
ಬೆಂಗಳೂರು/ದಾವಣಗೆರೆ (ಮಾ.17): ಆಡಳಿತಾರೂಢ ಬಿಜೆಪಿಯು ರಾಜ್ಯದ ನಾಲ್ಕು ಕಡೆಯಿಂದ ಕೈಗೊಂಡಿರುವ ‘ವಿಜಯ ಸಂಕಲ್ಪ ಯಾತ್ರೆ’ಯ ‘ಮಹಾಸಂಗಮ’ದ ಬೃಹತ್ ಕಾರ್ಯಕ್ರಮ ಮಾ.25 ರಂದು ದಾವಣಗೆರೆಯಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಚುನಾವಣೆ ಘೋಷಣೆ ಹೊಸ್ತಿಲಲ್ಲಿ ಈ ಸಮಾವೇಶ ಹಮ್ಮಿಕೊಂಡಿರುವುದರಿಂದ ಸುಮಾರು 10 ಲಕ್ಷ ಜನರನ್ನು ಸೇರಿಸುವ ಮೂಲಕ ಯಶಸ್ವಿಗೊಳಿಸಲು ರಾಜ್ಯ ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದಾರೆ.
ಇದಕ್ಕಾಗಿ ನಗರದ ಜಿಎಂಐಟಿ ಕಾಲೇಜು ಪಕ್ಕ ಸುಮಾರು 400 ಎಕರೆ ವಿಶಾಲ ಪ್ರದೇಶದಲ್ಲಿ ವಿಶಾಲ ವೇದಿಕೆ, ಪೆಂಡಾಲ್ ನಿರ್ಮಾಣ ಮಾಡಲಾಗುತ್ತಿದ್ದು, ಗುರುವಾರ ಹಂದರಗಂಬ ಹಾಗೂ ಭೂಮಿಪೂಜೆ ನೆರವೇರಿಸಲಾಯಿತು. ಕಾಮಗಾರಿಗೆ ಶಾಸೊತ್ರೕಕ್ತವಾಗಿ ಹಾಲು-ತುಪ್ಪ ಎರೆದು, ಪೂಜೆ ನೆರವೇರಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರು ವಿಧ್ಯುಕ್ತವಾಗಿ ಸಿದ್ಧತಾ ಕಾರ್ಯಕ್ಕೆ ಚಾಲನೆ ನೀಡಿದರು.
ಬಳ್ಳಾರಿಯಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡುವುದರಿಂದ ನನಗೆ ಮತ್ತಷ್ಟು ಆನೆ ಬಲ: ಶಾಸಕ ಸೋಮಶೇಖರ್ ರೆಡ್ಡಿ
ಬಳಿಕ ಮಾತನಾಡಿದ ಅವರು, ಬಿಜೆಪಿಗೆ ಅದೃಷ್ಟದ ನೆಲವಾದ ದಾವಣಗೆರೆಯಲ್ಲಿ ಐತಿಹಾಸಿಕ ಸಮಾರಂಭಕ್ಕಾಗಿ ಶುಭ ಮುಹೂರ್ತದಲ್ಲಿ ಭೂಮಿಪೂಜೆ ನೆರವೇರಿಸಲಾಗಿದೆ. ಮೋದಿ ಪಾಲ್ಗೊಳ್ಳುವ ಈ ಸಮಾವೇಶದಲ್ಲಿ ಸುಮಾರು ಹತ್ತು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎಂದರು. ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ವೈ.ದೇವೇಂದ್ರಪ್ಪ, ಶಾಸಕ ಎಸ್.ಎ.ರವೀಂದ್ರನಾಥ, ಜಿ.ಸೋಮಶೇಖರ ರೆಡ್ಡಿ ಹಾಗೂ ಇತರ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಇದೇ ವೇಳೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಮಾವೇಶದ ಹಿಂದಿನ ದಿನವಾದ ಮಾ.24ರಂದು ದಾವಣಗೆರೆ ಸುತ್ತಮುತ್ತಲಿನ ನಾಲ್ಕು ಕ್ಷೇತ್ರಗಳಲ್ಲಿ ಬೃಹತ್ ರೋಡ್ ಶೋ ನಡೆಯಲಿದೆ. 25ರಂದು ನಮ್ಮ ಪ್ರಧಾನಿ ಮೋದಿ ಅವರು ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಭಾಷಣ ಮಾಡಲಿದ್ದಾರೆ. ಇದುವರೆಗೂ ಸೇರಿರದಷ್ಟುಜನರನ್ನ ಸೇರಿಸುವ ಗುರಿ ಇದೆ. ಅಂದಾಜು ಹತ್ತು ಲಕ್ಷ ಜನರನ್ನು ಸೇರಿಸುವ ಗುರಿ ಇದೆ. ಅದರ ಬಗ್ಗೆ ಒಂದು ಸಭೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.
ರಾಹುಲ್ ಗಾಂಧಿ ಮಕ್ಕಳಂತೆ ಇದ್ದಾರೆ ಬುದ್ಧಿ ಬೆಳೆದಿಲ್ಲ: ಶಿವರಾಜ್ ಸಿಂಗ್ ಚೌಹಾಣ್
ನಾಲ್ಕು ತಂಡಗಳ ನೇತೃತ್ವದಲ್ಲಿ ವಿಜಯಸಂಕಲ್ಪ ಯಾತ್ರೆ ಆರಂಭವಾಗಿ 15 ದಿನ ಕಳೆದಿದೆ. ನಾಲ್ಕು ಯಾತ್ರೆ ಯಾವುದೇ ತೊಂದರೆಯಾಗದೆ ಯಶಸ್ವಿಯಾಗಿ ನಡೆಯುತ್ತಿದೆ. ನಾಲ್ಕು ಯಾತ್ರೆಗಳು 151 ವಿಧಾನಸಭಾ ಕ್ಷೇತ್ರ ತಲುಪಿವೆ. 60 ಲಕ್ಷ ಜನ ಕಾರ್ಯಕರ್ತರು ಬೆಂಬಲಿಸಿ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. 335 ಎಂಎಲ್‌ಎ, ಎಂಎಲ್‌ಸಿ, ಸಂಸದರು ಭಾಗಿಯಾಗಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯದ ನಾಯಕರು, ರಥದ ಉಸ್ತುವಾರಿಗಳು ಸೇರಿ 45 ಜನ ಭಾಗಿಯಾಗಿದ್ದಾರೆ. 110 ರೋಡ್ ಶೋ, 41 ಬಹಿರಂಗ ಸಭೆ ಮಾಡಲಾಗಿದೆ. 5ರಿಂದ 45 ಸಾವಿರ ಜನಸಂಖ್ಯೆ ನಮ್ಮ ರಥಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.