ಲೋಕಸಭೆ ಚುನಾವಣೆ ಮುನ್ನ, ಇಲ್ಲವೇ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುವುದು ನಿಶ್ಚಿತ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರ (ಆ.15): ಲೋಕಸಭೆ ಚುನಾವಣೆ ಮುನ್ನ, ಇಲ್ಲವೇ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುವುದು ನಿಶ್ಚಿತ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಐದು ವರ್ಷಗಳವರೆಗೆ ಅಧಿಕಾರದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ.
ಉಚಿತ ಯೋಜನೆಗಳ ನೆಪದಲ್ಲಿ ಅಭಿವೃದ್ಧಿ ಕುಂಠಿತಗೊಂಡಿವೆ. ಕಾಂಗ್ರೆಸ್ ಸರ್ಕಾರದ ವರ್ಗಾವಣೆ ದಂಧೆ, ಐದು ಗ್ಯಾರಂಟಿಗಳ ಮೋಸತನ, ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಶಾಸಕರ ಅಸಮಾಧಾನದಿಂದಾಗಿ ಲೋಕಸಭೆ ಚುನಾವಣೆ ಒಳಗಾಗಿ ಇಲ್ಲವೆ ಲೋಕಸಭೆ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು. ಕಾಂಗ್ರೆಸ್ಸಿನ 136 ಶಾಸಕರ ಪೈಕಿ 90ಕ್ಕೂ ಅಧಿಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಈ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಮುಗಿಸುವುದಿಲ್ಲ ಎಂದು ಹೇಳಿದರು.
undefined
ಈ ಬಾರಿಯೂ ಅದ್ಧೂರಿ ದಸರಾ ಉತ್ಸವ ಆಚರಣೆ: ಸಚಿವ ಮಹದೇವಪ್ಪ
ಸಿದ್ದರಾಮಯ್ಯ ಅಸಹಾಯಕ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಬೆಂಗಳೂರಿನ ಎಲ್ಲ ಶಾಸಕರ ಬಾಯಿಯನ್ನು ಬಂದ್ ಮಾಡಿ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ. ಸರ್ಕಾರದಲ್ಲಿನ ಭ್ರಷ್ಟಾಚಾರ ಕುರಿತು ಅವರದೇ ಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಆರೋಪ ಮಾಡಿದ್ದಾರೆ ಎಂದರು. ವರ್ಗಾವಣೆ ದಂಧೆ ಬಗ್ಗೆ ಸಮಗ್ರ ತನಿಖೆಯಾಗಬೇಕು. ಗುತ್ತಿಗೆದಾರರ .3500 ಕೋಟಿ ಬಿಲ್ ಬಾಕಿ ಮೊತ್ತವನ್ನು ಪಾವತಿಸಬೇಕು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಾರಿಗೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ನೌಕರರಿಗೆ ವೇತನ ನೀಡಲು ಈ ಸರ್ಕಾರಕ್ಕೆ ಆಗಿಲ್ಲ. ಸರ್ಕಾರ ದಿವಾಳಿಯಾಗಿದೆ. ಇಂಥ ಸಮಯದಲ್ಲಿ .500 ಕೋಟಿ ವೆಚ್ಚದಲ್ಲಿ ರಾಜೀವ ಗಾಂಧಿ ಮೂರ್ತಿ ಸ್ಥಾಪನೆಗೆ ಮುಂದಾಗಿರುವುದು ಸರಿಯಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಮುಖಂಡ ಕುಮಾರ ಬಂಗಾರಪ್ಪ ಅವರ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕುಮಾರ ಬಂಗಾರಪ್ಪ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದಿಲ್ಲ ಎಂಬ ವಿಶ್ವಾಸವಿದೆ. ಇತ್ತೀಚೆಗೆ ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಸಚಿವ ಲಕ್ಷ್ಮಣ ಸವದಿ ಅವರ ಬಗ್ಗೆ ಪರೋಕ್ಷವಾಗಿ ಯತ್ನಾಳ ಕಿಡಿಕಾರಿದರು.
ಪಂಚ ಗ್ಯಾರಂಟಿ ಸೋಲಿಗೆ ಕಾರಣ: ಜಗದೀಶ ಶೆಟ್ಟರ್ ಮುಂದಿನ ಸಿಎಂ ಎಂದು ಘೋಷಣೆ ಮಾಡಿದ ವೇಳೆ ಬಿಜೆಪಿಗೆ 40 ಸ್ಥಾನಗಳು ಬರಲಿಲ್ಲ. ನಾವು ಬಿಜೆಪಿ ತೊರೆದಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂದು ಹೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ಜಗದೀಶ ಶೆಟ್ಟರ್ ವಿರುದ್ಧ ಯತ್ನಾಳ ಕಿಡಿಕಾರಿದರು. ಬಿಜೆಪಿಗೆ ನಮ್ಮಲ್ಲಿನ ಅನೇಕ ತಪ್ಪುಗಳು ಹಾಗೂ ಕಾಂಗ್ರೆಸ್ಸಿನ ಪಂಚ ಗ್ಯಾರಂಟಿಗಳು ನಮ್ಮ ಸೋಲಿಗೆ ಕಾರಣವಾದವು ಎಂದು ಹೇಳಿದರು.
ಸೇವಾ ಮನೋಭಾವದ ವೈದ್ಯರು ಸಂಖ್ಯೆ ಹೆಚ್ಚಾಗಲಿ: ಸಚಿವ ಪರಮೇಶ್ವರ್
ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ವಿಜಯಪುರದಲ್ಲಿ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರೂ ಅಂತಹ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಲು ಪ್ರಾಮಾಣಿಕವಾಗಿ ದುಡಿಯುತ್ತೇವೆ.
- ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ನಗರ ಶಾಸಕ