ಬಿಎಸ್‌ವೈ ನಮಗೂ ನಾಯಕರು: ವಿಜಯೇಂದ್ರಗೆ ಸಚಿವ ಸೋಮಣ್ಣ ಚಾಟಿ

By Kannadaprabha News  |  First Published Mar 17, 2023, 3:40 AM IST

ಯಡಿಯೂರಪ್ಪ ಅವರನ್ನು ಟೀಕಿಸುವವರು ಹುಷಾರಾಗಿರಿ ಎಂಬ ವಿಜಯೇಂದ್ರ ಎಚ್ಚರಿಕೆಗೆ ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದ ಸೋಮಣ್ಣ, ವಿಜಯೇಂದ್ರ ಅವರು ತಮ್ಮದೇನು, ತಾವು ಮುಂದೆ ಏನು ಮಾಡಬಹುದು ಎಂಬುದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು. 


ಬೆಂಗಳೂರು (ಮಾ.17): ‘ಯಡಿಯೂರಪ್ಪ ಅವರು ನಿಮಗೊಬ್ಬರಿಗೇ ನಾಯಕರಲ್ಲ. ನಮಗೂ ನಾಯಕರು. ನಿಮಗೆ ಅವರು ತಂದೆ. ಅವರ ಬಗ್ಗೆ ಪ್ರೀತಿ, ಗೌರವ ನಿಮಗಷ್ಟೇ ಅಲ್ಲ. ರಾಜ್ಯದ ಆರೂವರೆ ಕೋಟಿ ಜನರಲ್ಲಿದೆ’ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರು ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ತೀಕ್ಷ್ಣವಾಗಿ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನು ಟೀಕಿಸುವವರು ಹುಷಾರಾಗಿರಿ ಎಂಬ ವಿಜಯೇಂದ್ರ ಎಚ್ಚರಿಕೆಗೆ ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದ ಸೋಮಣ್ಣ, ವಿಜಯೇಂದ್ರ ಅವರು ತಮ್ಮದೇನು, ತಾವು ಮುಂದೆ ಏನು ಮಾಡಬಹುದು ಎಂಬುದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಈ ದೇಶ ಕಂಡ ಅಪ್ರತಿಮ ನಾಯಕರು. ರಾಜ್ಯದಲ್ಲಿ ಯಡಿಯೂರಪ್ಪ ಅವರು ಕೂಡ ಆ ರೀತಿಯ ನಾಯಕರು. ಅದನ್ನು ಅವರು ಹೇಳುವ ಬದಲು ಇತರರು ಹೇಳಿದರೆ ಅದಕ್ಕೆ ಹೆಚ್ಚಿನ ಗಾಂಭೀರ್ಯತೆ ಬರುತ್ತದೆ ಎಂದರು.

Tap to resize

Latest Videos

ರಾಜ್ಯದಲ್ಲಿ ಯಡಿಯೂರಪ್ಪರನ್ನು ಬಿಟ್ಟು ಬಿಜೆಪಿಯನ್ನು ಗೆಲ್ಲಿಸುವ ಎದೆಗಾರಿಕೆ ಯಾರಿಗೆ ಇದೆ?: ಬಿ.ವೈ.ವಿಜಯೇಂದ್ರ

ವಿಜಯೇಂದ್ರ ಅವರು ತಮ್ಮ ಕನಸಿನ ಕಡೆಗೆ ಹೆಜ್ಜೆ ಹಾಕಿದರೆ ಇನ್ನೂ ಚೆನ್ನಾಗಿರುತ್ತದೆ. ಯಡಿಯೂರಪ್ಪ ಅವರ ಹೋರಾಟವನ್ನು ನಾವ್ಯಾರೂ ನೂರು ಜನ್ಮ ಎತ್ತಿದರೂ ಮಾಡುವುದಕ್ಕೆ ಆಗುವುದಿಲ್ಲ. ಯಡಿಯೂರಪ್ಪ ಅವರಿಗೇ ಯಡಿಯೂರಪ್ಪನೇ ಸಾಟಿ. ಅದೇ ರೀತಿ ಈ ಸೋಮಣ್ಣನಿಗೆ ಸೋಮಣ್ಣನೇ ಸಾಟಿ. ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಹೀಗಾಗಿ, ಮಾತು ಕಡಮೆ ಮಾಡಿ ಕೆಲಸ ಜಾಸ್ತಿ ಮಾಡಬೇಕಾದ ಅಗತ್ಯವಿದೆ ಎಂದು ಛಾಟಿ ಬೀಸಿದರು. ಯಡಿಯೂರಪ್ಪ ಅವರು ಈ ರಾಜ್ಯದ ನಾಯಕರು. ನಾಲ್ಕು ಬಾರಿ ಮುಖ್ಯಮಂತ್ರಿಗಳಾದವರು. ಯಡಿಯೂರಪ್ಪ ಅವರ ಬಗ್ಗೆ ನಾವ್ಯಾರೂ ಎಲ್ಲಿಯೂ ಕೂಡ ಮಾತನಾಡುವವರು ಅಲ್ಲ. 

ಅವರು ನಿಮಗೆ ತಂದೆಯಾಗಿರಬಹುದು. ನಾನು ಕೂಡ ಅವರ ಗರಡಿಯಲ್ಲಿ ಸ್ವಲ್ಪ ಕಾಲ ಇದ್ದೆ. ನಾನು ಹೆಗಡೆ, ದೇವೇಗೌಡ, ಜೆ.ಎಚ್‌.ಪಟೇಲ್‌, ಎಸ್‌.ಆರ್‌.ಬೊಮ್ಮಾಯಿ ಅವರ ಗರಡಿಯಲ್ಲಿ ಬೆಳೆದಿದ್ದೇನೆ. ಯಡಿಯೂರಪ್ಪ ಅವರನ್ನು ಯಾರಾದರೂ ಕತ್ತು ಎತ್ತಿ ಮೇಲೆ ಉಗುಳಿದರೆ ಅದು ಅವರ ಮೇಲೆಯೇ ಬೀಳುತ್ತದೆ ಎಂಬ ಭಾವನೆ ನನ್ನದು. ಕೆಲವೊಂದು ಸಂದರ್ಭದಲ್ಲಿ ನಮ್ಮಂಥವರು ಆಗುತ್ತಿರುವ ಸತ್ಯ ಸಂಗತಿಯನ್ನು ಹೇಳಬೇಕಾಗುತ್ತದೆ ಎಂದು ಸೋಮಣ್ಣ ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ನಮ್ಮ ಪಕ್ಷದ ವರಿಷ್ಠರು ದೆಹಲಿಗೆ ಬರುವುದಕ್ಕೆ ಹೇಳಿದ್ದರು. ಹೋಗಿದ್ದೆ. ಹೇಳಬೇಕಾದುದನ್ನು ಹೇಳಿದ್ದೇನೆ. ಒಂದು ಪಕ್ಷದಲ್ಲಿರುವಾಗ ಅದಕ್ಕೆ ಮುಜುಗರ ಉಂಟು ಮಾಡುವ ಕೆಲಸ ಮಾಡುವುದಿಲ್ಲ. ಇಷ್ಟಕ್ಕೇ ತಿಲಾಂಜಲಿ ಇಡೋಣ ಎಂದು ಮಾತು ಮುಗಿಸಿದರು.

ಗರೀಬಿ ಹಠಾವೋದಿಂದ ಕಾಂಗ್ರೆಸ್‌ ನಾಯಕರ ಬಡತವನಷ್ಟೇ ದೂರ: ಬಿ.ವೈ.ವಿಜಯೇಂದ್ರ

ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ: ಸೋಮಣ್ಣ ಅವರನ್ನು ವರಿಷ್ಠರು ದೆಹಲಿಗೆ ಕರೆಸಿ ಮಾತುಕತೆ ನಡೆಸಿದ್ದಾರೆ. ಎಲ್ಲರೂ ಸರಿ ಹೋಗುತ್ತದೆ. ಯಾವುದೇ ಗೊಂದಲವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನು ಸೋಮಣ್ಣ ಅವರನ್ನು ಭೇಟಿ ಮಾಡಿ ಮೂರು ತಿಂಗಳಾಗಿದೆ. ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು. ವಿಜಯೇಂದ್ರನೂ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾನೆ. ಸೋಮಣ್ಣನೂ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಒಂದು ಅಂಶದ ಮೇಲೆ ಗಮನಹರಿಸಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ವಿ.ಸೋಮಣ್ಣ ಅವರು, ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕರು. ಅವರು ಯಾವಾಗ ಕರೆದರೂ ಹೋಗಿ ಭೇಟಿ ಮಾಡುತ್ತೇನೆ. ಹೇಳಬೇಕಾದುದನ್ನು ಹೇಳುತ್ತೇನೆ. ನನಗೆ ಅವರ ಬಗ್ಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದರು.

click me!