ಅಭಿವೃದ್ಧಿ ಸಹಿಸದ ಕಾಂಗ್ರೆಸ್‌ ಸುಳ್ಳು ಹೇಳಿಕೆ: ಸುನಿಲ್‌ ಕುಮಾರ್‌

By Kannadaprabha News  |  First Published Aug 8, 2022, 5:00 AM IST

ಕಾಂಗ್ರೆಸ್‌ ದೇಶದಲ್ಲಿ ಅಂದು ತುರ್ತುಸ್ಥಿತಿ ಹೇರಿದ ಪಕ್ಷ . ಆದರೆ ಇಂದು ಬಿಜೆಪಿಯ ಅಭಿವೃದ್ಧಿಯ ವೈಖರಿಯನ್ನು ಸಹಿಸಲಾಗದೆ ಪ್ರಶ್ನಿಸುತ್ತಿದೆ: ಸುನಿಲ್‌ ಕುಮಾರ್‌


ಕಾರ್ಕಳ(ಆ.08): ಕಾರ್ಕಳದಲ್ಲಿ ಕಾಂಗ್ರೆಸ್‌ 35 ವರ್ಷಗಳಿಂದ ಅಭಿವೃದ್ಧಿ ಮಾಡಿರಲಿಲ್ಲ. ಬಿಜೆಪಿ ಅಂದು ಟೀಕಿಸುತ್ತಿರಲಿಲ್ಲ. ಆದರೆ ಇಂದು ಕಾರ್ಕಳ ಕ್ಷೇತ್ರವನ್ನು ಎಲ್ಲ ಆಯಾಮಗಳಿಂದಲೂ ಬಿಜೆಪಿ ಅಭಿವೃದ್ಧಿ ಮಾಡಿದೆ. ಆದರೆ ಕಾಂಗ್ರೆಸ್‌ ಪಕ್ಷ ಎಲ್ಲೆಡೆಯೂ ಸುಳ್ಳು ಹೇಳಿಕೆ ನೀಡುತ್ತ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದ್ದಾರೆ.

ಕಾರ್ಕಳ ಮಂಜುನಾಥ್‌ ಪೈ ಸಭಾಂಗಣದಲ್ಲಿ ನಡೆದ 75 ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಸಂಭ್ರಮಾಚರಣೆಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್‌ ದೇಶದಲ್ಲಿ ಅಂದು ತುರ್ತುಸ್ಥಿತಿ ಹೇರಿದ ಪಕ್ಷ . ಆದರೆ ಇಂದು ಬಿಜೆಪಿಯ ಅಭಿವೃದ್ಧಿಯ ವೈಖರಿಯನ್ನು ಸಹಿಸಲಾಗದೆ ಪ್ರಶ್ನಿಸುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ದೇಶದ ಮೇಲೆ ಗೌರವ ವಿಲ್ಲ. ಬಿಜೆಪಿ ಮಾಡಿದ ಅಭಿವೃದ್ಧಿಯನ್ನು ತಾನೇ ಮಾಡಿದ ಅಭಿವೃದ್ಧಿ ಎಂದು ಬಿಂಬಿಸಿಕೊಳ್ಳುತ್ತಿದೆ. ದೇಶದ ಸಂವಿಧಾನದವನ್ನು ತನ್ನ ಮನಬಂದಂತೆ ಬದಲಿಸುತ್ತಾ ಬಂದಿದ್ದು ರಾಷ್ಟ್ರಧ್ವಜಕ್ಕೆ ಗೌರವ ನೀಡಿಲ್ಲ. ಮೊಯ್ಲಿ ಮುಖ್ಯಮಂತ್ರಿ ಆಗಿದ್ದಾಗ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಹೋದ ಹೋರಾಟಗಾರರಿಗೆ ಗುಂಡು ಹಾರಿಸಿದ್ದವರು ಇಂದು ಬಿಜೆಪಿಗೆ ರಾಷ್ಟ್ರಧ್ವಜದ ಬಗ್ಗೆ ಪಾಠ ಮಾಡುತ್ತಿದ್ದಾರೆ ಎಂದರು.

Latest Videos

undefined

ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ ದಿನದಂದೇ ಕಾಂಗ್ರೆಸ್‌ ಕಪ್ಪುಬಟ್ಟೆ ಧರಿಸಿದ್ದೇಕೆ?

ಅಭಿವೃದ್ಧಿ ವಿರೋಧಿ ಕಾಂಗ್ರೆಸ್‌: ಕಾರ್ಕಳದಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ತರುತ್ತೇವೆ ಶಪಥ ಮಾಡಿದ ಮೊಯ್ಲಿ, ಅಂದು ನಿಮ್ಮನ್ನು ಕಾರ್ಕಳ ದ ಜನ ಚುನಾಯಿಸಿದಾಗ ಅಭಿವೃದ್ಧಿ ಮಾಡಬೇಕಿತ್ತು. ಆದರೆ ಇಂದು ಕಾರ್ಕಳ ಕ್ಷೇತ್ರದ ಅಭಿವೃದ್ಧಿಯನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಕಾರ್ಕಳ ಉತ್ಸವ, ಎಣ್ಣೆಹೊಳೆ ಏತನೀರಾವರಿ ಯೋಜನೆಯನ್ನು ವಿರೋಧಿಸಿದ ಕಾಂಗ್ರೆಸ್‌ ಅಭಿವೃದ್ಧಿ ವಿರೋಧಿ ನಿಲುವು ಹೊಂದಿದೆ. ಕ್ಷೇತ್ರದ ಜನರನ್ನು ದಾರಿತಪ್ಪಿಸುತ್ತಿದೆ ಎಂದು ಸಚಿವ ಸುನಿಲ್‌ ಆರೋಪಿಸಿದರು.

ಕಾರ್ಕಳ ತಾಲೂಕಿನಲ್ಲಿ 50000 ಮನೆಗಳಿದ್ದು, 7000 ಅಂಗಡಿ ಮುಂಗಟ್ಟುಗಳಿವೆ. ಜನಪ್ರತಿನಿಧಿಗಳು, ಕಾರ್ಯಕರ್ತರು ಸೇರಿದಂತೆ ಎಲ್ಲರೂ ಆ.13ರಿಂದ ಸಾರ್ವಜನಿಕವಾಗಿ ತಿರಂಗ ಹಾರಿಸಲು ಸಿದ್ಧರಾಗಬೇಕು ಎಂದು ಸಚಿವರು ಹೇಳಿದರು.

ಹಿರಿಯ ಮುಖಂಡ ಎಂ.ಕೆ. ವಿಜಯಕುಮಾರ್‌, ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ರವೀಂದ್ರ ಮಡಿವಾಳ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ, ಜಯರಾಂ ಸಾಲ್ಯಾನ್‌, ಕಾರ್ಯದರ್ಶಿ ನವೀನ್‌ ನಾಯಕ್‌ ಉಪಸ್ಥಿತರಿದ್ದರು. ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಹಾಸ್‌ ಶೆಟ್ಟಿಮುಟ್ಲುಪಾಡಿ ಕಾರ್ಯಕ್ರಮ ನಿರೂಪಿಸಿದರು.
 

click me!