* ಜಿಲ್ಲಾ ನವ ಸಂಕಲ್ಪ ಚಿಂತನ ಶಿಬಿರ ಉದ್ಘಾಟನೆಯಲ್ಲಿ ಸತೀಶ ಜಾರಕಿಹೊಳಿ ಆರೋಪ
* ದೇಶ ಹಿತದ ವಿರುದ್ಧ ಖಾಸಗೀಕರಣ ಮಾಡುತ್ತಿರುವ ಪ್ರಧಾನಿ ಮೋದಿ
* 8 ಸಾವಿರ ಕೋಟಿ ದುಂದು ವೆಚ್ಚದಲ್ಲಿ ಸಂಸತ್ ಭವನ ನಿರ್ಮಾಣ ಮಾಡುತ್ತಿದೆ
ವಿಜಯಪುರ(ಜು.13): ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡಬೇಕಾದ ಪ್ರಧಾನ ಮಂತ್ರಿ ಮೋದಿ ದೇಶ ಹಿತದ ವಿರುದ್ಧ ಖಾಸಗೀಕರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ದೇಶವನ್ನು ಕಟ್ಟಿಬೆಳೆಸಿತ್ತು. ಆದರೆ, ಮೋದಿ ಅದನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದರು. ನಗರದ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ನವ ಸಂಕಲ್ಪ ಚಿಂತನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, 24ಗಿ7 ಪ್ರಧಾನಿ ಕೆಲಸ ಮಾಡುತ್ತಾರೆ ಎಂದು ತೋರಿಸಿಕೊಳ್ಳುತ್ತಿರುವ ಮೋದಿ ಅವರು ಕೇವಲ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡಿ ಉದ್ದಿಮೆದಾರರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಲಾಭ ಪಡೆಯಬೇಕಾದರೆ 17 ರಿಂದ 21 ವಯಸ್ಸಿನವರಿಗೆ ಮಾತ್ರ ಸಾಧ್ಯ. 17ನೇ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಕೇವಲ ಪಿಯುಸಿ ಮಾತ್ರ ಓದಿರುತ್ತಾರೆ. ಈ ಅಗ್ನಿಪಥಕ್ಕೆ ಸೇರಬೇಕಾದರೆ ಮುಂದೆ ಎಂಜಿನಿಯರಿಂಗ್ ಅಥವಾ ಮೆಡಿಕಲ… ಓದುವ ಕನಸನ್ನು ವಿದ್ಯಾರ್ಥಿಗಳು ಕೈ ಬಿಡಬೇಕು. ಕೇಂದ್ರದ ಈ ಯೋಜನೆ ಮಕ್ಕಳನ್ನು ಮೆಡಿಕಲ…, ಎಂಜಿನಿಯರಿಂಗ್ ಓದುವುದನ್ನು ತಡೆಯಲೆಂದೇ ಜಾರಿಗೊಳಿಸಿದಂತಿದೆ ಎಂದು ದೂರಿದರು.
undefined
ಪ್ರಭಾವಿ ಲಿಂಗಾಯತ ಲೀಡರ್ ಬಿಜೆಪಿ ಸೇರ್ಪಡೆ?, ಪಕ್ಷಾಂತರ ಪರ್ವ ಬಗ್ಗೆ ಜಾರಕಿಹೊಳಿ ಹೊಸ ಬಾಂಬ್
ದೇಶದಲ್ಲಿ ಶಾಖಾಹಾರಿಗಳೆಲ್ಲ ಸೇರಿ ಮಾಂಸ ಹಾರಿಗಳು ಏನು ತಿನ್ನಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತಿದ್ದಾರೆ. ದೇಶದಲ್ಲಿ ಎಲ್ಲರಿಗೂ ಧರ್ಮದ ಸ್ವಾತಂತ್ರ್ಯ ಇದೆ. ಅವರವರ ಧರ್ಮದ ಆಚರಣೆಯಂತೆ ಆಹಾರ ಪದ್ಧತಿ ರೂಢಿಸಿಕೊಂಡಿದ್ದಾರೆ. ದೇಶದಲ್ಲಿ ಎಲ್ಲರಿಗೂ ಸಂವಿಧಾನಬದ್ಧ ಹಕ್ಕುಗಳಿವೆ. ಆದರೆ, ಬಿಜೆಪಿಯವರು ಸಂವಿಧಾನದ ಆಶಯಗಳಿಗೆ ಧಕ್ಕೆಯುಂಟಾಗುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಚಿಂತನ ಶಿಬಿರ ಹಾಗೂ ಅನೇಕ ಚರ್ಚೆಗಳನ್ನು ನಡೆಸಲಾಗಿದೆ. ಕೃಷಿ ಕ್ಷೇತ್ರ, ಕಾರ್ಮಿಕವಲಯ, ಬಡವರು, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಪಕ್ಷ ಏನು ಮಾಡಬೇಕು ಹಾಗೂ ಯಾವ ರೀತಿ ಸಂಘಟನಾತ್ಮಕ ಹೋರಾಟ ಮಾಡಬೇಕು ಎಂಬುವುದನ್ನು ಚರ್ಚೆ ಮಾಡಲಾಗಿದೆ. ಈಗ ಜಿಲ್ಲಾಮಟ್ಟದಲ್ಲಿ ಇಡೀ ರಾಜ್ಯಾದ್ಯಂತ ನವ ಚಿಂತನ ಶಿಬಿರಗಳನ್ನು ಹಮ್ಮಿಕೊಂಡು ಪಕ್ಷವನ್ನು ಹೇಗೆ ತಳಮಟ್ಟದಿಂದ ಗಟ್ಟಿಗೊಳಿಸಬೇಕು ಎಂಬುವುದನ್ನು ಚರ್ಚೆ ಮಾಡಲಾಗುತ್ತಿದೆ. ಒಟ್ಟು 8 ವಿಷಯಗಳ ಕುರಿತು ಆಳವಾಗಿ ಚರ್ಚೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಎದುರಿಸುವ ತಯಾರಿ ಮಾಡಲಾಗುತ್ತಿದೆ ಎಂದರು.
ಇನ್ನೇನು 9 ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸ್ಥಳೀಯವಾಗಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಹಣೆಯುವ ರಣತಂತ್ರಗಳನ್ನು ಹೇಗೆ ನಿಭಾಯಿಸಬೇಕು ಎಂಬುವುದರ ಕುರಿತು ಕಾರ್ಯಕರ್ತರೊಂದಿಗೆ ಚರ್ಚೆ ಮಾಡಲು ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಗೆಲುವಿನ ದಡ ಸೇರುವ ಭರವಸೆ ಇದೆ. ಹಾಗಾಗಿ ನಾವೆಲ್ಲ ಸೇರಿ ಪಕ್ಷವನ್ನು ಬಲಿಷ್ಠಗೊಳಿಸೋಣ ಎಂದು ತಿಳಿಸಿದರು.
ಕಾಂಗ್ರೆಸ್‌ಗೂ ಸಿದ್ದರಾಮೋತ್ಸವಕ್ಕೂ ಸಂಬಂಧವಿಲ್ಲ: ಸತೀಶ್ ಜಾರಕಿಹೊಳಿ
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಾಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಡಾ.ಎಂ.ಬಿ.ಪಾಟೀಲ, ರಾಜ್ಯ ಸಭಾಸದಸ್ಯ ಸಯ್ಯದ ನಾಸಿರುದ್ಧಿನ್ ಹುಸೇನ್, ವಿಧಾನ ಪರಿಷತ್ ವಿರೋಧ ಪಕ್ಷದ ಸಚೇತಕ ಪ್ರಕಾಶ ರಾಠೋಡ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ.ರಾಜು ಆಲಗೂರ, ಮಾಜಿ ಶಾಸಕ ವಿಠ್ಠಕ ಕಟಕದೊಂಡ, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಹಮೀದ್ ಮುಶ್ರಿಫ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಸಂಗಮೇಶ ಬಬಲೇಶ್ವರ, ವಸಂತ ಹೊನಮೋಡೆ ಸೇರಿದಂತೆ ಮುಂತಾದವರು ಇದ್ದರು.
ಸಾರ್ವಜನಿಕರ ದಿನ ಬಳಕೆ ವಸ್ತುಗಳು ಇಷ್ಟೊಂದು ದುಬಾರಿಯಾಗಿದ್ದರೂ ಅವುಗಳ ಬೆಲೆ ಇಳಿಕೆಗೆ ಯಾವುದೇ ಕ್ರಮ ತೆಗೆದುಕೊಳ್ಳದ ಸರ್ಕಾರ .8 ಸಾವಿರ ಕೋಟಿ ದುಂದು ವೆಚ್ಚದಲ್ಲಿ ಸಂಸತ್ ಭವನ ನಿರ್ಮಾಣ ಮಾಡುತ್ತಿದೆ. ಇದು ಯಾವ ಪುರುಷಾರ್ಥಕ್ಕೆ ಎಂಬುವುದು ತಿಳಿಯುತ್ತಿಲ್ಲ ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.