ಬಿಜೆಪಿ, ಜೆಡಿಎಸ್‌ ನಾಯಕರ ನಿದ್ದೆ ಕೆಡಿಸಿದ ಕಾಂಗ್ರೆಸ್‌ ಗ್ಯಾರಂಟಿ: ಸಚಿವ ಎಚ್‌.ಸಿ.ಮಹದೇವಪ್ಪ

By Kannadaprabha NewsFirst Published Jun 1, 2023, 1:00 AM IST
Highlights

ಗ್ಯಾರಂಟಿ ಯೋಜನೆಗಳ ಬಗ್ಗೆ ಚಿಂತಿತರಾಗಿರುವ ಬಿಜೆಪಿ ಮತ್ತು ಜೆಡಿಎಸ್‌ ನಾಯಕರಿಗೆ ನಿದ್ರೆ ಬರುತ್ತಿಲ್ಲ. ಚುನಾವಣೆ ಭರವಸೆಗಳನ್ನು ಈಗಲೇ ಈಡೇರಿಸಬೇಕೆಂದು ಆಗ್ರಹಿಸುತ್ತಿರುವ ಬಿಜೆಪಿ ನಾಯಕರಿಗೆ ರಾಜಕೀಯ ಪ್ರಜ್ಞೆ ಇಲ್ಲವೇ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಪ್ರಶ್ನಿಸಿದರು. 

ಮೈಸೂರು (ಜೂ.01): ಗ್ಯಾರಂಟಿ ಯೋಜನೆಗಳ ಬಗ್ಗೆ ಚಿಂತಿತರಾಗಿರುವ ಬಿಜೆಪಿ ಮತ್ತು ಜೆಡಿಎಸ್‌ ನಾಯಕರಿಗೆ ನಿದ್ರೆ ಬರುತ್ತಿಲ್ಲ. ಚುನಾವಣೆ ಭರವಸೆಗಳನ್ನು ಈಗಲೇ ಈಡೇರಿಸಬೇಕೆಂದು ಆಗ್ರಹಿಸುತ್ತಿರುವ ಬಿಜೆಪಿ ನಾಯಕರಿಗೆ ರಾಜಕೀಯ ಪ್ರಜ್ಞೆ ಇಲ್ಲವೇ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಪ್ರಶ್ನಿಸಿದರು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮೈಸೂರಿನ ಕಾಂಗ್ರೆಸ್‌ ಭವನಕ್ಕೆ ಭೇಟಿ ನೀಡಿದ ಅವರು ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಸಾಂಪ್ರದಾಯಿಕ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ, ದುರಾಡಳಿತ, ಆಡಳಿತ ವಿರೋಧಿ ಧೋರಣೆಯಿಂದ ಜನರು ಬಿಜೆಪಿ ಮುಖಕ್ಕೆ ಮಸಿ ಬಳಿದಿದ್ದಾರೆ. 

ಆದರೆ, ನಮ್ಮ ಘೋಷಣೆ ಯಾವಾಗ ಜಾರಿ ಮಾಡುತ್ತೀರಿ ಎಂದು ಆಗ್ರಹಿಸುತ್ತಿದ್ದಾರೆ. ಭರವಸೆಯನ್ನು ಅನುಷ್ಠಾನಕ್ಕೆ ತರದವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಸೋತು ಸುಣ್ಣವಾಗಿ ಕಾಂಗ್ರೆಸ್‌ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಚುನಾವಣಾ ವರ್ಷದಲ್ಲಿ ಮಂಡಿಸಿದ ಬಜೆಟ್‌ ಅವಧಿ 3 ತಿಂಗಳು ಮಾತ್ರ. ಬಜೆಟ್‌ ಮಂಡಿಸದೇ ಕಾರ್ಯಕ್ರಮಗಳಿಗೆ ಹಣ ಕೊಡಲು ಸಾಧ್ಯವಿಲ್ಲ. ಸರ್ಕಾರ ಹಣ ಕೊಡಲು ಏನು ಮಾಡಬೇಕೆಂದು ತಿಳಿಯದೇ ಬಿಜೆಪಿಯವರು ಪೆದ್ದರಂತೆ ಮಾತಾಡುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದರು.

ಒಂದು ವರ್ಷದೊಳಗೆ ಶಾಶ್ವತ ಪರಿಹಾರ: ಶಾಸಕ ಪಿ.ರವಿಕುಮಾರ್‌

2014ರಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಮೋದಿ ಹೇಳಿದ್ದರು. ರೈತರ ಆದಾಯ ದ್ವಿಗುಣ ಮಾಡಿದರೆ? ಅವರು ನೀಡಿದ ಭರವಸೆಗಳನ್ನು ಈಡೇರಿಸದೇ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ವಿರುದ್ಧ ಜನರನ್ನು ಎತ್ತಿಕಟ್ಟಲು ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. ಕಾಂಗ್ರೆಸ್‌ ಪಕ್ಷ ಯಾರೋ ಒಬ್ಬರ ಆಸ್ತಿಯಲ್ಲ. ಕಾಂಗ್ರೆಸ್‌ ಅಂದರೆ ಚಳವಳಿ. ಕಾಂಗ್ರೆಸ್‌ ಜನರೇ ಆಸ್ತಿ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮೂಲ ಮತಗಳು ಕ್ರೂಢೀಕರಣಗೊಂಡಿದ್ದು ದೊಡ್ಡ ಸಾಧನೆ. ಲಕ್ಷಾಂತರ ಕಾರ್ಯಕರ್ತರ ಪರಿಶ್ರಮ ಮತ್ತು ಹೋರಾಟದಿಂದ ಕಾಂಗ್ರೆಸ್‌ ಅಭೂತಪೂರ್ವ ಜಯ ದೊರೆಯಿತು. ಅವರರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕಾಂಗ್ರೆಸ್‌ ಯಾವತ್ತೂ ನುಡಿದಂತೆ ನಡೆದ ಪಕ್ಷವಾಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. 2023ರ ಚುನಾವಣೆಯಲ್ಲಿ ದಲಿತ ಸಂಘಟನೆಗಳು, ಮಹಿಳೆಯರು, ಅಲ್ಪಸಂಖ್ಯಾತರು, ಪ್ರಗತಿಪರರು, ಚಿಂತಕರು, ಸಾಹಿತಿಗಳು ಸಂವಿಧಾನ ಬಲಪಡಿಸುವಂತೆ ಅಧಿಕಾರ ಕೊಟ್ಟರು. ಒಕ್ಕಲಿಗ, ಲಿಂಗಾಯತ ಬೆಂಬಲದಿಂದ ಕಾಂಗ್ರೆಸ್‌ಗೆ 135 ಸ್ಥಾನಗಳು ದೊರೆಯಿತು ಎಂದು ಅವರು ತಿಳಿಸಿದರು.

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತಲಾ 1 ಸಾವಿರ ರು. ಸಹಾಯಧನ: ಶಾಸಕ ಪ್ರದೀಪ್‌ ಈಶ್ವರ್‌ ಭರವಸೆ

ಭವನ ನಿರ್ಮಾಣಕ್ಕೆ ಸಹಕರಿಸಿ: ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ಅವರು ಮೈಸೂರು ನಗರದಲ್ಲಿ ಮುಂದಿನ 2 ವರ್ಷಗಳಲ್ಲಿ ಸುಸಜ್ಜಿತ ಕಾಂಗ್ರೆಸ್‌ ಕಚೇರಿ ನಿರ್ಮಾಣ ಮಾಡಬೇಕೆಂದು ಗುರಿ ಕೊಟ್ಟಿದ್ದಾರೆ. ಇದನ್ನು ಈಡೇರಿಸಲು ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ ಮತ್ತು ಕೆ. ವೆಂಕಟೇಶ್‌ ಅವರು ಸಹಕಾರ ನೀಡಬೇಕು ಎಂದು ಕೋರಿದರು. ಶಾಸಕ ಕೆ. ಹರೀಶ್‌ಗೌಡ, ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌, ಜಿಪಂ ಮಾಜಿ ಅಧ್ಯಕ್ಷ ಕೆ. ಮರಿಗೌಡ, ಎಂಡಿಎ ಮಾಜಿ ಅಧ್ಯಕ್ಷ ಮೋಹನ್‌ಕುಮಾರ್‌, ಕೆಪಿಸಿಸಿ ಕಾರ್ಯದರ್ಶಿ ನರೇಂದ್ರ, ವಕ್ತಾರ ಎಚ್‌.ಎ. ವೆಂಕಟೇಶ್‌, ಮುಖಂಡರಾದ ಎಂ. ಶಿವಣ್ಣ, ಮಂಜುನಾಥ್‌, ಶಿವಮಲ್ಲು, ಪುಷ್ಪಲತಾ ಚಿಕ್ಕಣ್ಣ, ಈಶ್ವರ್‌ ಚಕ್ಕಡಿ, ಎಂ.ಕೆ. ಅಶೋಕ್‌, ಪಿ. ರಾಜು, ಬಸವಣ್ಣ, ಗಿರೀಶ್‌, ರಾಜೇಶ್‌ ಮೊದಲಾದವರು ಇದ್ದರು.

click me!