ಡೈರೆಕ್ಟರ್, ಪ್ರೊಡ್ಯೂಸರ್ ಫೇಲಾದರೆ ಇಂಥ ಫಲಿತಾಂಶ: ಸತೀಶ್‌ ಜಾರಕಿಹೊಳಿ

By Kannadaprabha NewsFirst Published Jun 6, 2024, 10:28 PM IST
Highlights

ಚುನಾವಣೆಗೆ ಸಮಯ ಕಡಿಮೆ ಇರುತ್ತದೆ. ಆ ಸಮಯದಲ್ಲಿ ನಾವು ಹೆಚ್ಚು ಅಲರ್ಟ್ ಆಗಿರಬೇಕು. ಇಲ್ಲವಾದರೆ ಚುನಾವಣೆ ಬಂದು ಹೋಗುತ್ತದೆ. ನಮ್ಮ ನಾಯಕರು ಹಲವು ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದು ಚುನಾವಣೆಯಲ್ಲಿ ನಮ್ಮ ಹಿನ್ನಡೆಗೆ ಮುಖ್ಯ ಕಾರಣ ಎಂದ ಸಚಿವ ಸತೀಶ್‌ ಜಾರಕಿಹೊಳಿ 

ಗೋಕಾಕ(ಜೂ.06): ಡೈರೆಕ್ಟರ್, ಪ್ರೊಡ್ಯೂಸರ್ ಫೇಲಾದರೆ ಈ ರೀತಿಯ ಫಲಿತಾಂಶ ನಿರೀಕ್ಷಿತ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಪಕ್ಷ ನಿರೀಕ್ಷಿತ ಫಲಿತಾಂಶ ಪಡೆಯುವಲ್ಲಿ ವಿಫಲವಾಗಿದ್ದಕ್ಕೆ ನಾಯಕರೇ ಕಾರಣ ಎಂದು ಪರೋಕ್ಷವಾಗಿ ಹೇಳಿದರು.

ನಗರದ ಡಾಲರ್ಸ್‌ ಕಾಲೋನಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಗೆ ಸಮಯ ಕಡಿಮೆ ಇರುತ್ತದೆ. ಆ ಸಮಯದಲ್ಲಿ ನಾವು ಹೆಚ್ಚು ಅಲರ್ಟ್ ಆಗಿರಬೇಕು. ಇಲ್ಲವಾದರೆ ಚುನಾವಣೆ ಬಂದು ಹೋಗುತ್ತದೆ. ನಮ್ಮ ನಾಯಕರು ಹಲವು ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದು ಚುನಾವಣೆಯಲ್ಲಿ ನಮ್ಮ ಹಿನ್ನಡೆಗೆ ಮುಖ್ಯ ಕಾರಣ ಎಂದು ತಿಳಿಸಿದರು.

Latest Videos

ಕಾಂಗ್ರೆಸ್‌ ಶಾಸಕನ ವಿರುದ್ಧವೇ ಗುಡುಗಿದ ಸಚಿವ ಸತೀಶ್ ಜಾರಕಿಹೊಳಿ

ಕೆಲವೆಡೆ ನಮ್ಮ ಪಕ್ಷದ ಕೆಲ ಶಾಸಕರೇ ನಮಗೆ ವಿರೋಧ ಮಾಡಿದರು. ಹಾಗಾಗಿ ನಮ್ಮ ಗೆಲುವಿನ ಅಂತರ ಸ್ವಲ್ಪ ಕಡಿಮೆ ಆಗಿದೆ. ಇಲ್ಲದಿದ್ದರೆ ಈ ಅಂತರ ಇನ್ನಷ್ಟು ಹೆಚ್ಚು ಆಗುತ್ತಿತ್ತು. ವಿರೋಧ ಮಾಡಿದವರ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುವುದಿಲ್ಲ, ಬದಲಾಗಿ ಜನರ ಮತ್ತು ಹೈಕಮಾಂಡ್ ಗಮನಕ್ಕೆ ತರುತ್ತೇವೆ ಎಂದರು.

ಅವರವರ ಮತಕ್ಷೇತ್ರಗಳಲ್ಲಿಯೇ ಮತಗಳು ಕಡಿಮೆ ಬಂದ ಪರಿಣಾಮ ಅನೇಕ ಕಡೆ ನಮ್ಮ ಅಭ್ಯರ್ಥಿಗಳು ಅಲ್ಪಮತಗಳ ಅಂತರದಿಂದ ಸೋತಿದ್ದಾರೆ. ಸೋಲು-ಗೆಲುವು ಜನರ ಕೈಯಲ್ಲಿರುತ್ತದೆ. ಜನ ಹೋದ ಬಾರಿ ನಮ್ಮನ್ನು ಸೋಲಿಸಿದರು, ಈ ಬಾರಿ ಗೆಲ್ಲಿಸಬೇಕೆಂದು ಮನಸ್ಸು ಮಾಡಿದ ಪರಿಣಾಮ ನಾವು ಗೆದ್ದಿದೇವೆ ಎಂದರು.

5 ಲಕ್ಷ ಲಿಂಗಾಯತರು ಇದ್ದರೂ ಸೋಲು: 

ಬೆಳಗಾವಿ ಕ್ಷೇತ್ರದ ಸೋಲಿನಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ ಸತೀಶ್‌ ಜಾರಕಿಹೊಳಿ, 5 ಲಕ್ಷ ಲಿಂಗಾಯತರಿದ್ದರೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಮೃಣಾಲ್‌ ಸೋತಿದ್ದಾರೆ. ಅದಕ್ಕೆ ಅವರೇ ಉತ್ತರ ನೀಡಬೇಕೇ ಹೊರತು ನಾವಲ್ಲ. ವಿರೋಧಿ ಗಾಳಿ ಬೀಸಿದರೆ ಯಾರು ಏನು ಮಾಡಲೂ ಆಗುವುದಿಲ್ಲ ಎಂದು ತಿಳಿಸಿದರು.

ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿಕೊಟ್ಟ ಜಾರಕಿಹೊಳಿ ಕುಟುಂಬದ ಕುಡಿ..!

ಬೆಳಗಾವಿಯಲ್ಲಿ ನಾವು ನಮ್ಮ ವಿರೋಧಿ ಅಭ್ಯರ್ಥಿ ತಿಳಿದುಕೊಳ್ಳುವಲ್ಲಿ ವಿಫಲವಾದ ಪರಿಣಾಮ ಸೋಲು ಅನುಭವಿಸಬೇಕಾಯಿತು. ವಿರೋಧಿಗಳ ಕಾರ್ಯತಂತ್ರ, ಮತದಾರರ ಒಲವು ಎಲ್ಲವೂ ಕ್ರೋಢೀಕರಿಸಿ ಕೆಲ ನಿರ್ಣಯ ತಗೆದುಕೊಳ್ಳಬೇಕಾಗುತ್ತದೆ. ಅದರಲ್ಲಿ ನಮ್ಮ ಪಕ್ಷ ಎಡವಿದೆ. ಜಾರಕಿಹೊಳಿ ಕುಟುಂಬದ ಬೆಂಬಲಿಗರು ಮತ್ತು ಮತದಾರರು ಎಲ್ಲ ಪಕ್ಷದಲ್ಲೂ ಇದ್ದಾರೆ. ಆದರೆ ಸೋಲು-ಗೆಲುವು ಜನರ ನಿರ್ಧಾರ ಎಂದು ಸ್ಪಷ್ಟಪಡಿಸಿದರು.

ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಜನ ಗೆಲ್ಲಿಸಲೇಬೇಕೆಂದು ನಿರ್ಧಾರ ಮಾಡಿದ್ದರಿಂದ ಚಿಕ್ಕೋಡಿ ಕ್ಷೇತ್ರದಲ್ಲಿ ನಮ್ಮ ಗೆಲುವು ಸುಲಭವಾಯಿತು. ನಾವು ಚುನಾವಣೆ ಬಂದಾಗ ಮಾತ್ರ ತಯಾರಿ ಶುರು ಮಾಡುವುದಿಲ್ಲ, ಬದಲಾಗಿ ನಿರಂತರ ಜನರೊಂದಿಗೆ ಬೆರೆತು ಅವರ ಕಷ್ಟಗಳಿಗೆ ಸ್ವಂದಿಸುತ್ತೇವೆ. ಮುಂದಿನ 5 ವರ್ಷ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ಹೋಗಿ ಅವರ ಕಷ್ಟಗಳಿಗೆ ಸ್ವಂದಿಸುವ ಕಾರ್ಯ ಮಾಡುತ್ತೇವೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

click me!