ಬಿಜೆಪಿ, ಜೆಡಿಎಸ್ ಗಳಲ್ಲಿ ಗುಂಪಿರುವ ಹಾಗೆ ಸ್ವಾಭಾವಿಕವಾಗಿ ನಮ್ಮಲ್ಲೂ ಗುಂಪಿದೆ. ಇಲ್ಲಾ ಅಂತೇನಿಲ್ಲ. ಜಿಲ್ಲೆಯಲ್ಲಿ ನಮ್ಮದು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರದು ಬೇರೆ, ಬೇರೆ ಗುಂಪು ಇದ್ದರೂ ಚುನಾವಣೆ ಬಂದಾಗ ಒಂದಾಗುತ್ತೇವೆ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ(ಅ.22): ಜಿಲ್ಲೆಯಲ್ಲಿ ಈಗಲೂ ಬೇರೆ, ಬೇರೆ ಗುಂಪುಗಳಿವೆ, ಇಲ್ಲ ಎನ್ನುವುದಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಗುಂಪು ಮತ್ತು ನಮ್ಮ ಗುಂಪು ಬೇರೆ, ಬೇರೆ ಇರಬಹುದು. ಆದರೆ, ಚುನಾವಣೆ ಬಂದಾಗ ನಾವೆಲ್ಲರೂ ಒಂದೇ ಎನ್ನುವ ಮೂಲಕ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇರುವುದನ್ನು ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ, ಜೆಡಿಎಸ್ ಗಳಲ್ಲಿ ಗುಂಪಿರುವ ಹಾಗೆ ಸ್ವಾಭಾವಿಕವಾಗಿ ನಮ್ಮಲ್ಲೂ ಗುಂಪಿದೆ. ಇಲ್ಲಾ ಅಂತೇನಿಲ್ಲ. ಜಿಲ್ಲೆಯಲ್ಲಿ ನಮ್ಮದು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರದು ಬೇರೆ, ಬೇರೆ ಗುಂಪು ಇದ್ದರೂ ಚುನಾವಣೆ ಬಂದಾಗ ಒಂದಾಗುತ್ತೇವೆ ಎಂದು ಹೇಳಿದರು.
undefined
ಬಿಜೆಪಿ ಶಾಸಕರಿಂದ ಬ್ಲಾಕ್‌ಮೇಲ್ ತಂತ್ರ: ಸಚಿವ ಸತೀಶ ಜಾರಕಿಹೊಳಿ
ಜಿಲ್ಲೆಯಲ್ಲಿ ಈಗಲೂ ತಾವು ಸ್ಟ್ರಾಂಗಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನಾವು ಸ್ಟ್ರಾಂಗೂ ಇರಲ್ಲಾ, ವೀಕೂ ಇರಲ್ಲಾ. ಪಕ್ಷ ಅಧಿಕಾರಕ್ಕೆ ಬರಲು ನನ್ನ ಜತೆ ಸಾವಿರಾರು, ಲಕ್ಷಾಂತರ ಕಾರ್ಯಕರ್ತರ ಪಾತ್ರವಿದೆ’ ಎಂದರು.
ಮೈಸೂರು ಪ್ರವಾಸ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಪ್ರವಾಸ ಹೋಗುವುದು ಇನ್ನೊಂದು ಪವರ್ ಸೆಂಟರ್ ಮಾಡುವ ಉದ್ದೇಶದಿಂದಲ್ಲ. ಸಮಾನ ಮನಸ್ಕರು ಇದ್ದೆ ಇರುತ್ತಾರೆ. ಅವರ ಜೊತೆ ಪ್ರವಾಸಕ್ಕೆ ಹೋಗುತ್ತೇವೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಬೇರೆ ಬಣವನ್ನಾಗಲಿ, ಬೇರೆ ಗುಂಪನ್ನಾಗಲಿ ಮಾಡಬೇಕು ಎನ್ನುವ ಉದ್ದೇಶ ಇದರ ಹಿಂದೆ ಇಲ್ಲ ಎಂದರು.
ಮುಂದೆ ಬೆಳಗಾವಿ ಅಧಿವೇಶನಕ್ಕೆ ಬಂದಾಗ ಶಾಸಕರು ಗೋವಾ, ಕೊಲ್ಲಾಪುರ ಸೇರಿದಂತೆ ಬೇರೆ ಕಡೆ ಪ್ರವಾಸಕ್ಕೆ ಹೋಗುತ್ತಾರೆ. ನಮ್ಮ ಜತೆಗೆ ಅವರು ಊಟಕ್ಕೂ ಬರುತ್ತಾರೆ. ಆಗಲೂ ಅದಕ್ಕೆ ಬೇರೆ ರೀತಿಯ ಅರ್ಥ ಬರಬಹುದು. ಆದರೆ, ಪಕ್ಷ ಅಂತ ಬಂದಾಗ ಎಲ್ಲರೂ ಒಂದೇ ಆಗುತ್ತಾರೆ. ಅದೇ ರೀತಿ ನಮ್ಮದು ಕೂಡ ಎಂದರು.
‘ಸಂದೇಶ ರವಾನೆ ಮಾಡಬೇಕಿತ್ತು, ಸಂದೇಶ ರವಾನೆ ಆಯ್ತಾ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಂದೇಶ ಏನೂ ಇಲ್ಲ. ನಾವೆಲ್ಲ ಕೂಡಿ ಇದ್ದೇವೆ. ಪಕ್ಷದಲ್ಲಿ ಯಾವ ಗೊಂದಲ ಇಲ್ಲ. ಚಮಕ್ ಕೊಟ್ಟು ಮುಂದುವರಿಸಬೇಕು ಅಷ್ಟೆ. ಮೆಜಾರಿಟಿ ಜನ ನಮ್ಮ ಜತೆಗೆ ಇರುತ್ತಾರೆ. ಇದಕ್ಕೆ ಬೇರೆ ರೀತಿ ಅರ್ಥ ಕಲ್ಪಿಸುವ ಕೆಲಸ ಬೇಡ. ಸಿಎಂ ಇದ್ದಾರೆ, ಅಧ್ಯಕ್ಷರಿದ್ದಾರೆ, ಸಮಸ್ಯೆ ಇದ್ದರೆ ಅವರ ಗಮನಕ್ಕೆ ತರುತ್ತೇವೆ ಎಂದರು.
ಸತೀಶ ಜಾರಕಿಹೊಳಿಯವರ ಮೌನ ಮಿಸ್ ಯೂಸ್ ಆಗುತ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹಾಗೆನಿಲ್ಲ. ವರ್ಗಾವಣೆ ವಿಚಾರದಲ್ಲಿ ನಾವು ಸೀರಿಯಸ್ ಆಗಿರಲ್ಲ. ಯಾವ ಅಧಿಕಾರಿಗಳಿದ್ದರೂ ಕೆಲಸ ಮಾಡುತ್ತೇವೆ. ಯಾರೇ ಇದ್ದರೂ ಸರ್ಕಾರದ ಪರವಾಗಿ ಕೆಲಸ ಮಾಡಬೇಕು. ಸರ್ಕಾರದಲ್ಲಿ ಎಲ್ಲವೂ ನಾವು ಹೇಳಿದಂತೆ ಆಗಬೇಕಂತಿಲ್ಲ, ಒಂದೊಂದು ಸಲ ಫೇಲ್ ಆಗುತ್ತೆ. ಎಲ್ಲರ ಮಾತನ್ನೂ ನಾಯಕರು ಕೇಳಬೇಕಾಗುತ್ತೆ ಎಂದರು.
‘ನನ್ನ ಮೌನ ನನ್ನ ವೀಕ್ನೆಸ್ ಅಲ್ಲಾ’ ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರದ್ದು, ನಮ್ಮದು ಏನೂ ಇಲ್ಲ. ಸುತ್ತಿ ಬಳಸಿ ಯಾಕೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ತೆಗೆಯುತ್ತೀರಾ?. ಲಕ್ಷ್ಮೀ ಹೆಬ್ಬಾಳ್ಕರ್‌ಗೆ ವಿರೋಧ ಮಾಡೋದಾದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಗೆ ವಿರೋಧ ಮಾಡುತ್ತಿರಲಿಲ್ಲ ಎಂದರು.
ಸತ್ತ ಮೇಲೆ ನಮ್ಮ ಹೆಣಗಳು ಬಿಜೆಪಿಗೆ ಹೋಗಲ್ಲ: ಶಾಸಕ ರಾಜು ಕಾಗೆ
ಬೆಳಗಾವಿಯಿಂದ ಸರ್ಕಾರ ಬೀಳುತ್ತೆ ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ನಮ್ಮ ಸರ್ಕಾರ ಇದ್ದೆ ಇರುತ್ತೆ. ಯಾವುದೇ ಸಂದರ್ಭದಲ್ಲಿ ಸರ್ಕಾರ ಬೀಳಲ್ಲ. ಸ್ವಲ್ಪ ಗಾಳಿ ಬಿಟ್ಟಾಗ ವಿಮಾನ ಅಲಗಾಡುತ್ತೆ. ಈಗ ಅಲುಗಾಡಿ ಶಾಂತವಾಗಿದೆ. ರಾಜಕೀಯದಲ್ಲಿ ಎಲ್ಲವೂ ನಡೆಯುತ್ತೆ ಎಂದರು.
ಚಮಕ್ ಕೊಟ್ಟು ಮುಂದೆ ಹೋಗಬೇಕು ಅಷ್ಟೆ!
ನಾವು ಸ್ಟ್ರಾಂಗೂ ಇರಲ್ಲ, ವೀಕೂ ಇರಲ್ಲ. ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ. ಚಮಕ್ ಕೊಟ್ಟು ಮುಂದುವರಿಯಬೇಕು ಅಷ್ಟೆ. ಸ್ವಲ್ಪ ಗಾಳಿ ಬಿಟ್ಟಾಗ ವಿಮಾನ ಅಲುಗಾಡುತ್ತೆ. ಈಗ ಅಲುಗಾಡಿ ಶಾಂತವಾಗಿದೆ. ರಾಜಕೀಯದಲ್ಲಿ ಎಲ್ಲವೂ ನಡೆಯುತ್ತೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.