ಖಾದಿ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ಕಾಂಗ್ರೆಸ್‌ನವರಿಗೆ ಈಗ ಖಾದಿ ನೆನಪಾಗಿದೆ. ರಾಷ್ಟ್ರ ಧ್ವಜ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಅವರಿಗೆ ನಾಚಿಕೆ ಆಗಬೇಕು: ಶೆಟ್ಟರ್
ಹುಬ್ಬಳ್ಳಿ(ಆ.07): ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಖ್ಯಮಂತ್ರಿ ಬದಲಾವಣೆ ಎನ್ನುವುದೆಲ್ಲ ಕೇವಲ ಗಾಳಿ ಸುದ್ದಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕಳೆದ ಎರಡು ತಿಂಗಳಿಂದ ಗಾಳಿ ಸುದ್ದಿ ಹರಿದಾಡುತ್ತಿದೆ ಅಷ್ಟೆ. ಇದು ನಿಜವಲ್ಲ. ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಕೇಂದ್ರದಿಂದ ನನಗೆ ಯಾರೂ ಕರೆ ಮಾಡಿಲ್ಲ. ಅದರ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ ಎಂದರು.
ಖಾದಿ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಅವರು, ಕಾಂಗ್ರೆಸ್‌ನವರಿಗೆ ಈಗ ಖಾದಿ ನೆನಪಾಗಿದೆ. ರಾಷ್ಟ್ರ ಧ್ವಜ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಅವರಿಗೆ ನಾಚಿಕೆ ಆಗಬೇಕು. ಮೋದಿ ಅವರು ಪ್ರಧಾನಿ ಆದ ಬಳಿಕ ಖಾದಿಗೆ ಮನ್ನಣೆ ದೊರೆತಿದೆ. ಇದನ್ನು ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ. ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಹಳಷ್ಟುವ್ಯಂಗವಾಡುತ್ತಿದ್ದಾರೆ. ಐದು ವರ್ಷ ಮುಖ್ಯಮಂತ್ರಿ ಆಗಿದ್ದವರು ಧ್ವಜದ ಬಗ್ಗೆ ಈ ರೀತಿಯಲ್ಲಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದರು.
ಕಾಂಗ್ರೆಸ್‌ನಲ್ಲಿನ ಆಂತರಿಕ ಕಿತ್ತಾಟ ಇನ್ನೂ ದೊಡ್ಡ ಮಟ್ಟಕ್ಕೆ ಹೋಗಲಿದೆ: ಶೆಟ್ಟರ್
ಇನ್ನು ಸಿದ್ದರಾಮಯ್ಯ ಜನ್ಮದಿನದ ಅಮೃತಮಹೋತ್ಸವ ಕಾರ್ಯಕ್ರಮದಿಂದ ಬಿಜೆಪಿಗೆ ಏನೂ ತೊಂದರೆ ಇಲ್ಲ. ಅದರ ಸೈಡ್ ಎಫೆಕ್ಟ್ ಕಾಂಗ್ರೆಸ್‌ಗೇ ಆಗಿದೆ. ದಾವಣಗೆರೆ ಕಾರ್ಯಕ್ರಮದ ವೇದಿಕೆ ಮೇಲೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಹಜವಾಗಿರಲಿಲ್ಲ ಎಂದು ಕಾಲೆಳೆದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಖಾದಿ ಗ್ರಾಮೋದ್ಯೋಗಕ್ಕೆ ಎಷ್ಟುಅನುದಾನ ಕೊಟ್ಟಿದ್ದಾರೆ ಎಂದು ನೆನಪು ಮಾಡಿಕೊಳ್ಳಬೇಕು. ಖಾದಿ ಗ್ರಾಮೋದ್ಯೋಗ ಕಾರ್ಮಿಕರ ವಿಚಾರದಲ್ಲಿ ಬಿಜೆಪಿ ಕೊಟ್ಟಿರುವ ಪ್ರೋತ್ಸಾಹ ಯಾರೂ ನೀಡಿಲ್ಲ. ಪಾಲಿಸ್ಟರ್ ಧ್ವಜದಿಂದ ಖಾದಿ ಉದ್ಯಮಕ್ಕೆ ಯಾವುದೇ ಧಕ್ಕೆ ಆಗಲಾರದು ಎಂದು ಹೇಳಿದರು.