
ಬೆಳಗಾವಿ (ನ.17): ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಚರ್ಚೆ ನಡೆಯುತ್ತಿದ್ದು, ಚರ್ಚೆಗೆ ಯಾವುದೇ ಕಡಿವಾಣವಿಲ್ಲ. ಆದರೆ, ಅಂತಿಮವಾಗಿ ಅಧ್ಯಕ್ಷ ಸ್ಥಾನವನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ ಹನುಮಣ್ಣವರ ಕೆಎಸ್‌ಆರ್ಟಿಸಿಯ ಉಪಾಧ್ಯಕ್ಷರಾಗಿದ್ದರು. ಹೀಗಾಗಿ, ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೀವಾಲಾ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದೇವೆ ಅಷ್ಟೇ.
ರಾಜಕೀಯವಾಗಿ ಯಾವುದೇ ಚರ್ಚೆ ನಡೆದಿಲ್ಲ ಎಂದರು.ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟದ ಬಗ್ಗೆ ಏನು ಚರ್ಚೆ ಮಾಡಿದ್ದಾರೆ ಗೊತ್ತಿಲ್ಲ. ಸಚಿವ ಸಂಪುಟದ ವಿಸ್ತರಣೆ ನಮ್ಮ ಕೈಯಲ್ಲಿ ಇಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಹೇಳಬೇಕು. ಅಂದಾಗಲೇ ಗೊಂದಲಗಳಿಗೆ ಫುಲ್ ಸ್ಟಾಪ್ ಬೀಳಲಿದೆ. ಇಲ್ಲಾಂದ್ರೆ ಊಹಾಪೋಹ ಇರುತ್ತದೆ ಎಂದು ಹೇಳಿದರು.
ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ವರಿಷ್ಠರು ಎಲ್ಲವನ್ನು ಗಮನಿಸುತ್ತಿದ್ದು, ಅವರು ಏನು ತೀರ್ಮಾಣ ಮಾಡುತ್ತಾರೋ ನೋಡೋಣ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ರಾಜು ಕಾಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿರುವ ವಿಚಾರ ಅದು ಅವರ ವೈಯಕ್ತಿಕ ವಿಚಾರ. ಅದು ಪಕ್ಷದ ವಿಚಾರವಲ್ಲ. ಬೆಳಗಾವಿಯಲ್ಲಿ ಅಧಿವೇಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನಾವು ಅದರ ತಯಾರಿಯಲ್ಲಿದ್ದೇವೆ ಎಂದು ಹೇಳಿದರು.
ಇವಿಎಂ ವಿಚಾರವಾಗಿ ಮಾತನಾಡಿ ಇವಿಎಂ ಬಗ್ಗೆ ಮೊದಲಿನಿಂದಲೂ ಎಲ್ಲರೂ ಅನುಮಾನ ಪಡುತ್ತಿದ್ದಾರೆ. ಅದರ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ಕೊಡುವವರಿಗೆ ಅನುಮಾನ ಇದ್ದೇ ಇರುತ್ತದೆ. ಇವಿಎಂ ಹ್ಯಾಕ್ ಆಗಲ್ಲ ಅಂತ ಕೇಂದ್ರ ಸರ್ಕಾರ ಹಾಗು ಚುನಾವಣಾ ಆಯೋಗ ಸ್ಪಷ್ಟನೆ ಕೊಡಬೇಕು. ಸ್ಪಷ್ಟಿಕರಣ ನೀಡುವವರು ಚುನಾವಣೆ ಆಯೋಗದವರೇ ಆಗಿರುವುದರಿಂದ ಅವರೇ ಇದಕ್ಕೆ ಇತಿಶ್ರೀ ಹೇಳಬೇಕು ಎಂದು ತಿಳಿಸಿದರು.
ರಾಣಿ ಚನ್ನಮ್ಮ ಮೃಗಾಲಯದಲ್ಲಿ 29 ಕೃಷ್ಣಮೃಗಗಳು ರೋಗದಿಂದ ಸಾವನ್ನಪ್ಪಿವೆ ಎಂಬ ಪ್ರಥಮ ವರದಿ ಬಂದಿದೆ. ಅದಕ್ಕೆ ಸಂಬಂಧಿಸಿದಂತೆ ತಜ್ಞವೈದ್ಯರು ಬಂದು ಸಾವು ಹೇಗೆ ಆಯಿತು ಅಂತ ವರದಿ ನೀಡಿದ ಮೇಲೆ ನೋಡೋಣ. ಅರಣ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತ ಕ್ರಮ ಕೈಗೊಂಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ನುರಿತ ತಜ್ಞರು ವರದಿ ಕೊಟ್ಟ ಮೇಲೆ ಗೊತ್ತಾಗುತ್ತದೆ. ನಾವು ಹೇಳಲು ಆಗಲ್ಲ ಅರಣ್ಯ ಸಚಿವರು ತನಿಖೆಗೆ ಆದೇಶ ಮಾಡಿದ್ದಾರೆ ಎಂದು ತಿಳಿಸಿದರು.
ಬಿಹಾರ ಚುನಾವಣೆಯಲ್ಲಿ ನಮ್ಮ ಲೆಕ್ಕಾಚಾರ ತಪ್ಪಾಗಿದೆ. ಅಸ್ಸೇಸ್ ಮಾಡುವಲ್ಲಿ ತಪ್ಪಿರಬಹುದು, ಯಾವುದು ಏನು ಅಂತ ಲೆಕ್ಕಾಚಾರದಲ್ಲಿ ತಪ್ಪಿದ್ದೇವೆ. ಗ್ರೌಂಡ್ ಸ್ಟಡಿ ಮಾಡಬೇಕು, ನಾವು ಅಲ್ಲಿಂದ ದೂರ ಇದ್ದೇವೆ. ಬಿಹಾರ ಚುನಾವಣೆ ಬಗ್ಗೆ ಬಹಳಷ್ಟು ಆಸೆ ಇಟ್ಟುಕೊಂಡಿದ್ದೇವು. ಆದರೆ, ನಮ್ಮ ಲೆಕ್ಕಾಚಾರ ತಪ್ಪಾಯಿತು. ಅಲ್ಲದೇ, ಹರಿಯಾಣದಲ್ಲೂ ಸೋತಿದ್ದೇವೆ, ಚುನಾವಣೆಯಲ್ಲಿ ಇದೆಲ್ಲ ನಡೆಯುತ್ತದೆ.
-ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.