
ಬೆಂಗಳೂರು(ಜ.08): ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಪಕ್ಷದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಯತ್ನಾಳ ಬಣದ ಮುಖಂಡರು ವಕ್ಫ್ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಬಳಿಕ ವಿಜಯೇಂದ್ರ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಆದರೆ, ಕುತೂಹಲದ ಸಂಗತಿ ಎಂದರೆ ಯತ್ನಾಳ ಅವರೇ ಈ ಭೇಟಿ ವೇಳೆ ಉಪಸ್ಥಿತರಿರಲಿಲ್ಲ. ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ ಮತ್ತಿತರರು ಇದ್ದರು ಎನ್ನಲಾಗಿದೆ.
ಕರ್ನಾಟಕ ಗಂಡಸರು ಕಾಂಗ್ರೆಸ್‌ಗೆ ಮತ ಹಾಕಬೇಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ
ವಿಜಯೇಂದ್ರ ಅವರು ಪಕ್ಷದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿಲ್ಲ. ತಮ್ಮ ಆಪ್ತರನ್ನು, ಬೆಂಬಲಿಗರನ್ನು ಮಾತ್ರ ಜತೆಗೆ ಕರೆದೊಯ್ಯುತ್ತಾರೆ. ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸುವುದಿಲ್ಲ. ಇದು ಪಕ್ಷದ ಸಂಘಟನೆ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಜತೆಗೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಸರ್ಕಾರದ ವೈಫಲ್ಯಗಳ ವಿರುದ್ಧದ ಹೋರಾಟ ತಾರ್ಕಿಕ ಅಂತ್ಯಕ್ಕೆ ತಲುಪುತ್ತಿಲ್ಲ. ಕೇವಲ ಮಾಧ್ಯಮಗಳ ಹೇಳಿಕೆ, ಪ್ರಸಾರಕ್ಕೆ ಮಾತ್ರ ಸೀಮಿತವಾಗುತ್ತಿದೆ ಎಂದು ಯತ್ನಾಳ ಬಣದ ಮುಖಂಡರು ಅಮಿತ್ ಶಾ ಎದುರು ದೂರಿನ ಸುರಿಮಳೆಗೈದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಕ್ಫ್ ಹೋರಾಟಕ್ಕೆ ಸಚಿವ ಶಾ ಮೆಚ್ಚುಗೆ
ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಯತ್ನಾಳ ಬಣದ ಹೋರಾಟಕ್ಕೆ ಬಿಜೆಪಿಯ ಪ್ರಭಾವಿ ರಾಷ್ಟ್ರೀಯ ನಾಯಕರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೆಚ್ಚುಗೆ ಸೂಚಿಸಿದ್ದಾರೆ ಎನ್ನಲಾಗಿದೆ. ತಾವು ನಡೆಸಿದ ವಕ್ಖ್ ಹೋರಾಟ ಕುರಿತ ಎಲ್ಲ ಮಾಹಿತಿಯನ್ನು ನೀಡಿದ ಯತ್ನಾಣ ಬಣದ ಮುಖಂಡರು ಅದಕ್ಕೆ ಸಂಬಂಧಿಸಿದಂತೆ ಡಿಜಿಟಲ್ ದಾಖಲೆಯನ್ನೂ ನೀಡಿದರು. ಇದನ್ನು ಪರಿಶೀಲಿಸಿದ ಅಮಿತ್ ಶಾ ಅವರು ಈ ಹೋರಾಟವನ್ನು ತಾಲೂಕು ಮಟ್ಟದಲ್ಲೂ ಮುಂದುವರೆಸುವಂತೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.