ಡಿನ್ನರ್‌ ಪಾರ್ಟಿ ಸಿಎಂ ಖುರ್ಚಿಗಲ್ಲ, ಬಿಜೆಪಿಗೆ ಕೆಲಸ ಇಲ್ಲ: ಸತೀಶ ಜಾರಕಿಹೊಳಿ

By Kannadaprabha News  |  First Published Jan 8, 2025, 10:36 AM IST

ಪರಮೇಶ್ವರ್‌ ಅವರು ಶೋಷಿತ ಸಮುದಾಯದ ಸಚಿವ, ಶಾಸಕರನ್ನು ಊಟಕ್ಕೆ ಕರೆದಿದ್ದಾರೆ. ಈಗ ಅವಕಾಶ ಇದೆ ಹೋಗ್ತೇವೆ. ಅಷ್ಟಕ್ಕೂ ದಲಿತ ಮುಖ್ಯಮಂತ್ರಿ ವಿಚಾರ ಈಗ ಅಪ್ರಸ್ತುತ ಎಂದ ಸಚಿವ ಸತೀಶ ಜಾರಕಿಹೊಳಿ


ಬೀದರ್‌(ಜ.08):  ಡಿನ್ನರ್‌ ಪಾರ್ಟಿ ಮಾಡಿದ್ದು ಮುಖ್ಯಮಂತ್ರಿ ಗದ್ದುಗೆ ವಿಷಯಕ್ಕಲ್ಲ. ವಿಪಕ್ಷಗಳ ಕೈಯಲ್ಲಿ ಯಾವ ಅಸ್ತ್ರವೂ ಇಲ್ಲ, ಸುಮ್ನೆ ಹೇಳಬೇಕು ಅಂತಾ ಹೇಳ್ತಾರೆ. ಮೊನ್ನೆಯಷ್ಟೆ ಮೂರು ಚುನಾವಣೆ ಸೋತಿದ್ದಾರೆ, ಬಿಜೆಪಿ ಅವರಿಗೆ ಕೆಲಸ ಇಲ್ಲ ಅಷ್ಟೆ‌ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಬೀದರ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ, ಅಧ್ಯಕ್ಷರು, ಜಿ.ಪರಮೇಶ್ವರ್‌ ಎಲ್ಲರೂ ಕರೀತಾರೆ ಹಾಗಾದ್ರೆ ನಾವ್ಯಾರು ಊಟಕ್ಕೆ ಹೊಗಬಾರದಾ ಎಂದು ಪ್ರಶ್ನಿಸಿ, ಪರಮೇಶ್ವರ್‌ ಅವರು ಶೋಷಿತ ಸಮುದಾಯದ ಸಚಿವ, ಶಾಸಕರನ್ನು ಊಟಕ್ಕೆ ಕರೆದಿದ್ದಾರೆ. ಈಗ ಅವಕಾಶ ಇದೆ ಹೋಗ್ತೇವೆ. ಅಷ್ಟಕ್ಕೂ ದಲಿತ ಮುಖ್ಯಮಂತ್ರಿ ವಿಚಾರ ಈಗ ಅಪ್ರಸ್ತುತ ಎಂದರು.

Tap to resize

Latest Videos

ಮಂತ್ರಿಗಳಿಂದ ಸರಣಿ ಔತಣ: ಕಾಂಗ್ರೆಸ್‌ ಬಣ ರಾಜಕಾರಣ ಉಲ್ಬಣ!

140 ಜನ ಶಾಸಕರ ಆನೆ ಬಲ ನಮಗಿದೆ. ಸರ್ಕಾರ ಸುಭದ್ರವಾಗಿದೆ. ಡಿನ್ನರ್‌ ಪಾರ್ಟಿ ವಿಚಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ದೆಹಲಿಗೆ ತೆರಳಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೇ ಸ್ಪಷ್ಟನೆ ನೀಡಿದ್ದಾರೆ ಮತ್ತೇನೂ ನಾನು ಹೇಳಲು ಬಯಸಲ್ಲ ಎಂದರು.

2028ಕ್ಕೆ ನಾನೇ ಮುಖ್ಯಮಂತ್ರಿ ಎಂಬ ಹೇಳಿಕೆ ವಿಚಾರವಾಗಿ ಜಾರಕಿಹೊಳಿ ಪ್ರತಿಕ್ರಿಯಿಸಿ ಯುದ್ಧಕ್ಕೂ ಮೊದಲೇ ಸೈನಿಕರನ್ನು ಸಿದ್ಧತೆ ಮಾಡ್ತಾರೆ ಹಾಗೆಯೇ ಒಂದೆರಡು ತಿಂಗಳು ಮೊದಲೇ ತಯಾರಿ ಮಾಡಬೇಕಲ್ಲಾ? ಅದಕ್ಕಾಗಿಯೇ ಹಾಗೇ ಹೇಳಿದ್ದೇನೆ ಹೊರತು ಅದು ಈಗಿನದ್ದಕ್ಕಲ್ಲ ಎಂದು ಜಾರಕಿಹೊಳಿ ತಿಳಿಸಿದರು.

ಅವೈಜ್ಞಾನಿಕ ರಸ್ತೆ ಸರಿಪಡಿಸಲು ಸಚಿವರ ಸೂಚನೆ

ಯಾದಗಿರಿ:  ಯಾದಗಿರಿಯಿಂದ ತೆಲಂಗಾಣ ರಾಜ್ಯಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ರಾಮಸಮುದ್ರ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಲಾಗಿದ್ದು, ತೆಲಂಗಾಣಕ್ಕೆ ಹೋಗಲು ರಾಮಸಮುದ್ರ ವ್ಯಾಪ್ತಿಯಲ್ಲಿ ಕಿರಿದಾದ ರಸ್ತೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರತ್ಯೇಕ ಇಳಿಜಾರು ರಸ್ತೆ ರೂಪಿಸುವ ಕುರಿತಂತೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸೂಚಿಸಿದರು.

ಯಾದಗಿರಿಗೆ ಭೇಟಿ ನೀಡಿದ್ದ ಅವರು, ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ವೇಳೆ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಈ ಕುರಿತು ಅಧಿಕಾರಿಗಳೊಡನೆ ಸಭೆ ನಡೆಸಿದರು.

ಪುನರ್‌ ಟೆಂಡರ್‌ ಕರೆಯಲು ಸೂಚನೆ:

ಯಾದಗಿರಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪುನರ್ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಜಾರಕಿಹೊಳಿ, ಯಾದಗಿರಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ 136.29 ಕೋಟಿ ರು.ಗಳ ಅನುದಾನ ಮಂಜೂರು ಆಗಿದೆ. 104.04 ಕೋಟಿ ರು.ಗಳ ಅನುದಾನಕ್ಕೆ ಟೆಂಡರ್ ನಿಗದಿಪಡಿಸಿದ್ದರೆ, 68.99 ಕೋಟಿ ರು.ಗಳಿಗೆ ಗುತ್ತಿಗೆದಾರರು ಹಣ ನಿಗದಿಪಡಿಸಿದ್ದಾರೆ. 2023 ರಲ್ಲಿ ತಾಂತ್ರಿಕ ಬಿಡ್ ತೆರೆಯಲಾಗಿದೆ. ಒಟ್ಟು 8.75 ಕಿ.ಮೀ. ಉದ್ದದ ರಸ್ತೆಗೆ ಈಗಾಗಲೇ ವಿಳಂಬ ಆಗಿರುವ ಹಿನ್ನೆಲೆಯಲ್ಲಿ, ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಪುನರ್ ಟೆಂಡರ್ ಕರೆಯುವ ಬಗ್ಗೆ ಚಿಂತನೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿರು. ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದೆಂದು ಅವರು ಹೇಳಿದರು.

ಅದರಂತೆ, ಯಾದಗಿರಿ ಹತ್ತಿಗೂಡೂರು, ಹತ್ತಿಗೂಡೂರ- ತಿಂಥಣಿ, ಬೋರಬಂಡಾ, ಹತ್ತಿಕುಣಿ, ರಸ್ತೆಗಳ ದುರಸ್ತಿಗೆ ಸೂಕ್ತ ಗಮನ ನೀಡುವಂತೆ ತಿಳಿಸಿದ ಅವರು ಯಾದಗಿರಿ ನಗರದ ಹಳೆ ಪ್ರವಾಸಿ ಮಂದಿರ ತೆರವುಗೊಳಿಸಿ ನೂತನ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ ಯಾದಗಿರಿ, ಹುಣಸಗಿ, ಸುರಪುರಗಳಲ್ಲಿ ಹೆಲಿಪ್ಯಾಡ್ ನಿರ್ಮಾಣದ ಪ್ರಸ್ತಾವನೆಗಳು, ರಾಜ್ಯ ಹೆದ್ದಾರಿ ಭೂ ಗಡಿ ನಿಗದಿಪಡಿಸಲು ಸರ್ವೆಕಾರ್ಯ ಪ್ರಗತಿ, ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿನ ರಸ್ತೆಗಳ ದುರಸ್ತಿಗೆ ಸಂಬಂಧ ಪಟ್ಟಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ವಾರ್ಷಿಕ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ 753.99 ಕಿ.ಮೀ ಉದ್ದದ ರಸ್ತೆ ನಿರ್ವಹಣೆ ಮಾಡಲಾಗುತ್ತಿದೆ. ಬಾಕಿ ಉಳಿದ ರಸ್ತೆಗಳ ನಿರ್ವಹಣಾ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೊಳ್ಳುವಂತೆ ಸೂಚನೆ ನೀಡಿ, ರಸ್ತೆಗಳಲ್ಲಿನ ಗುಂಡಿಗಳ ದುರಸ್ತಿಗೆ ಸೂಕ್ತ ಗಮನ ನೀಡುವಂತೆ ಸೂಚನೆ ನೀಡಿದರು.

ಕಾಂಗ್ರೆಸ್‌ನಲ್ಲಿ ಗೊಂದಲ ಇದೆಯಾ?: ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಿಷ್ಟು

ಗುರುಮಠಕಲ್‌ ಪಟ್ಟಣದ ಬೈಪಾಸ್ ರಸ್ತೆ ಹಾಗೂ ಸುರಪುರ ತಾಲೂಕಿನ ಹುಣಸಗಿ ಪಟ್ಟಣಕ್ಕೆ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿಗಳ ಪ್ರಸ್ತಾವನೆಗಳ ಬಗ್ಗೆ ಸಚಿವರು ಮಾಹಿತಿ ಪಡೆದು, ರಾಷ್ಟ್ರೀಯ ಹೆದ್ದಾರಿ 150, ಕಲಬುರಗಿ, ವಾಡಿ, ಯಾದಗಿರಿ, ಕಡೇಚೂರು, ತೆಲಂಗಾಣ ಗಡಿ ಹಾಗೂ ರಾಷ್ಟ್ರೀಯ ಹೆದ್ದಾರಿ-150 ಎ, ಜೇವರ್ಗಿ, ಚಾಮರಾಜನಗರ ರಸ್ತೆ, ಸೇರಿದಂತೆ ಏಕಪಥ ರಸ್ತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಜಿಲ್ಲೆಯ ವಿವಿಧ ರಸ್ತೆಗಳ ಸಮಸ್ಯೆಗಳ ಬಗ್ಗೆ ಸಚಿವ ಜಾರಕಿಹೊಳಿ ಅವರ ಗಮನಕ್ಕೆ ತಂದರು.

ಸಭೆಯಲ್ಲಿ ಯಾದಗಿರಿ ಶಾಸಕರಾದ ಚೆನ್ನಾರಡ್ಡಿ ಪಾಟೀಲ ತುನ್ನೂರ್, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಜಿಲ್ಲಾ ಪಂಚಾಯತ್‌ ಸಿಇಓ ಲವೀಶ ಒರಡಿಯಾ, ಎಸ್ಪಿ ಪೃಥ್ವಿಕ್ ಶಂಕರ್, ಮುಖ್ಯ ಅಭಿಯಂತರ ಶರಣಪ್ಪ ಸುಲುಗುಂಟೆ ರಾಷ್ಟ್ರೀಯ ಹೆದ್ದಾರಿ ಮುಖ್ಯ ಅಭಿಯಂತರ ಮನ್ಮಥಯ್ಯ ಸ್ವಾಮಿ, ಯಾದಗಿರಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಅಭಿಮನ್ಯು ಸೇರಿದಂತೆ ಲೋಕೋಪಯೋಗಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

click me!