ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ತಿಕ್ಕಾಟ ಮತ್ತಷ್ಟು ತಾರಕಕ್ಕೇರಿದ್ದು, ‘ಮಧು ಬಂಗಾರಪ್ಪಗೆ ಅಧಿಕಾರದ ಮದ ನೆತ್ತಿಗೇರಿದೆ. ಅಹಂಕಾರದಿಂದ ಸಚಿವರ ಕೆಲಸ ಬಿಟ್ಟು ನಮ್ಮನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಬೇಳೂರು ಗೋಪಾಲಕೃಷ್ಣ ಟೀಕಾಪ್ರಹಾರ ನಡೆಸಿದ್ದಾರೆ.
ಬೆಂಗಳೂರು (ಡಿ.03): ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ನಡುವಿನ ತಿಕ್ಕಾಟ ಮತ್ತಷ್ಟು ತಾರಕಕ್ಕೇರಿದ್ದು, ‘ಮಧು ಬಂಗಾರಪ್ಪಗೆ ಅಧಿಕಾರದ ಮದ ನೆತ್ತಿಗೇರಿದೆ. ಅಹಂಕಾರದಿಂದ ಸಚಿವರ ಕೆಲಸ ಬಿಟ್ಟು ನಮ್ಮನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಬೇಳೂರು ಗೋಪಾಲಕೃಷ್ಣ ಟೀಕಾಪ್ರಹಾರ ನಡೆಸಿದ್ದಾರೆ. ಕಳೆದ ತಿಂಗಳಷ್ಟೇ ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಬಹಿರಂಗವಾಗಿ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ಈ ಬಗೆಗಿನ ದೂರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರವರೆಗೂ ಹೋಗಿತ್ತು. ಇದೀಗ ಮತ್ತೆ ಇಬ್ಬರ ತಿಕ್ಕಾಟ ಆರಂಭವಾಗಿದೆ.
ಶನಿವಾರ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿದ ಬೇಳೂರು, ಬಳಿಕ ಮಧು ಬಂಗಾರಪ್ಪ ವಿರುದ್ಧ ಹರಿಹಾಯ್ದರು. ‘ಮಧು ಬಂಗಾರಪ್ಪ ನಮಗೇನು ಟಿಕೆಟ್ ಕೊಟ್ಟಿಲ್ಲ. ನಮ್ಮ ಗೆಲುವಿನಲ್ಲಿ ಅವರ ಪಾತ್ರ ಏನೂ ಇಲ್ಲ. ಪಕ್ಷ ಹಾಗೂ ನನ್ನ ವೈಯಕ್ತಿಕ ಇಮೇಜ್‌ನಿಂದ ನಾನು ಗೆಲುವು ಸಾಧಿಸಿದ್ದೇನೆ. ಮಧು ಅವರಿಗೆ ಅವರ ತಂದೆಯ ನೆರಳು ಇರಬಹುದು. ನಾನೂ ಬಂಗಾರಪ್ಪ ಅವರ ಶಿಷ್ಯನಾಗಿಯೇ ಬೆಳೆದು ಬಂದಿದ್ದೇನೆ. ಆದರೆ ಇತ್ತೀಚೆಗೆ ಮಧು ಅವರಿಗೆ ಅಹಂಕಾರ ಹೆಚ್ಚಾಗಿದೆ’ ಎಂದು ಕಿಡಿ ಕಾರಿದರು.
ಗಾಣಿಗ ಜಾತಿಯ ಪ್ರಧಾನಿ ಮೋದಿಗೆ ಗಾಣಿಗರ ಸಮಸ್ಯೆ ಗೊತ್ತಿಲ್ಲವೇ?: ಸಿದ್ದರಾಮಯ್ಯ
‘ಮಧು ಸಚಿವ ಸ್ಥಾನ ನಿಭಾಯಿಸುವುದನ್ನು ಬಿಟ್ಟು ನನ್ನನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಈ ಬೇಳೂರು ಯಾರಿಗೂ ಅಂಜುವ ವ್ಯಕ್ತಿಯಲ್ಲ. ನಾನು ಇಲ್ಲದ ಸಮಯಗಳಲ್ಲಿ ಸಭೆಗಳನ್ನು ಮಾಡುತ್ತಾರೆಂದರೆ ಏನು ಹೇಳಬೇಕು? ಬೇರೆ ಸಚಿವರು ಹೀಗೆ ಮಾಡುತ್ತಾರಾ? ಬೇರೆ ಸಚಿವರನ್ನು ನೋಡಿ ಇವರು ಕಲಿಯಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಮಧು ವಿರುದ್ಧ ಹಕ್ಕುಚ್ಯುತಿ ಮಂಡಿಸುವೆ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ನಡುವೆ ನಡೆಯುತ್ತಿರುವ ಅಸಮಾಧಾನಕ್ಕೀಗ ತುಪ್ಪ ಸುರಿವ ಘಟನೆ ನಡೆದಿದೆ. ಸಾಗರದಲ್ಲಿ ಸ್ಥಳೀಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಅನುಪಸ್ಥಿತಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ಗೋಪಾಲಕೃಷ್ಣ ಅವರು ಸಚಿವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಸಾಗರದಲ್ಲಿ ಸಚಿವ ಮಧು ಬಂಗಾರಪ್ಪ ಸಭೆ ನಡೆಸತ್ತಿರುವ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಬೆಂಗಳೂರಿನಲ್ಲಿ ಇದ್ದಾರೆ. ಸಚಿವ ಮಧು ಬಂಗಾರಪ್ಪ ಅವರು ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಸಭೆ ನಡೆಸಿದ್ದು, ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಭಾವನಾತ್ಮಕ ವಿಷಯ ಮುಂದಿಟ್ಟು ಕಾಂಗ್ರೆಸ್ ಅಧಿಕಾರ ಹಿಡಿಯಲ್ಲ: ಸಲೀಂ ಅಹ್ಮದ್
ಸಚಿವರು ಸಭೆ ನಡೆಸುವ ಕುರಿತು ಮಾಹಿತಿ ಪಡೆದ ಬೆಂಗಳೂರಿನಲ್ಲಿರುವ ಬೇಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭೆ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ. ಕೇವಲ ಟಿಪಿ ಮಾತ್ರ ಬಂದಿತ್ತು. ಸ್ಥಳೀಯ ಶಾಸಕರಿಗೆ ಮಾಹಿತಿ ನೀಡದೇ ಸ್ಥಳೀಯ ಸಮಸ್ಯೆ ಕುರಿತು ಅಧಿಕಾರಿಗಳ ಸಭೆ ನಡೆಸುವುದು ಸರಿಯಲ್ಲ. ನನ್ನ ಕ್ಷೇತ್ರದ ಸಭೆ ನಡೆಸುವ ಮುನ್ನ ನನ್ನ ಜೊತೆ ಚರ್ಚೆ ನಡೆಸಬೇಕಿತ್ತು. ಇದರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಸಚಿವ ಮಧು ವಿರುದ್ಧ ಹಲವಾರು ಬಾರಿ ಅಸಮಾಧಾನ ಹೊರಹಾಕಿರುವ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಈ ಭಾಗದಲ್ಲಿ ಸಚಿವರು ಪ್ರವಾಸ ಮಾಡುವಾಗ ತಮ್ಮ ಗಮನಕ್ಕೆ ತರದೆ ಬೇರೆ ಕ್ಷೇತ್ರದ ಶಾಸಕರನ್ನು ಕರೆದೊಯ್ಯುತ್ತಿದ್ದಾರೆ ಎಂದು ದೂರಿದ್ದರು.