
ರಾಮನಗರ (ಡಿ.27): ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಅವರಿಗೆ ವಯಸ್ಸಾಗಿರುವ ಕಾರಣ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುತ್ತಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹರಿಹಾಯ್ದರು. ನಗರಸಭೆ ವ್ಯಾಪ್ತಿಯ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಪ್ಪ ಅವರಿಗೆ ವಯಸ್ಸಾಗಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳು ಕಣ್ಣಿಗೆ ಕಾಣಿಸುತ್ತಿಲ್ಲ. ಈಗಲಾದರು ಅವರು ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು. ಈಗ ಕೋಟ್ಯಂತರ ರುಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿದ್ದೇವೆ. ಜನರ ಸಮಸ್ಯೆ ಬಗೆಹರಿಸುತ್ತಿದ್ದೇವೆ.
ಇದನ್ನು ಅಭಿವೃದ್ಧಿ ಅನ್ನದೇ ಮತ್ತೇನು ಹೇಳುತ್ತಾರೆ. ವಿಪಕ್ಷ ನಾಯಕರು ಆರೋಪ ಮಾಡದೆ ನಾವು ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಮ್ಮ ಜತೆ ಬಂದು ನೋಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನೇ ಮುಂದಿನ ತಿಂಗಳು ಬಸ್ ವ್ಯವಸ್ಥೆ ಮಾಡುತ್ತೇನೆ. ವಿಕ್ಷಪದವರು ನಮ್ಮ ಜತೆಗೆ ಬರಲಿ, ನಾವು ಏನೇನು ಅಭಿವೃದ್ಧಿ ಕೆಲಸ ಮಾಡಿದ್ದೇವೆ ಎಂಬುದನ್ನು ತೋರಿಸುತ್ತೇವೆ. ಸಾಧ್ಯವಾದರೆ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಲಿ. ಲಿಂಗಪ್ಪರವರು ಹಿರಿಯರು ನಮಗೆ ಮಾರ್ಗದರ್ಶನ ಮಾಡಲಿ, ಅದನ್ನು ಸ್ವೀಕರಿಸುತ್ತೇವೆ. ನಾವು ಏನೇ ಅಭಿವೃದ್ಧಿ ಕಾರ್ಯ ಮಾಡಿದರು.
Ramanagara: ಶೇ.68ರಷ್ಟು ಇ-ಖಾತೆ ಪೂರ್ಣ: ಶಾಸಕಿ ಅನಿತಾ ಕುಮಾರಸ್ವಾಮಿ
ವಿಪಕ್ಷದ ಮುಖಂಡರು ಬೇರೆ ರೀತಿಯಲ್ಲಿ ಮಾತನಾಡುತ್ತಾರೆ. ವಿರೋಧ ಪಕ್ಷಗಳು ಕಾಮಗಾರಿಯಲ್ಲಿ ರಾಜಕೀಯ ಮಾಡದೆ ನಮಗೂ ಸಹಕಾರ ನೀಡಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮೊಂದಿಗೆ ಕೈ ಜೋಡಿಸಲಿ ಎಂದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ 450 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿದ್ದು, ಎಲ್ಲರಿಗೂ ಅನುಕೂಲವಾಗಲಿದೆ. ನಿವೇಶನ ಹಂಚಿಕೆ ವಿಷಯವಾಗಿ ಈ ಹಿಂದೆಯೇ ಗುದ್ದಲಿ ಪೂಜೆ ಮಾಡಲಾಗಿತ್ತು. ಆದರೆ, ಅಲ್ಲಿಯು ರಾಜಕೀಯ ಮಾಡಿ ನಿಲ್ಲಿಸಿದರು ಎಂದು ಕಿಡಿಕಾರಿದ ಶಾಸಕರು, ಕುಟುಂಬ ರಾಜಕಾರಣ ನಮ್ಮ ಪಕ್ಷದಲ್ಲಿ ಮಾತ್ರವಲ್ಲ.
ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಇದೆ. ಜನರು ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ತಿಳಿದಿದ್ದಾರೆ. ಅವರಿಗೆ ಬೆಂಬಲ ನೀಡಿ ಆಶೀರ್ವಾದ ಮಾಡುತ್ತಾರೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು. ನಗರಸಭೆ ವ್ಯಾಪ್ತಿಯಲ್ಲಿನ ವಾರ್ಡುಗಳಲ್ಲಿ 9.87 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ, ಪಾಕರ್ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಗುತ್ತಿಗೆದಾರರಿಗೆ ಕಾಮಗಾರಿಯಲ್ಲಿ ಗುಣಮಟ್ಟಕಾಪಾಡಿಕೊಳ್ಳಬೇಕೆಂದು ಸೂಚಿಸಿದ್ದೇನೆ ಎಂದು ತಿಳಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಇತರರಿದ್ದರು.
ಅಭಿವೃದ್ಧಿಯೇ ಜೆಡಿಎಸ್ ಧ್ಯೇಯ: ಗರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ 10.40 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಸೋಮವಾರ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ನಗರದ 23ನೇ ವಾರ್ಡಿನ ಟಿಪ್ಪು ಶಾಲೆ ಬಳಿಯ ಸೀರಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ, 22ನೇ ವಾರ್ಡಿನ ಕೊತ್ತೀಪುರ ಮುಖ್ಯರಸ್ತೆ ಡಾಂಬರೀಕರಣ , 11ನೇ ವಾರ್ಡಿನಲ್ಲಿ ಜೋಡಿ ರಸ್ತೆ ಡಾಂಬರೀಕರಣ, 12ನೇ ವಾರ್ಡಿನಲ್ಲಿ ಡಾಂಬರೀಕರಣ. 6ನೇ ವಾರ್ಡಿನ ಚಾಮುಂಡೇಶ್ವರಿ ದೇವಾಸ್ಥಾನದ ಮುಂದೆ ಚರಂಡಿ ಕಾಮಗಾರಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.
Ramanagara: ಸುಗ್ಗನಹಳ್ಳಿ ಸೇತುವೆ, ಭಕ್ಷಿ ಕೆರೆ ವೀಕ್ಷಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ
ಆನಂತರ ಆಗ್ರಹಾರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ರಸ್ತೆ ಡಾಂಬರೀಕರಣ, ಆದಿಶಕ್ತಿಪುರದಲ್ಲಿ ಚರಂಡಿ ಕಾಮಗಾರಿ, ರೋಟರಿ ಕ್ಲಬ್‌ನಿಂದ ಆಂಜನೇಯಸ್ವಾಮಿ ದೇವಾಲಯದವರೆಗೆ ರಸ್ತೆ ನಿರ್ಮಾಣ, ಮಲ್ಲೇಶ್ವರ ಬಡಾವಣೆಯ ಉದ್ಯಾವನ ಬಳಿ ಹಿರಿಯ ನಾಗರಿಕರ ತಂಗುದಾಣ, ರಂಗರಾಯರದೊಡ್ಡಿಯ ಕೆರೆ ರಸ್ತೆಯಲ್ಲಿ ಸೇತುವೆ ನಿರ್ಮಾಣ ಹಾಗೂ ರಂಗರಾಯರದೊಡ್ಡಿಯ ಗ್ರಾಮದವರೆಗೆ ಡಾಂಬರೀಕರಣ ಕಾಮಗಾರಿಗೆ ಅನಿತಾಕುಮಾರಸ್ವಾಮಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಮಹಿಳೆಯಾಗಿ ಸಾಕಷ್ಟುದುಡಿಯುತ್ತಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದ ಜನ ಗುರುತಿಸುತ್ತಾರೆ ಎಂಬ ನಂಬಿಕೆ ಇದೆ. ಜೆಡಿಎಸ್ ಪಕ್ಷದ್ದು ಅಭಿವೃದ್ಧಿಯೇ ಧ್ಯೇಯ ಮಂತ್ರವಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.