ಕುಮಾರಸ್ವಾಮಿ ಸರ್ಕಾರದಲ್ಲಿ ಏನು ವರ್ಗಾವಣೆಗಳು ಆಗಿಲ್ಲವೆ? ಕುಮಾರಸ್ವಾಮಿ ಏನು ಸತ್ಯ ಹರಿಶ್ಚಂದ್ರರೇ? ಅವರು ಒಂದೂ ವರ್ಗಾವಣೆ ಮಾಡಿಲ್ಲವೇ ಎಂದು ಎಚ್ಡಿಕೆ ವಿರುದ್ಧ ಕಿಡಿ ಕಾರಿದ ಸಚಿವ ದರ್ಶನಾಪುರ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವರ್ಗಾವಣೆ ಮಾಡುವದು ಸಹಜ ಪ್ರಕ್ರಿಯೆ. ಅದರಂತೆ ಆಗಿದೆ ಎಂದು ವರ್ಗಾವಣೆಗಳನ್ನು ಸಮರ್ಥಿಸಿಕೊಂಡ ಸಚಿವ ಶರಣಬಸಪ್ಪಗೌಡ ದರ್ಶನಾಪುರ
ಯಾದಗಿರಿ(ಆ.11): ಸರ್ಕಾರದ ವರ್ಗಾವಣೆ ದಂಧೆ ಮಹತ್ವದ ದಾಖಲೆ ಇದೆ ಎಂದು ಪೆನ್‌ಡ್ರೈವ್ ಪ್ರದರ್ಶಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಚಾರ ಸುಳ್ಳು ಬಾಂಬಿನಂತೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾತಿನ ತಿರುಗೇಟು ನೀಡಿದರು.
‘ಗೃಹಜ್ಯೋತಿ’ ಕಾರ್ಯಕ್ರಮ ಉದ್ಘಾಟನೆ ಹಿನ್ನೆಲೆಯಲ್ಲಿ ಗುರುವಾರ ಯಾದಗಿರಿಗೆ ಆಗಮಿಸಿದ್ದ ಅವರು ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತ, ಮಾಜಿ ಸಿಎಂ ಎಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರದ ವರ್ಗಾವಣೆ ದಂಧೆಯ ಮಹತ್ವದ ದಾಖಲೆ ಪೆನ್‌ಡ್ರೈವ್ ಇದೆ ಎಂದು ಪ್ರದರ್ಶನ ಮಾಡಿದರು. ಎಲ್ಲಿದೆ ಆ ಪೆನ್‌ಡ್ರೈವ್ ಎಂದು ಪ್ರಶ್ನಿಸಿದ ಸಚಿವ ದರ್ಶನಾಪುರ, ಅಂತಹುದ್ದೇನಾದರೂ ಇದ್ದರೆ ರಾಜ್ಯಪಾಲರಿಗೆ ಅಥವಾ ಪ್ರಧಾನಿಗೆ ನೀಡಿದರೆ ತನಿಖೆ ನಡೆಸುತ್ತಾರಲ್ಲ ಎಂದು ಪ್ರಶ್ನಿಸಿದರು. ಎಚ್ಡಿಕೆ ಅವರು ಪೆನ್‌ಡ್ರೈವ್ ತೋರಿಸಿ ಸುಳ್ಳು ಬಾಂಬ್ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪೊಲೀಸರ ವೇತನಕ್ಕೆ ಅನುದಾನದ ಕೊರತೆ, ಗ್ಯಾರಂಟಿ ಯೋಜನೆಗೆ ರಾಜ್ಯದ ಖಜಾನೆ ಖಾಲಿ?
ಕುಮಾರಸ್ವಾಮಿ ಸರ್ಕಾರದಲ್ಲಿ ಏನು ವರ್ಗಾವಣೆಗಳು ಆಗಿಲ್ಲವೆ? ಕುಮಾರಸ್ವಾಮಿ ಏನು ಸತ್ಯ ಹರಿಶ್ಚಂದ್ರರೇ? ಅವರು ಒಂದೂ ವರ್ಗಾವಣೆ ಮಾಡಿಲ್ಲವೇ ಎಂದು ಎಚ್ಡಿಕೆ ವಿರುದ್ಧ ಕಿಡಿ ಕಾರಿದ ಸಚಿವ ದರ್ಶನಾಪುರ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವರ್ಗಾವಣೆ ಮಾಡುವದು ಸಹಜ ಪ್ರಕ್ರಿಯೆ. ಅದರಂತೆ ಆಗಿದೆ ಎಂದು ವರ್ಗಾವಣೆಗಳನ್ನು ಸಮರ್ಥಿಸಿಕೊಂಡರು. ಬಿಜೆಪಿಯಲ್ಲಿ ವಿಪಕ್ಷ ನಾಯಕನಾಗುವ ಸಮರ್ಥ ನಾಯಕರು ಇಲ್ಲ. ಹೀಗಾಗಿ ಕುಮಾರಸ್ವಾಮಿ ಅವರಿಗೆ ವಿರೋಧ ಪಕ್ಷದ ನಾಯಕ ಮಾಡುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆದಿದೆ ಎಂದು ದರ್ಶನಾಪುರ ಹೇಳಿದರು.
ಜೆಪಿಗೆ ಸೋಲಿನ ಭೀತಿ:
ಮುಂಬುರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸೋಲಿನ ಭೀತಿ ಎದುರಿಸುತ್ತಿದೆ. 27 ಸ್ಥಾನಗಳಲ್ಲಿ 2-3 ಸೀಟುಗಳು ಬರುತ್ತವೆಂದು ಬಿಜೆಪಿಗೆ ಭಯ ಶುರುವಾಗಿದೆ. ಸೋಲಿನ ಭೀತಿ ಹಿನ್ನೆಲೆ ಬಿಜೆಪಿಯು ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದ ದರ್ಶನಾಪುರ, ಈ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎಂದರು.
ಬೋಗಸ್ ಬಿಲ್:
ಗುತ್ತಿಗೆದಾರರಿಂದ ಕಮೀಷನ್ ಕೇಳಿರುವ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವ ದರ್ಶನಾಪುರ, ಬಿಜೆಪಿ ಆಡಳಿತಾವಧಿಯಲ್ಲಿ ಬಿಬಿಎಂಪಿಯಲ್ಲಿ 118 ಕೋಟಿ ರು. ಬೋಗಸ್ ಬಿಲ್ ಎತ್ತಲಾಗಿತ್ತು. ಇದನ್ನು ಅಧಿಕಾರಕ್ಕೆ ಬಂದ ನಂತರ ಡಿಕೆಶಿ ಕಂಡು ಹಿಡಿದಿದ್ದಾರೆ. ಇದು ಬಯಲಿಗೆ ಬರಬಹುದು ಎಂಬ ಕಾರಣಕ್ಕೆ ಆರೋಪಗಳನ್ನು ಮಾಡಲಾಗುತ್ತಿದೆ. ಕೆಲಸ ಎಲ್ಲಿ ಕಳಪೆ ಆಗಿವೆಯೋ ಅಲ್ಲಿ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ ಅವರು ಹೇಳಿರುವುದರಲ್ಲಿ ತಪ್ಪಿಲ್ಲ ಎಂದರು. ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ್ ಹಾಗೂ ಯಾದಗಿರಿ ಶಾಸಕ ಚೆನ್ನಾರೆಡ್ಡಿಗೌಡ ಪಾಟೀಲ್ ತುನ್ನೂರು ಉಪಸ್ಥಿತರಿದ್ದರು.