
ಬೆಂಗಳೂರು(ಆ.07): ಬಿಜೆಪಿ ಸರ್ಕಾರ ರಾಜ್ಯಾದ್ಯಂತ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಮತದಾರರ ಹಲವು ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಎಷ್ಟು ಮಂದಿಯನ್ನು ಕೈಬಿಟ್ಟಿದ್ದಾರೆಂಬ ಅಧಿಕೃತ ದಾಖಲೆ ನಮ್ಮ ಬಳಿ ಇದೆ. ಆದಷ್ಟುಬೇಗ ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲುವ ಭಯದಿಂದ ಕಾಂಗ್ರೆಸ್ ಬಗ್ಗೆ ಒಲವಿರುವ ಹಿಂದುಳಿದ ವರ್ಗ, ಪರಿಶಿಷ್ಟ ಮತದಾರರು ಹಾಗೂ ಅಲ್ಪಸಂಖ್ಯಾತ ಸಮುದಾಯದವರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅವರು ಇಂತಹ ಎಷ್ಟೇ ಷಡ್ಯಂತ್ರ ನಡೆಸಿದರೂ ಮುಂದಿನ ಚುನಾವಣೆ ಗೆಲ್ಲುವುದಿಲ್ಲ ಎಂಬುದು ಸ್ಪಷ್ಟಎಂದರು.
ಕಾಂಗ್ರೆಸ್ಸಲ್ಲೀಗ ಸಿಎಂ ಹುದ್ದೆಗೆ ಎಂ.ಬಿ.ಪಾಟೀಲ್ ಟವೆಲ್!
ಈ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ ಎಲ್ಲೆಡೆ ಮತದಾರರ ಪಟ್ಟಿ ಪರಿಶೀಲಿಸಿ, ಅಕ್ರಮಗಳು ನಡೆದಿರುವ ಕಡೆ ಆಕ್ಷೇಪಣೆ ಸಲ್ಲಿಕೆ ಮಾಡಿ ಎಂದು ಸೂಚಿಸಿದ್ದೇವೆ. ಈ ಬಗ್ಗೆ ಸದ್ಯದಲ್ಲೇ ಪ್ರತ್ಯೇಕ ಸಭೆ ನಡೆಸಿ ಬಿಜೆಪಿಯವರು ಮಾಡಲು ಯತ್ನಿಸುತ್ತಿರುವ ಅನ್ಯಾಯವನ್ನು ತಡೆಯಲಾಗುವುದು ಎಂದರು.
ಬಿಬಿಎಂಪಿ ಮೀಸಲಾತಿ ಬಗ್ಗೆಯೂ ಆಕ್ಷೇಪ ಸಲ್ಲಿಸಬೇಬೇಕಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಬಿಎಂಪಿ ವಾರ್ಡ್ ಮರುವಿಂಗಡಣೆ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ ಒಂದು ಆಕ್ಷೇಪಣೆಗೂ ಸರ್ಕಾರ ಸ್ಪಂದಿಸಿಲ್ಲ. ಯಾರ ಅಭಿಪ್ರಾಯವನ್ನೂ ಆಲಿಸದೆ ಸರ್ಕಾರ ಎಲ್ಲ ಆಕ್ಷೇಪಗಳನ್ನು ವಜಾಗೊಳಿಸಿದೆ. ಬಿಜೆಪಿ ಶಾಸಕರು, ಸಂಸದರು ಸಂಘ ಪರಿವಾರದ ಕಚೇರಿಗಳಲ್ಲಿ ಈ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲವಾಗಿದೆ. ಹೀಗಾಗಿ ಆಕ್ಷೇಪಗಳನ್ನು ಕೇಳುವ ಸೌಜನ್ಯವನ್ನೂ ಅವರು ತೋರಿಸಿಲ್ಲ. ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಹೆಸರು ತಪ್ಪಿ ಹೋದರೆ ಪ್ರಶ್ನಿಸುವುದು ಆತನ ಹಕ್ಕು. ಯಾರಿಗೂ ಮೂಲಭೂತ ಮತದಾನದ ಹಕ್ಕನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.