ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಔತಣಕೂಟದ ಬೆನ್ನಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಏರ್ಪಡಿಸಿದ್ದ ದಲಿತ ಸಚಿವರು ಹಾಗೂ ಶಾಸಕರ ಔತಣಕೂಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರಬಲ ವಿರೋಧದ ಪರಿಣಾಮ ಹೈಕಮಾಂಡ್ ಬ್ರೇಕ್ ಹಾಕುವ ಮೂಲಕ ಕಾಂಗ್ರೆಸ್‌ನ ಬಣ ರಾಜಕಾರಣ ಬೀದಿಗೆ ಬಿದ್ದಿದೆ.
ಬೆಂಗಳೂರು(ಜ.08): ಬೂದಿ ಮುಚ್ಚಿದ ಕೆಂಡದಂತಿದ್ದ ಕಾಂಗ್ರೆಸ್ ಬಣ ರಾಜಕಾರಣ ಸತತವಾಗಿ ಆಯೋಜನೆಗೊಳ್ಳುತ್ತಿರುವ ಔತಣಕೂಟ ರಾಜಕಾರಣದ ನೆಪದಲ್ಲಿ ಉಲ್ಬಣಗೊಂಡಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಔತಣಕೂಟದ ಬೆನ್ನಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಏರ್ಪಡಿಸಿದ್ದ ದಲಿತ ಸಚಿವರು ಹಾಗೂ ಶಾಸಕರ ಔತಣಕೂಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರಬಲ ವಿರೋಧದ ಪರಿಣಾಮ ಹೈಕಮಾಂಡ್ ಬ್ರೇಕ್ ಹಾಕುವ ಮೂಲಕ ಕಾಂಗ್ರೆಸ್‌ನ ಬಣ ರಾಜಕಾರಣ ಬೀದಿಗೆ ಬಿದ್ದಿದೆ.
ಚಿತ್ರದುರ್ಗದ ದಲಿತ ಸಮಾವೇಶದ ನಿರ್ಣಯಗಳ ಕುರಿತ ಚರ್ಚೆ ಹಾಗೂ ದಲಿತ ಪರ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ನೀತಿಗೆ ಧನ್ಯವಾದ ಅರ್ಪಿಸಲು ಸಮಾವೇಶ ನಡೆಸುವ ಬಗ್ಗೆ ಚರ್ಚಿಸಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬುಧವಾರ ನಗರದಲ್ಲಿ ದಲಿತ ಸಚಿವರು ಹಾಗೂ ಶಾಸಕರ ಔತಣ ಕೂಟ ಹಾಗೂ ಸಭೆಯನ್ನು ಆಯೋಜಿಸಿದ್ದರು.
ಕಾಂಗ್ರೆಸ್‌ನಲ್ಲಿ ಗೊಂದಲ ಇದೆಯಾ?: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು
ಈ ಮಾಹಿತಿ ಮಂಗಳವಾರ ಬೆಳಗ್ಗೆ ಬಹಿರಂಗಗೊಳ್ಳುತ್ತಿದ್ದಂತೆ ವಿದೇಶದಿಂದ ಆಗಮಿಸಿ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದರು. ಈ ಭೇಟಿ ವೇಳೆ ಶಿವಕುಮಾರ್ ಯಾವ ವಿಚಾರ ಚರ್ಚಿಸಿದರು ಎಂಬುದು ಬಹಿರಂಗಗೊಂಡಿಲ್ಲ. ಆದರೆ ಈ ಭೇಟಿಯ ನಂತರ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಡಾ.ಜಿ.ಪರಮೇಶ್ವರ್ ಅವರನ್ನು ಸಂಪರ್ಕಿಸಿದ್ದಾರೆ. ಇದರ ಬೆನ್ನಲ್ಲೇ ಡಾ.ಜಿ.ಪರಮೇಶ್ವರ್ ಅವರು ಪತ್ರಿಕಾ ಹೇಳಿಕೆಯೊಂದನ್ನು ಹೊರಡಿಸಿ ದಲಿತ ಸಚಿವರು, ಶಾಸಕರು ಹಾಗೂ ಮುಖಂಡರ ಸಭೆಯನ್ನು ಸುರ್ಜೇವಾಲಾ ಅವರ ಸೂಚನೆ ಪ್ರಕಾರ ಮುಂದೂಡಲಾಗಿದ್ದು, ಮುಂದಿನ ದಿನಾಂಕ ನಂತರದಲ್ಲಿ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಪರಮೇಶ್ವರ್ ಅವರು ಈ ಸಭೆ ಆಯೋಜನೆಯ ಉದ್ದೇಶ ಚಿತ್ರದುರ್ಗ ಸಮಾವೇಶದ ನಿರ್ಣಯಗಳ ಜಾರಿ ಬಗ್ಗೆ ಚರ್ಚಿಸುವುದು ಹಾಗೂ ಸರ್ಕಾರಕ್ಕೆ ಧನ್ಯವಾದ ಸಮಾವೇಶ ಆಯೋಜಿಸಿ ಆ ಸಮಾವೇಶಕ್ಕೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸುವ ಕುರಿತು ಚರ್ಚಿಸುವುದಾಗಿದೆ ಎಂದು ಖುದ್ದು ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದರೆ, ಈ ಸಮಾವೇಶದ ಆಯೋಜನೆ ಹಿಂದೆ ಭವಿಷ್ಯದಲ್ಲಿ ನಡೆಯಬೇಕಿದೆ ಎನ್ನಲಾಗುವ ಅಧಿಕಾರ ಹಸ್ತಾಂತರ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ದಲಿತ ಸಮುದಾಯದ ಹಿತ ಕಾಯುವ ಕಾರ್ಯತಂತ್ರಗಳನ್ನು ರೂಪಿಸುವ ತಂತ್ರಗಾರಿಕೆ ಇದೆ ಎಂದೇ ಕಾಂಗ್ರೆಸ್ ಮತ್ತೊಂದು ಬಣ ಪರಿಗಣಿಸಿದೆ.
ಮುಖ್ಯಮಂತ್ರಿ ದಲಿತ ಮುಖ್ಯಮಂತ್ರಿ ಬೇಡಿಕೆ ಮುನ್ನೆಲೆಗೆ ತರುವ ಆರಂಭದ ಪ್ರಯತ್ನವಿದು ಎಂದೇ ಈ ಬಣ ವ್ಯಾಖ್ಯಾನಿಸುತ್ತಿದೆ. ಬೆಳಗಾವಿ ಎಐಸಿಸಿ ಅಧಿವೇಶನದ ವೇಳೆ ತಮ್ಮನ್ನು ನಿರ್ಲಕ್ಷಿಸಿದ ಬಗ್ಗೆ ಬೇಸರಗೊಂಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಇತ್ತೀಚೆಗಷ್ಟೇ ಔತಣಕೂಟ ಆಯೋಜಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿದೇಶ ಪ್ರವಾಸದ ಸಂದರ್ಭದಲ್ಲಿ ನಡೆದ ಈ ಕೂಟದಲ್ಲಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಭಾಗಿಯಾಗಿದ್ದರು.
ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಣವನ್ನು ಕಂಗೆಡಿಸಿತ್ತು. ಇದರ ಬೆನ್ನಲ್ಲೇ ದಲಿತ ಮುಖ್ಯಮಂತ್ರಿ ಬೇಡಿಕೆ ಹುಟ್ಟುಹಾಕುವ ಸಾಧ್ಯತೆಯಿರುವ ದಲಿತ ಸಚಿವರು ಹಾಗೂ ಶಾಸಕರ ಸಭೆ ಕೂಡ ಆಯೋಜನೆಯಾಗುತ್ತಿರುವುದು ತಮ್ಮ ವಿರೋಧಿ ಬಣ ಪ್ರಬಲವಾಗಿ ಸಂಘಟಿತವಾಗುತ್ತಿರುವ ಸಂಕೇತ ಎಂದೇ ಈ ಬಣ ಭಾವಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಈ ವ್ಯಾಖ್ಯಾನಗಳಿಗೆ ಪೂರಕವಾಗಿ ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿ.ಕೆ.ಶಿವಕುಮಾರ್ ಅವರು ಬುಧವಾರ ಹೈಕಮಾಂಡ್ ವರಿಷ್ಠರಾದ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಸುರ್ಜೇವಾಲ ದಲಿತ ಸಚಿವರ ಸಭೆಗೆ ಬ್ರೇಕ್ ಹಾಕಿದ್ದಾರೆ.
ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗ್ಬೇಕು, ಜಾರಕಿಹೊಳಿ ಸಿಎಂ ಆದ್ರೆ ಸ್ವಾಗತ, ಜೆಡಿಎಸ್ ಶಾಸಕ ಕಂದಕೂರ
ಇದು ಕಾಂಗ್ರೆಸ್‌ನ ಬಣ ರಾಜಕಾರಣ ಬಹಿರಂಗಗೊಂಡು ಕ್ರಮೇಣ ತಾರಕಕ್ಕೇರುವ ಸನ್ನಿವೇಶ ಸೃಷ್ಟಿಸುವ ಬೆಳವಣಿಗೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಡಿನ್ನರ್ ರಾಜಕೀಯ
- ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆಶಿ ವಿದೇಶ ಪ್ರವಾಸದಲ್ಲಿದ್ದಾಗ ಡಿನ್ನರ್ ಪಾಲಿಟಿಕ್ಸ್
- ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದು ಸೇರಿ ಹಲವು ಸಚಿವರಿಂದ ಡಿನ್ನರ್ ಸಭೆ
- ಆ ಸಭೆಯ ಕುರಿತು ನಾನಾ ಚರ್ಚೆ. ಡಿಸಿಎಂ ಡಿಕೆಶಿ ಬಣ ನಾಯಕರಲ್ಲಿ ತೀವ್ರ ಅಸಮಾಧಾನ
- ಇದರ ಬೆನ್ನಲ್ಲೇ ಗೃಹ ಸಚಿವ ಪರಂರಿಂದ ದಲಿತ ಸಚಿವ, ಶಾಸಕರಿಗೆ ಔತಣಕೂಟ ಆಯೋಜನೆ
- ತಮ್ಮ ವಿರೋಧಿ ಬಣ ಪ್ರಬಲವಾಗುತ್ತಿದೆ ಎಂದರಿತ ಡಿಕೆಶಿ ಬಣ. ಅತ್ತ ದಿಲ್ಲಿಯಲ್ಲಿ ಡಿಕೆಶಿ ದೂರು
- ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಭೇಟಿ ಮಾಡಿ ಮಾತುಕತೆ ನಡೆಸಿದ ಡಿಕೆಶಿ
- ಬೆನ್ನಲ್ಲೇ ರಣದೀಪ್ ಸುರ್ಜೇವಾಲಾ ಪ್ರವೇಶ. ಪರಮೇಶ್ವರ್‌ಗೆ ಕರೆ ಮಾಡಿದ ಎಐಸಿಸಿ ನಾಯಕ
- ಔತಣ ಕೂಟ ಸಭೆಯನ್ನು ಮುಂದೂಡಿರುವುದಾಗಿ ಪ್ರಕಟಣೆ ಹೊರಡಿಸಿದ ಡಾ। ಜಿ. ಪರಮೇಶ್ವರ್
ಪರಂ ಔತಣ ಸಭೆ ಏಕೆ?
- ಚಿತ್ರದುರ್ಗದಲ್ಲಿ ನಡೆದಿದ್ದ ಸಮಾವೇಶ ನಿರ್ಣಯಗಳ ಜಾರಿ ಬಗ್ಗೆ ದಲಿತ ನಾಯಕರ ಜತೆ ಸಭೆ ನಡೆಸುವ ಚಿಂತನೆ
- ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಮಾವೇಶ ಆಯೋಜಿಸಿ ರಾಹುಲ್ ಗಾಂಧಿ ಆಹ್ವಾನಿಸುವ ಬಗ್ಗೆ ಮಾತುಕತೆ ಉದ್ದೇಶ
- ಈ ಕುರಿತು ಸ್ವತಃ ಮಾಧ್ಯಮಗಳಿಗೆ ತಿಳಿಸಿದ್ದ ಗೃಹ ಸಚಿವ ಪರಮೇಶ್ವರ್. ಆದರೆ ಅಸಲಿ ಕಾರಣ ಬೇರೆ ಇತ್ತೆನ್ನಲಾಗಿದೆ
- ಅಧಿಕಾರ ಹಸ್ತಾಂತರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವೇಳೆ ದಲಿತ ಹಿತ ಕಾಯುವ ರಣತಂತ್ರ ಸಭೆ ಇದಾಗಿತ್ತೆನ್ನಲಾಗಿದೆ
- ಜತೆಗೆ ದಲಿತ ಮುಖ್ಯಮಂತ್ರಿ ಬೇಡಿಕೆಯನ್ನು ಮುನ್ನೆಲೆಗೆ ತರುವ ಪ್ರಮುಖ ಉದ್ದೇಶವಿತ್ತು ಎಂಬ ವ್ಯಾಖ್ಯಾನವಿದೆ
ಸುರ್ಜೇವಾಲಾ ಸೂಚನೆ ಪ್ರಕಾರ ಸಭೆ ಮುಂದಕ್ಕೆ
ಬುಧವಾರ ನಿಗದಿಯಾಗಿದ್ದ ದಲಿತ ಸಚಿವರು, ಶಾಸಕರು ಹಾಗೂ ಮುಖಂಡರ ಸಭೆಯನ್ನು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರ ಸೂಚನೆ ಪ್ರಕಾರ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಎಂದು ಗೃಹ ಸಚಿವ ಡಾ। ಜಿ. ಪರಮೇಶ್ವರ್ ತಿಳಿಸಿದ್ದಾರೆ.