ಎಸ್ಸಿ,ಎಸ್ಟಿ ಉಚಿತ ವಿದ್ಯುತ್ ಯೋಜನೆ ರದ್ದು ಆರೋಪಕ್ಕೆ ಖುದ್ದು ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು, (ಸೆಪ್ಟೆಂಬರ್.06): ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ಗಳವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಯೋಜನೆಯನ್ನು ಸ್ಥಗಿತಗೊಳಿಸಿರುವುದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಇದಕ್ಕೆ ಇಂಧನ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ಎಸ್ಸಿ,ಎಸ್ಟಿ ಉಚಿತ ವಿದ್ಯುತ್ ಗೊಂದಲ ವಿಚಾರವಾಗಿ ಮಾತನಾಡಿದ ಸುನಿಲ್ ಕುಮಾರ್, 39 ಲಕ್ಷ ಫಲಾನುಭವಿಗಳಿಗೆ ಯೋಜನೆ ಜಾರಿಯಾಗಬೇಕು. ಹಾಗಾಗಿ ಯೋಜನೆ ಜಾರಿ ಮಾಡಿದ್ದೇವೆ. ಯೋಜನೆಯನ್ನ ನಾವು ವಾಪಸ್ ಪಡೆದಿಲ್ಲ. ಕೇವಲ ನಿಯಾಮವಳಿಗಳನ್ನ ವಾಪಸ್ ಪಡೆದಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
SC, ST ಕುಟುಂಬಗಳಿಗೆ ನೀಡುವ ಉಚಿತ ವಿದ್ಯುತ್ ಯೋಜನೆ ರದ್ದಾಯ್ತಾ? ಇಲ್ಲಿದೆ ಸತ್ಯಾಸತ್ಯತೆ
ಕಾಂಗ್ರೆಸ್ ನಾಯಕರು ಆರೋಪ ಮಾಡ್ತಿದ್ದಾರೆ. ಸಿದ್ದರಾಮಯ್ಯನವರು ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ನಾನು ವಿಪಕ್ಷ ನಾಯಕರಿಗೆ ಹೇಳ್ತೇನೆ. ಅವರು 5 ವರ್ಷ ಜಂಟಿ ಸರ್ಕಾರ ಒಂದು ವರ್ಷ ಇದ್ರು. ಇಂಧನ ಇಲಾಖೆ ದಿವಾಳಿಯಲ್ಲಿ ಅವರ ಪಾತ್ರವಿದೆ. ಸಬ್ಸಿಡಿ ರೂಪದ ಹಣ ಕಾಲಕಾಲಕ್ಕೆ ಕೊಟ್ಟಿಲ್ಲ. ಇಂಧನ ಇಲಾಖೆಗೆ ಕೊಡಬೇಕಾದ ಹಣ ಕೊಟ್ಟಿಲ್ಲ ಎಂದು ಅರೋಪಿಸಿದರು.
ಹಣಕಾಸು ಸಚಿವರಾಗಿ 3470 ಕೋಟಿ ಸಬ್ಸಿಡಿ ಹಣ ಬಾಕಿ ಇಟ್ಟರು ಹೋಗಿದ್ರು. ಅವರ ಪಾಪದ ಕೂಸನ್ನ ನಾವು ಹೊತ್ತಿದ್ದೇವೆ. ನಮ್ಮ ಇಲಾಖೆಯ 3500 ಕೋಟಿ ಹೆಸ್ಕಾಂಗೆ ಕೊಡಲಿಲ್ಲ. ಮತ್ತೆ 3500 ಕೋಟಿ ಸಾಲ ಮಾಡಿದ್ರು. ಇಂಧನ ಇಲಾಖೆಯನ್ನನಷ್ಟದಲ್ಲಿ ಮುಳುಗಿಸಿದ್ರು. ಹಣಕಾಸು ಮುಗ್ಗಟ್ಟು ಎದುರಿಸುವಂತೆ ಮಾಡಿದ್ರು. ರೈತರ ಐಪಿ ಸೆಟ್ ಗೆ ಮೀಟರ್ ಅಳವಡಿಕೆ ಮುಂದಾಗಿದ್ರು. ಆ ಕಾರಣಕ್ಕೆ ಸಾಲದ ಹೊರೆ ಹೆಸ್ಕಾಂಗೆ ಹಾಕಿದ್ರು ಎಂದು ಕಿಡಿಕಾರಿದರು.
ಆರ್ ಡಿಪಿಆರ್ ನಿಂದ ಬರಬೇಕಾದ ಸಾಲವನ್ನೂ ನೀಡಲಿಲ್ಲ. ನಮ್ಮ ಸರ್ಕಾರ ಈ ಸಾಲ ತೀರಿಸಿದೆ. ಸಿಎಂ 8500 ಕೋಟಿ ನಮಗೆ ಕೊಟ್ಟಿದ್ದಾರೆ. ಇದರಲ್ಲಿ ನಾವು ಇಲಾಖೆ ಸಾಲ ಸರಿದೂಗಿಸಿದ್ದೇವೆ. ರೈತರ ಪಂಪ್ ಸೆಟ್ ಗೆ ಮೀಟರ್ ಅಳವಡಿಸಲ್ಲ. ಹೆಚ್ಚುವರಿ ರೈತರಿಗೆ ಉಚಿತ ವಿದ್ಯುತ್ ಕೊಡ್ತಿದ್ದೇವೆ. ಆದೇಶದ ಗೊಂದಲದ ಬಗ್ಗೆ ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದರು.
ಸಿದ್ದರಾಮಯ್ಯನವರ ಆರೋಪ
ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಅರ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಕಾಯ್ದೆ ತಂದಿದೆ. ಈ ಕಾಯ್ದೆ ಜಾರಿ ಆಗುವ ಮೊದಲೇ ರಾಜ್ಯ ಸರ್ಕಾರ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ತನ್ನು ನಿಲ್ಲಿಸಿದೆ. ಹಾಗೆಯೇ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಏಳಿಗೆ ಬಗ್ಗೆಯೂ ಪುಟಗಟ್ಟಲೆ ಜಾಹೀರಾತು ನೀಡಲಾಗಿತ್ತು. ಆದರೆ, ಬಿಪಿಎಲ್ ಕಾರ್ಡ್ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ಗಳವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಯೋಜನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಸೆಪ್ಟೆಂಬರ್ 3 ರಂದು ಸರ್ಕಾರ ಆದೇಶ ಹೊರಡಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.