ಭಾವನಾತ್ಮಕ ವಿಷಯ ಮುಂದಿಟ್ಟು ಕಾಂಗ್ರೆಸ್‌ ಅಧಿಕಾರ ಹಿಡಿಯಲ್ಲ: ಸಲೀಂ ಅಹ್ಮದ್

By Kannadaprabha News  |  First Published Dec 3, 2023, 2:29 PM IST

ಬಿಜೆಪಿಯಂತೆ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಅಜೆಂಡಾ ಕಾಂಗ್ರೆಸ್‌ನಲ್ಲಿಲ್ಲ, ಬಡವರ ಪರ ಅಭಿವೃದ್ಧಿ ಕೆಲಸಗಳಿಂದ ಕಾಂಗ್ರೆಸ್ ಗುರ್ತಿಸಿಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.


ಬ್ಯಾಡಗಿ (ಡಿ.03): ಬಿಜೆಪಿಯಂತೆ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಅಜೆಂಡಾ ಕಾಂಗ್ರೆಸ್‌ನಲ್ಲಿಲ್ಲ, ಬಡವರ ಪರ ಅಭಿವೃದ್ಧಿ ಕೆಲಸಗಳಿಂದ ಕಾಂಗ್ರೆಸ್ ಗುರ್ತಿಸಿಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು. ತಾಲೂಕಿನ ಹಳೇಶಿಡೇನೂರ ಗ್ರಾಮದಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲೆಯಲ್ಲಿನ ಕಾಂಗ್ರೆಸ್ ಶಾಸಕರಿಗೆ ಏರ್ಪಡಿಸಿದ್ದ ಸನ್ಮಾನ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ಹಲವು ವರ್ಷಗಳಲ್ಲಿ ತಳ ಸಮುದಾಯದ ಜನರಲ್ಲಿ ಇಲ್ಲಸಲ್ಲದ ವಿಚಾರಗಳನ್ನು ತುಂಬುವ ಮೂಲಕ ಮತಗಳನ್ನಾಗಿ ಪರಿವರ್ತಿಸಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ.

ಬಿಜೆಪಿಗೆ ಬಂದಂತಹ ದೌರ್ಭಾಗ್ಯ ನಮಗಿಲ್ಲ. ನಾವು ದೇಶಕ್ಕೆ ಒಳ್ಳೆಯದನ್ನೇ ಬಯಸುವ ಅಜೆಂಡಾ ಹೊಂದಿದ್ದೇವೆ ಎಂದರು. ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿ: ಕಳೆದ ಬಾರಿ ಆಪರೇಶನ್ ಕಮಲ ನಡೆಸುವ ಮೂಲಕ ಅಸಂವಿಧಾನಿಕವಾಗಿ ಬಿಜೆಪಿ ಅಧಿಕಾರಕ್ಕೆ ಬಂತು. ಕೋವಿಡ್‌ನಲ್ಲಿ ₹2 ಸಾವಿರ ಕೋಟಿ ಹಗರಣ ನಡಸಿದೆ, 40% ಕಮೀಶನ್ ಸರ್ಕಾರ ಎಂದು ದೇಶದಲ್ಲಿ ಪರಿಚಿತವಾಯಿತು. ನಾವು ಅಧಿಕಾರಕ್ಕೆ ಬಂದ ಬಳಿಕ ಬಡವರಿಗೆ ಅಕ್ಕಿ ನೀಡುವಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಜನರ ಆದೇಶದಂತೆ ಅಭಿವೃದ್ಧಿ ಕೆಲಸಗಳನ್ನು ಮಾಡುವುದೇ ನಮ್ಮ ಗುರಿಯಾಗಿದೆ ಎಂದರು.

Tap to resize

Latest Videos

undefined

ಜಗದೀಶ್‌ ಶೆಟ್ಟರ್ ವಾಪಸಾತಿ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ: ರೇಣುಕಾಚಾರ್ಯ

‘ಮನ್ ಕಿ ಬಾತ್ ಬೇಡ ಕಾಮ್ ಕಿ ಬಾತ್’: ಶಾಸಕ ಯು.ಬಿ. ಬಣಕಾರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್‌ನಿಂದ ದೇಶದ ಜನರ ಹೊಟ್ಟೆ ತುಂಬುವುದಿಲ್ಲ. ಅದರ ಬದಲಾಗಿ ಕಾಮ್ ಕಿ ಬಾತ್ ಆಗಬೇಕಾಗಿದೆ. 2 ಕೋಟಿ ಉದ್ಯೋಗ ಸೃಷ್ಟಿ ಇಂದಿಗೂ ಆಗಿಲ್ಲ. ಗೃಹೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಕಾಂಗ್ರೆಸ್ ಸರ್ಕಾರದಂತೆ ಬಡವರ ಪರವಾದ ಒಂದೇ ಒಂದು ಕಾರ್ಯಕ್ರಮವನ್ನು ಬಿಜೆಪಿ ನೀಡಿಲ್ಲ ಎಂದು ಆರೋಪಿಸಿದರು.

52,500 ಕೋಟಿ ಸರ್ಕಾರಕ್ಕೆ ಹೊರೆ: ವಿಧಾನಸಭೆ ಉಪಸಭಾಪತಿ ಹಾಗೂ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಉಚಿತ ಭಾಗ್ಯಗಳಿಂದ ₹52 ಸಾವಿರ ಕೋಟಿಗೂ ಅಧಿಕ ಹೊರೆಯಾಗಿದೆ. ಹೀಗಿದ್ದರೂ ಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. 2024 ಜನವರಿ ಬಳಿಕ ರಾಜ್ಯದೆಲ್ಲೆಡೆ ಅಭಿವೃದ್ಧಿ ಕೆಲಸ ಆರಂಭವಾಗಲಿವೆ. ಜಿಲ್ಲೆಯ ರೈತರಿಗೆ ಮಧ್ಯಂತರ ಬೆಳೆವಿಮೆ ಪರಿಹಾರ ₹126 ಕೋಟಿ ಹಣ ಬಿಡುಗಡೆಯಾಗಿದೆ ಎಂದರು.

ಕೊಡಲೂ ಸಾಧ್ಯವಿಲ್ಲ ಕಸಿದುಕೊಳ್ಳಲೂ ಸಾಧ್ಯವಿಲ್ಲ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಬಡಜನರಿಗೆ ನೀಡಿದಂತಹ 5 ಗ್ಯಾರಂಟಿಗಳನ್ನು ದೇಶದ ಯಾವುದೇ ರಾಜಕೀಯ ಪಕ್ಷ ಕೊಡಲೂ ಸಾಧ್ಯವಿಲ್ಲ. ನಾವು ಕೊಟ್ಟಿದ್ದನ್ನು ಕಸಿದುಕೊಳ್ಳಲೂ ಸಾಧ್ಯವಿಲ್ಲ. ಒಂದು ವೇಳೆ ಕಸಿದುಕೊಳ್ಳುವಂತಹ ವಾತಾವರಣ ರಾಜ್ಯದಲ್ಲಿ ಸೃಷ್ಟಿಯಾದರೆ ಕಾಂಗ್ರೆಸ್ ನಿಮ್ಮ ಪರವಾಗಿ ಹೋರಾಟ ನಡೆಸಲಿದೆ ಎಂದರು.

ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನ: ರೇಣುಕಾಚಾರ್ಯ ಭವಿಷ್ಯ

ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಎಸ್.ಆರ್. ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಬ್ಯಾಡಗಿ ಬ್ಲಾಕ್ ಅಧ್ಯಕ್ಷ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ಪಾಟೀಲ, ಮುಖಂಡರಾದ ಪ್ರಕಾಶ ಬನ್ನಿಹಟ್ಟಿ, ನಾಗರಾಜ ಆನ್ವೇರಿ, ಶಿವಪುತ್ರಪ್ಪ ಅಗಡಿ, ಡಾ. ಎ.ಎಂ. ಸೌದಾಗರ, ಪರಮೇಶಪ್ಪ ತೆವರಿ, ರಾಜಣ್ಣ ಕಳ್ಯಾಳ, ಖಾದರಸಾಬ್ ದೊಡ್ಮನಿ, ರಾಜು ಶಿಡೇನೂರ, ಮಂಜನಗೌಡ ಪಾಟೀಲ, ವೀರನಗೌಡ ಪೊಲೀಸಗೌಡ್ರ, ಶಫಿ ನಾಶೀಪುಡಿ, ರವಿ ಪೂಜಾರ, ಮುನ್ನಾ ಎರೇಶಿಮಿ, ಬಸವರಾಜ ಸವಣೂರು, ಬೀರಪ್ಪ ಬಣಕಾರ, ಶೌಕತ್‌ಲಿ ಬ್ಯಾಡಗಿ, ಪರಮೇಶಪ್ಪ ಕೊಡಿಗದ್ದಿ ಇನ್ನಿತರರಿದ್ದರು. ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ್ ಸುತ್ತಕೋಟಿ ಸ್ವಾಗತಿಸಿದರು, ಡಿ.ಎಚ್. ಬುಡ್ಡನಗೌಡ್ರ ವಂದಿಸಿದರು.

click me!