಿಭಟನೆ ನಡೆಸಿತ್ತು. ಕೇಂದ್ರದಲ್ಲಿ ಪ್ರಧಾನಿ ಮೋದಿ ಸಂಸತ್‌ನ ಉಪ ಸಮಿತಿ ರಚಿಸಿದ್ದರು. ವಕ್ಫ್ ಮಂಡಳಿ ಹೆಸರಿನಲ್ಲಿ ದೇಶ, ರಾಜ್ಯದ ಜನರಿಗೆ ಆಗುತ್ತಿದ್ದ ಅನ್ಯಾಯ ಸರಿಪಡಿಸಲು ಈ ಉಪ ಸಮಿತಿ ರಚಿಸಲಾಗಿತ್ತು ಎಂದು ಹೇಳಿದರು. ವಕ್ಫ್ ತಿದ್ದುಪಡಿ ಮಸೂದೆಗೆ ಬುಧವಾರ ಲೋಕಸಭೆ ಅಂಗೀಕರಿಸಿದೆ. ಇದೊಂದು ಐತಿಹಾಸಿಕ ಕ್ಷಣ. ಪ್ರತಿಯೊಬ್ಬರೂ ಸಂಭ್ರಮ ಆಚರಿಸುವ ಸುಸಂದರ್ಭ ಇದು. ಈ ಮಸೂದೆ ಅಂಗೀಕಾರವನ್ನು ಹಿಂದೂಗಳಷ್ಟೇ ಅಲ್ಲ, ಮುಸಲ್ಮಾನರೂ ಸ್ವಾಗತಿಸಿದ್ದಾರೆ ಎಂದು ತಿಳಿಸಿದರು.
ವೈಸರಾಯ್‌ನಂತೆ ಸಿಎಂ ವರ್ತನೆ: ಕರುಣೆ, ಕನಿಕರವೇ ಇಲ್ಲದೇ ತೆರಿಗೆ ವಿಧಿಸುತ್ತ, ಬೆಲೆ ಏರಿಕೆ ಮಾಡುತ್ತ ಸಿಎಂ ಸಿದ್ದರಾಮಯ್ಯ ಈಸ್ಟ್ ಇಂಡಿಯಾ ಕಂಪನಿಯ ವೈಸರಾಯ್‌ನಂತೆ ವರ್ತಿಸುತ್ತಿದ್ದಾರೆ. ಉಪ್ಪಿನಿಂದ ಗಾಳಿವರೆಗೆ ಎಲ್ಲದರ ಮೇಲೂ ಮನಸ್ಸಿಗೆ ಬಂದಂತೆ ತೆರಿಗೆ ಹೇರುತ್ತಿದ್ದಾರೆ. ಜನರ ಬದುಕಿಗೆ ಬರೆ ಎಳೆಯುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಆರೋಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಚಿತ ಗ್ಯಾರಂಟಿ ಭರವಸೆಗಳ ಮೇಲೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೆರಿಗೆ ಭಾರ ಹೊರಿಸುವ ಮೂಲಕ ಈಸ್ಟ್ ಇಂಡಿಯಾ ಕಂಪನಿಯ ವೈಸರಾಯ್‌ನಂತೆ ಆಡಳಿತ ನಡೆಸುತ್ತಿದೆ ಎಂದು ಟೀಕಿಸಿದರು. ಎಐಸಿಸಿ ನಾಯಕಿ ಸೋನಿಯಾ ಗಾಂಧಿಯವರದ್ದು ಬ್ರಿಟಿಷ್ ರಾಜಮನೆತನದಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅದೇ ರಾಜ ಪರಿವಾರದ ವೈಸರಾಯ್‌ನಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶಕ್ಕೂ, ರಾಜ್ಯಕ್ಕೂ ಸಂಬಂಧವೇ ಇಲ್ಲವೆಂಬಂತೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವರ್ತನೆ ಇದೆ ಎಂದರು.
ಕೆಪಿಸಿಸಿ ಅಧ್ಯಕ್ಷತೆಗೆ ಸತೀಶ್, ಖಂಡ್ರೆ ಹೆಸರು ಶಿಫಾರಸು ಮಾಡಿದ ಸಿಎಂ ಸಿದ್ದರಾಮಯ್ಯ?
ಅಹೋರಾತ್ರಿ ಧರಣಿ: ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಏ.2ರಂದು ಬೆಳಗ್ಗೆ 11ರಿಂದ ಏ.3ರ ಬೆಳಗ್ಗೆ 11 ಗಂಟೆವರೆಗೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಹೋರಾಟದಲ್ಲಿ ಪಕ್ಷದ ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಪಕ್ಷದ ಹಿರಿಯ-ಕಿರಿಯ ಮುಖಂಡರು ಭಾಗವಹಿಸುವರು ಎಂದು ತಿಳಿಸಿದರು. ಹೋರಾಟದ ಮುಂದುವರಿದ ಭಾಗವಾಗಿ ಏ.5ರಿಂದ 3 ದಿನಗಳ ಕಾಲ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಬಿಜೆಪಿ ಜಿಲ್ಲಾ ಘಟಕ ನಡೆಸಲಿದೆ. ಜಿಲ್ಲಾ, ಮಂಡಲ ಮಟ್ಟದಲ್ಲೂ ಹೋರಾಟ ನಡೆಯಲಿದೆ. ಬೆಂಗಳೂರಿನಲ್ಲಿ ಏ.2 ಮತ್ತು 3ರಂದು ನಡೆಯುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ದಾವಣಗೆರೆ ಜಿಲ್ಲೆಯಿಂದ ಸುಮಾರು 50-60 ಮುಖಂಡರು, ಪದಾಧಿಕಾರಿಗಳು ಸಹ ಭಾಗವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.