* ಜಿಟಿಡಿಸಿ ಕಟ್ಟಡ ಕಾಮಗಾರಿ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ
* ನಾನು ಅಧಿಕಾರ ಹುಡುಕಿಕೊಂಡು ಓಡಿ ಹೋಗುವ ವ್ಯಕ್ತಿ ಅಲ್ಲ
* ಏನು ಜವಬ್ದಾರಿ ಕೊಟ್ಟರು ಕೆಲಸ ಮಾಡುತ್ತೇನೆ
ಮಾಗಡಿ(ಜು.13): ಸೂಟ್ ಹೊಲಿಸಿಕೊಂಡವರೆಲ್ಲ ಸಿಎಂ ಆಗೋಲ್ಲ, ಅಣ್ಣ-ತಮ್ಮಂದಿರು ಸೂಟು ಒಲಿಸಿಕೊಂಡಿದ್ದು ನಿರಾಶರಾಗಿದ್ದಾರೆ. ನಾನು ಸಿಎಂ ಆಗುತ್ತೇನೆ ಎಂಬ ಆತಂಕ ಡಿ.ಕೆ.ಸುರೇಶ್‌ಗೆ ಇದ್ದರೇ ಏನು ಮಾಡಕ್ಕೆ ಆಗಲ್ಲ ಎಂದು ಡಿ.ಕೆ. ಶಿವಕುಮಾರ್ ಸಹೋದರರ ವಿರುದ್ಧ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದರು. ಚಿಕ್ಕಕಲ್ಯಾ ಗ್ರಾಮದಲ್ಲಿ ಜಿಟಿಡಿಸಿ ಕಟ್ಟಡ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮುಳುಗುವ ಹಡಗಾಗಿದ್ದು, ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂದು ಅರಿತಿರುವ ಆ ಪಕ್ಷದ ನಾಯಕರು ಒಬ್ಬೊಬ್ಬರೇ ಪಕ್ಷ ಬಿಡುತ್ತಿದ್ದಾರೆ. ಅಲ್ಲಿ ಸಿದ್ದರಾಮಯ್ಯ ಮೇಲಾ, ಡಿ.ಕೆ.ಶಿವಕುಮಾರು ಮೇಲಾ ಎಂದು ಗುದ್ದಾಟ ಶುರುವಾಗಿದೆ. ಬಿಜೆಪಿಯಲ್ಲಿ ಆ ರೀತಿಯ ಪರಿಸ್ಥಿತಿ ಇಲ್ಲ. ನಮ್ಮಂಥ ಸಾವಿರಾರು ನಾಯಕರನ್ನ ಸೃಷ್ಟಿಮಾಡುವ ಶಕ್ತಿ ಬಿಜೆಪಿಗೆ ಇದೆ, ಅಶ್ವತ್ಥನಾರಾಯಣ್ ಬಿಜೆಪಿಯ ಒಂದು ಭಾಗವಷ್ಟೇ ಎಂದರು.
ಚಿತ್ರನ್ನಾ ಗಿರಾಕಿಗಳು: ಡಿಕೆ ಸಹೋದರರು ಚಿತ್ರನ್ನಾ ಗಿರಾಕಿಗಳು, ಅಧಿಕಾರಕ್ಕಾಗಿ ಬದುಕುವವರು. ನಾವು ಜನರಿಗೋಸ್ಕರ ಬದುಕುತ್ತಿದ್ದೇವೆ. ಸಿದ್ದರಾಮಯ್ಯ ನಿರಾಧಾರ ಹೇಳಿಕೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರೂ ಮತ್ತೆ ಅಧಿಕಾರದ ಆಸೆ ಬಂದಿದೆ. ಬೇರೆಯವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಇಲ್ಲ ಎಂದು ಲೇವಡಿ ಮಾಡಿದರು.
ತಮ್ಮ ಮಟ್ಟ ತಾವೇ ಇಳಿಸಿಕೊಳ್ಳುತ್ತಿದ್ದಾರೆ, ಸಿದ್ದರಾಮಯ್ಯಗೆ ಅಶ್ವತ್ಥನಾರಾಯಣ ತಿರುಗೇಟು
ಬಿಜೆಪಿ ಸರಕಾರಕ್ಕೆ ಬದ್ಧತೆ, ಕಾಳಜಿ ಇಲ್ಲ ಎಂಬ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬದ್ಧತೆ ಎಂಬುದು ಕಾಂಗ್ರೆಸ್ ಜೀವನದಲ್ಲೆ ಇಲ್ಲ. ಸಮಾಜದಲ್ಲಿ ಸಂಪೂರ್ಣ ತಿರಸ್ಕಾರವಾಗಿರೋ ಪಕ್ಷ ಏನು ಭವಿಷ್ಯವಿಲ್ಲದ ಪಕ್ಷ ಕಾಂಗ್ರೆಸ್. ದೇಶದಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುತ್ತಿದೆ, ಯಾವ ನಾಯಕರು ಆ ಪಕ್ಷದಲ್ಲಿ ಮುಂದೆ ಇರುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಆಗಲು ಸಹ ಹುಡುಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಸಂಪೂರ್ಣ ನಿರ್ನಾಮವಾಗುವ ಪಕ್ಷ. ಅವರು ಎಲ್ಲಿ ಇರುತ್ತಾರೋ ಅಲ್ಲಿ ದುಡ್ಡು ಮಾಡಬೇಕು, ಏನು ಅಧಿಕಾರ ಪಡೆಯಬೇಕು, ಅವರ ಮನೆಯವರು ಏನು ರಾಜಕೀಯ ಮಾಡಬೇಕು ಎಂಬುದು ಬಿಟ್ಟರೇ ಅವರಿಗೆ ಬೇರೆ ಏನು ಯೋಚನೆ ಇಲ್ಲ ಎಂದು ಕಿಡಿಕಾರಿದರು.
ನಾನು ಅಧಿಕಾರ ಹುಡುಕಿಕೊಂಡು ಓಡಿ ಹೋಗುವ ವ್ಯಕ್ತಿ ಅಲ್ಲ. ಏನು ಜವಬ್ದಾರಿ ಕೊಟ್ಟರು ಕೆಲಸ ಮಾಡುತ್ತೇನೆ. ಇಡೀ ದೇಶಕ್ಕೆ ಭವಿಷ್ಯ ರೂಪಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಅಧಿಕಾರದ ದಾಹ ಯಾರಿಗೆ ಇದೆ. ಅದು ಅವರಿಗೆ ಅನ್ವಯವಾಗುತ್ತದೆ. ಹಿಂದಿನಿಂದ ಚಾಕು ಚೂರಿ ಹಾಕುವ ಸಂಸ್ಕೃತಿ ಅಲ್ಲ ನಮ್ಮದು. ಅವರೆಲ್ಲ ಅದೇ ಸಂಸ್ಕೃತಿಗೆ ಸೇರಿಕೊಂಡಿರುವವರು. ಕಾಂಗ್ರೆಸ್‌ನಲ್ಲೇ ಅವರವರಲ್ಲಿ ಹೊಡೆದಾಟ ಶುರುವಾಗಿದೆ ಎಂದರು.
ರಾಜ್ಯದಲ್ಲಿ ಪ್ರವಾಹ ಭೀತಿ ವಿಚಾರವಾಗಿ ಸರ್ಕಾರ ಕ್ರಮ ವಹಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಹೊರಟಿದ್ದು ಎಲ್ಲಾ ರೀತಿಯ ಕ್ರಮವಹಿಸಲಾಗುತ್ತಿದೆ. ಸತತವಾಗಿ ನಾಲ್ಕು ವರ್ಷದಿಂದ ಈ ಪರಿಸ್ಥಿತಿ ಇದೆ. ಸರಕಾರದಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.